ವಿಜಯಪುರ: 7ನೇ ಆರ್ಥಿಕ ಗಣತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು, ವ್ಯಾಪಾರಿಗಳು, ಉದ್ದಿಮೆದಾರರು ತಮ್ಮ ಆರ್ಥಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಲು ಮನವರಿಕೆ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ತಾಲೂಕು ಮಟ್ಟದ ಅಧಿ ಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕೇಂದ್ರ ಸರ್ಕಾರದ ಸಾಂಖೀಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯದ ಕೇಂದ್ರ ಸಾಂಖೀಕ ಕಚೇರಿ ನಿರ್ದೇಶನದಂತೆ ಏಳನೇ ಆರ್ಥಿಕ ಗಣತಿ ಕೈಗೊಳ್ಳಲಾಗುತ್ತಿದೆ. ಗಣತಿಯ ಕ್ಷೇತ್ರ ಕಾರ್ಯಾಚರಣೆಯಲ್ಲಿ ಕೃಷಿ ಚಟುವಟಿಕೆಗಳನ್ನು ಹೊರತು ಪಡಿಸಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ ಸಂಘಟಿತ ಮತ್ತು ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆ ಹೊಂದಿರುವ ಉದ್ದಿಮೆಗಳ ಮಾಹಿತಿಯನ್ನು ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಿ ಸಂಗ್ರಹಿಸಬೇಕು ಎಂದು ಸೂಚಿಸಿದರು.
ಕೈಗಾರಿಕೆ, ಹೋಟೆಲ್, ಟೈಲರಿಂಗ್, ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ, ಬೀದಿ ಬದಿ ವ್ಯಾಪಾರಿಗಳು ಹಾಗೂ ಇತರೆ ಆರ್ಥಿಕ ಚಟುವಟಿಕೆ ಮಾಹಿತಿಯನ್ನು ಮೊಬೈಲ್ ತಂತ್ರಾಂಶದ ಮೂಲಕ ಕೈಗೊಳ್ಳಲಾಗುತ್ತಿದೆ. 7ನೇ ಆರ್ಥಿಕ ಗಣತಿಯಲ್ಲಿ ಸಂಗ್ರಹಿಸುವ ಮಾಹಿತಿ ಆಯಾ ಪ್ರದೇಶದ ಜನತೆಯ ಆರ್ಥಿಕ ಸ್ಥಿತಿಗತಿ ಮತ್ತು ಸ್ವಾವಲಂಬನೆಯ ಚಿತ್ರಣ ನೀಡುವಂತಿರಬೇಕು. ಅಲ್ಲದೇ ಪ್ರಸ್ತುತ ಆರ್ಥಿಕ ಗಣತಿ ಮೂಲಕ ಸಂಗ್ರಹಿಸಲಾಗುವ ವಿವರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯಾ ಪ್ರದೇಶದ ಆರ್ಥಿಕ ಚಟುವಟಿಕೆ ಉತ್ತೇಜಿಸಿ ಜನತೆಯ ಆರ್ಥಿಕ ಸ್ವಾವಲಂಬನೆ ಸಾಧಿಸಲು ಹೊಸ ಯೋಜನೆ ರೂಪಿಸಲು ದೇಶಕ್ಕೆ ನೆರವಾಗುವ ಹಿನ್ನಲೆಯಲ್ಲಿ ನಿಖರ ಮತ್ತು ವಸ್ತುನಿಷ್ಠ ಮಾಹಿತಿ ಸಂಗ್ರಹಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಂಟಿ ಕೈಗಾರಿಕಾ ನಿರ್ದೇಶಕರು ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆಗಳಿಗೆ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಗಣತಿದಾರರಿಗೆ ನೀಡಿ ಸಹಕರಿಸಬೇಕು. ನಗರ ಪ್ರದೇಶಗಳಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆ ಮುಖ್ಯಸ್ಥರು, ಗ್ರಾಮೀಣ ಭಾಗಗಳಲ್ಲಿ ತಹಶೀಲ್ದಾರ್‌ರು, ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ, ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು, ಆರ್ಥಿಕ ಗಣತಿ ಕ್ಷೇತ್ರ ಕಾರ್ಯಾಚರಣೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ, ತಿಳಿವಳಿಕೆ ಮೂಡಿಸಬೇಕು. ಗಣತಿ ಕ್ಷೇತ್ರ ಕಾರ್ಯಾಚರಣೆಯ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿರುವ ಕುರಿತು ಕಾಲ ಕಾಲಕ್ಕೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಔದ್ರಾಮ, ಅಂಕಿ ಸಂಖ್ಯಾಧಿಕಾರಿ ಕುಲಕರ್ಣಿ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸಿದ್ದಣ್ಣ ಸೇರಿದಂತೆ ಇತರರು ಇದ್ದರು.