ಬಾಗಲಕೋಟೆ: ರೈಲು ಹೋದ ಮೇಲೆ ಟಿಕೆಟ್ ತಗೊಂಡ್ರಂತೆ. ಹಾಗೆಯೇ ಪ್ರತಿ ವರ್ಷವೂ ನೀರು ಸದ್ಭಳಕೆ ವಿಷಯದಲ್ಲಿ ನಮ್ಮ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ ಎಂಬ ಮಾತು ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ.
ಹೌದು, ನೀರಿನಲ್ಲೇ ಮುಳುಗಿದ ಊರಿಗೆ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ ಎಂದರೆ ನಂಬಲೇಬೇಕು. ಇದಕ್ಕೆ ನೀರಿನ ವಿಷಯದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾಮಾನ್ಯ ಜನರು ಎಷ್ಟೊಂದು ಕಾಳಜಿ ವಹಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ.
ಜಲದಿನದಂದು ಮಾತ್ರ ಕಾಳಜಿ ಬೇಡ: ವಿಶ್ವ ಜಲ ದಿನಾಚರಣೆ ಸೇರಿದಂತೆ ಕೆಲವೇ ಕೆಲವು ದಿನಗಳಂದು ಮಾತ್ರ ನೀರಿನ ಸದ್ಭಳಕೆ, ನೀರು ಉಳಿಸಿ, ಮುಂದಿನ ಜೀವ ಸಂಕುಲ ಉಳಿಸಿ ಎಂಬ ಘೋಷಣೆಗಳು ಕೇಳಿ ಬರುತ್ತವೆ. ಆದರೆ, ನೀರು ಇದ್ದಾಗಲೇ ಅದನ್ನು ಹಿಡಿದಿಟ್ಟು, ಭೂಮಿಯೊಳಗೆ ಇಂಗಿಸಿದರೆ ಅಂತರ್ಜಲ ಹೆಚ್ಚುತ್ತದೆ. ಬೇಸಿಗೆಯಲ್ಲಿ ಒಂದೇ ಕೊಳವೆ ಬಾವಿ ಕೊರೆಸಿದರೂ ನೀರು ಲಭ್ಯವಾಗುತ್ತದೆ. ವಿಫಲಗೊಳ್ಳುವ ಕೊಳವೆ ಬಾವಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಿನ ಪ್ರಯತ್ನಕ್ಕೆ ಮುಂದಾದರೆ, ಅದೇನು ದೊಡ್ಡ ಸವಾಲೇನಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ 232 ಕೆರೆಗಳು: ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಬರುವ 64 ಕೆರೆಗಳು, ಜಿ.ಪಂ. (ಆರ್‌ಡಿಪಿಆರ್) ವ್ಯಾಪ್ತಿಯ 168 ಕೆರೆಗಳು ಇವೆ. ಶೇ.25ರಿಂದ 30ರಷ್ಟು ಕೆರೆಗಳು ಕಾಲುವೆ, ನದಿಯ ಪಕ್ಕದಲ್ಲಿವೆ. ಇನ್ನೂ ಕೆಲವು ಕೆರೆಗಳು, ಕೇವಲ 2ರಿಂದ 4 ಕಿ.ಮೀ. ಅಂತರದಲ್ಲಿವೆ. ಅವುಗಳಿಗೆ ಸದ್ಯ ನೀರು ತುಂಬಿಸಿಕೊಳ್ಳಲು ಸದಾವಕಾಶವಿದೆ. ಆ ನಿಟ್ಟಿನಲ್ಲಿ ಮನಸ್ಸು ಮಾಡಬೇಕು. ಒಂದಷ್ಟು ಶ್ರಮ ಹಾಕಬೇಕು. ಆ ನಿಟ್ಟಿನಲ್ಲಿ ಗಟ್ಟಿ ಪ್ರಯತ್ನಗಳು ನಡೆದರೆ, ಜಿಲ್ಲೆಯ ಬಹುತೇಕ 50ರಿಂದ 55 ಕೆರೆಗಳನ್ನು ಯಾವುದೇ ಖರ್ಚಿಲ್ಲದೇ ತುಂಬಿಸಿಕೊಳ್ಳಲು ಅವಕಾಶವಿದೆ ಎಂಬುದು ನೀರಾವರಿ ತಜ್ಞರ ಅಭಿಪ್ರಾಯ.
ಸದ್ಯ 27 ಕೆರೆಗಳು ಮಾತ್ರ: ಕೆರೆಗಳನ್ನು ತುಂಬಿಸಲೆಂದೇ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿದೆ. ಮುಚಖಂಡಿ, ಶಿರೂರ ಜೋಡಿ ಕೆರೆ, ಬೀಳಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಳಸಕೊಪ್ಪ ಸಹಿತ 7 ಕೆರೆ, ಮುಧೋಳ ಮತ್ತು ಜಮಖಂಡಿ ತಾಲೂಕಿನ 17 ಕೆರೆಗಳನ್ನು ಸದ್ಯ ತುಂಬಿಸುವ ಪ್ರಕ್ರಿಯೆ ನಡೆದಿದೆ. ಮುಧೋಳ ಮತ್ತು ಜಮಖಂಡಿ ತಾಲೂಕಿನ ಕೆರೆಗಳು ಕಾಲುವೆ ಮೂಲಕವೇ ತುಂಬಿಕೊಳ್ಳಲಾಗುತ್ತದೆ. ಘಟಪ್ರಭಾ, ಕೃಷ್ಣಾ ನದಿಗೆ ನೀರು ಬಂದರೆ, ಮುಧೋಳ-ಜಮಖಂಡಿ ಭಾಗದ ಕೆಲ ಕೆರೆಗಳಿಗೆ ನೀರು ತುಂಬಿಸುವುದು ಕೆಲವು ವರ್ಷಗಳಿಂದ ನಡೆದಿದೆ.
ಕಳೆದ 2017ರಿಂದ ಮುಚಖಂಡಿ ಕೆರೆ, ಶಿರೂರ ಜೋಡಿ ಕೆರೆ ತುಂಬಿಸಲಾಗುತ್ತಿದೆ. ಬಾಗಲಕೋಟೆ ನಗರದ ಸುತ್ತ ಹರಡಿಕೊಂಡಿರುವ ಆಲಮಟ್ಟಿ ಹಿನ್ನೀರನ್ನು ಈ ಮೂರು ಕೆರೆಗಳಿಗೆ ತುಂಬಿಸಲಾಗುತ್ತಿದೆ.
ಕಾಲುವೆ-ನದಿ-ಹಳ್ಳದ ಪಕ್ಕ ಕೆರೆಗಳು: ಜಿಲ್ಲೆಯಲ್ಲಿ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆ, ಮಲಪ್ರಭಾ ಎಡದಂಡೆ ಕಾಲುವೆ, ತಿಮ್ಮಾಪುರ ಏತ ನೀರಾವರಿ, ರಾಮಥಾಳ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಏರ ನೀರಾವರಿ ಯೋಜನೆಗಳ ಕಾಲುವೆಗಳು ಜಿಲ್ಲೆಯಲ್ಲಿವೆ. ಮಲಪ್ರಭಾ ಎಡದಂಡೆ ಕಾಲುವೆಯಿಂದ ಆಡಗಲ್, ಕೆಂದೂರ ಕೆರೆ, ಮಲಪ್ರಭಾ ಕಾಲುವೆಯ ನೀರಿನ್ನು ಸರಸ್ವತಿ ಹಳ್ಳಕ್ಕೆ ಹರಿಸಿದರೆ, ಐತಿಹಾಸಿಕ ಬನಶಂಕರಿ ಹೊಂಡ ತುಂಬಿಸಲು ಸಾಧ್ಯವಿದೆ. ಹೀಗೆ ಹಲವು ಕೆರೆಗಳು, ನದಿ, ಕಾಲುವೆ ಹಾಗೂ ಹಳ್ಳಗಳ ಪಕ್ಕದಲ್ಲೇ ಇವೆ. ಅವುಗಳನ್ನು ಬೇಸಿಗೆಯಲ್ಲಿ ಡ್ಯಾಮ್‌ನಿಂದ ನೀರು ಬಿಡಿಸಿಕೊಂಡು ಕೆರೆ, ಹೊಂಡ ತುಂಬಿಸಿಕೊಳ್ಳುವ ಬದಲು, ಮಳೆಗಾಲದಲ್ಲೇ ಕೆರೆಗಳನ್ನು ಭರ್ತಿ ತುಂಬಿಸಿಕೊಂಡರೆ, ಅಂತರ್ಜಲ ಹೆಚ್ಚುತ್ತದೆ ಎಂಬುದು ಹಲವರ ಅಭಿಪ್ರಾಯ.
ಪ್ರಶಸ್ತಿ ಘೋಷಿಸಲಿ: ನೀರು, ಕೆರೆಗಳ ಬಗ್ಗೆ ಜನರಲ್ಲಿ ಪ್ರಜ್ಞೆ ಇಲ್ಲ. ಬೇಸಿಗೆಯಲ್ಲಿ ಮಾತ್ರ ಈ ಕುರಿತು ಅಲ್ಲಲ್ಲಿ ಕೂಗು ಕೇಳಿ ಬರುತ್ತದೆ. ಹೀಗಾಗಿ ಜಿಲ್ಲಾಡಳಿತ ಸ್ವಯಂ ಪ್ರೇರಣೆಯಿಂದ ಅಭಿಯಾನವೊಂದನ್ನು ಆರಂಭಿಸಬೇಕು. ಇದಕ್ಕೆ ಸಮುದಾಯದ ಸಹಭಾಗಿತ್ವ ಪಡೆಯಬೇಕು. ನದಿ, ಕಾಲುವೆ, ಹಳ್ಳಗಳ ಪಕ್ಕದಲ್ಲಿ ಇರುವ ಕೆರೆಗಳನ್ನು ಯಾವ ಪಂಚಾಯಿತಿ, ಸಂಘ-ಸಂಸ್ಥೆ ಅಥವಾ ಇಲಾಖೆ ಅಧಿಕಾರಿಗಳು ವಿಶೇಷ ಮುತೂವರ್ಜಿ ವಹಿಸಿ ತುಂಬಿಸುತ್ತಾರೋ ಅವರಿಗೆ ಜಿಲ್ಲಾಡಳಿತದಿಂದ ವಿಶೇಷ ಪ್ರಶಸ್ತಿ, ಇಲ್ಲವೇ ಪ್ರಸಂಶನೀಯ ಗೌರವ ಕೊಡಲು ಮುಂದಾಗಬೇಕು. ಇದಕ್ಕೆ ಜಿಲ್ಲೆಯ ಕೈಗಾರಿಕೋದ್ಯಮಿಗಳು, ಸಂಘ-ಸಂಸ್ಥೆಗಳು, ಉದ್ಯಮಿಗಳು, ವೈದ್ಯರು ಹೀಗೆ ಹಲವರ ಪ್ರಾಯೋಜಕತ್ವ ಪಡೆಯಬೇಕು. ಅದಕ್ಕೂ ಮುಂಚೆ ಜಿಲ್ಲೆಯ ಯಾವ ಕಾಲುವೆ ಪಕ್ಕ ಎಷ್ಟು ಕೆರೆಗಳಿವೆ?, ಆ ಕೆರೆ ತುಂಬಿಸಲು ಏನು ಮಾಡಬೇಕು? ಎಂಬುದನ್ನು ತಕ್ಷಣ ಸಮೀಕ್ಷೆ ನಡೆಸಬೇಕು. ಈ ಮಳೆಗಾಲ ಮುಗಿಯುವುದರೊಳಗೆ ಅಂತಹ ಕೆರೆ ತುಂಬಿಸಲು ಮುಂದಾಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
• ಶ್ರೀಶೈಲ ಕೆ. ಬಿರಾದಾರ