ಶಹಾಪುರ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡಬೇಕಾದ ಸಹಾಯಧನ ಅರ್ಜಿ ಸ್ವೀಕಾರಕ್ಕಾಗಿ ಪ್ರತಿ ಹಳ್ಳಿಗಳಿಗೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ರೈತರ ದಾಖಲಾತಿಗಳನ್ನು ಸಂಗ್ರಹ ಮಾಡಬೇಕು. ಇದಕ್ಕೆ ಜೂನ್ 27ರಂದು ಕೊನೆ ದಿನ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅಧಿಕಾರಿಗಳಿಗೆ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ರೈತರಿಂದ ಅರ್ಜಿ ಪಡೆದುಕೊಳ್ಳುವ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ದಾಖಲಾತಿಗಳನ್ನು ಪಡೆದುಕೊಂಡರೆ, ಕಾರ್ಯದರ್ಶಿಗಳು ಗ್ರಾಮ ಲೇಖಪಾಲಕರು, ಕೃಷಿ ಸಹಾಯಕರು, ಕೃಷಿ ಅನುವುದಾರರು ಈ ಯೋಜನೆಯಡಿಯಲ್ಲಿ ಕಾರ್ಯ ಪ್ರವೃತ್ತರಾಗಬೇಕು.
ಪ್ರತಿ ಹಳ್ಳಿಗಳಲ್ಲಿ ರೈತರು ಸೇರುವ ಸಾರ್ವತ್ರಿಕ ಸ್ಥಳಗಳಲ್ಲಿ ರೈತರೊಂದಿಗೆ ಸಂಪರ್ಕಸಿ ಅವರಿಂದ ಕಿಸಾನ್ ಯೋಜನೆಯ ವಿಸ್ತಾರಗಳನ್ನು ಪ್ರಸ್ತಾಪಿಸಿಕೊಂಡು ಅವರಿಂದ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಚಾಲನೆಯಲ್ಲಿರುವ ಮೊಬೈಲ್ ನಂಬರಗಳನ್ನು ಸಹ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಈ ಕಾರ್ಯಯೋಜನೆಯ ಕುರಿತು ಕಾಲ ಕಾಲಕ್ಕೆ ಸಂಕ್ಷಿಪ್ತ ಮಾಹಿತಿಯನ್ನು ನೀಡಬೇಕಾಗುತ್ತದೆ. ಎಲ್ಲರೂ ಬೇರೆ ಕಾರ್ಯಗಳಿಗೆ ವಿನಾಯಿತಿಗೊಳಿಸಿ ಕಿಸಾನ್ ಯೋಜನೆಯತ್ತ ಚಿತ್ತ ಹರಿಸಬೇಕು. ಯಾವುದೇ ಕಾರಣಕ್ಕೂ ನಿಗದಿತ ಗುರಿಯನ್ನು ಸಾಧಿಸಲೇಬೇಕಿದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಜಿಪಂ ಮುಖ್ಯ ಕಾರ್ಯಾನಿರ್ವಹಣ ಅಧಿಕಾರಿ ಕವಿತಾ ಮನ್ನಿಕೇರಿ ಮಾತನಾಡಿ, ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ. ಕೆಟ್ಟ ವ್ಯವಸ್ಥೆಯಡಿ ಯೋಜನೆ ವಿಫಲತೆ ಹೊಂದಬಾರದು. ಹಳ್ಳಿಗಳಲ್ಲಿ ರೈತರು ಮೃತಪಟ್ಟಲ್ಲಿ ಪಹಣಿಗಳಲ್ಲಿ ತಿದ್ದುಪಡಿಗಾಗಿ ಅರ್ಜಿ ನೀಡಿದರೂ ಗ್ರಾಮಲೇಖಕರು ವಿಳಂಬ ನೀತಿ ಹರಿಸದೆ ಕೂಡಲೇ ಕೆಲಸ ಮಾಡಬೇಕು. ಈ ಅವ್ಯವಸ್ಥೆಯಿಂದ ಕಿಸಾನ್ ಯೋಜನೆಯಲ್ಲಿ ಸೌಲಭ್ಯ ಪಡೆಯುವಲ್ಲಿ ಸಂಬಂಧಿಕರಿಂದ ವಾರಾಸುದಾರರಿಗೆ ಈ ಅನುದಾನ ನೀಡಬೇಕಾಗುತ್ತದೆ. ಜವಾಬ್ದಾರಿಯಿಂದ ಎಲ್ಲರೂ ಕಾರ್ಯನಿರ್ವಹಿಸುವ ಮೂಲಕ ಯೋಜನೆಯ ಗುರಿ ತಲುಪಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲಾಧಿಕಾರಿ ಪ್ರಕಾಶ ರಜಪೂತ, ಕೃಷಿ ಇಲಾಖೆಯ ಉಪ ನಿರ್ದೇಶಕ ಅನುಸೂಯಾ ಹೂಗಾರ ಮತ್ತು ತಹಶೀಲ್ದಾರ ಸಂಗಮೇಶ ಜಿಡಗೆ, ತಾಪಂ ಇಓ ಉಪಸ್ಥಿತರಿದ್ದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕೃಷಿ ಸಹಾಯಕರು, ಅನುವುದಾರರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.