ಕಟಪಾಡಿ: ಉದ್ಯಾವರ ಮೇಲ್ಪೇಟೆ ಬಸ್ಸು ತಂಗುದಾಣಕ್ಕೆ ಹೊಂದಿಕೊಂಡಿದ್ದ ಮನೆಯೊಂದರ ಗೋಡೆಯು ಧರಾಶಾಹಿಯಾಗಿದ್ದು ಮಂಚದಲ್ಲಿ ಮಲಗಿದ್ದ ಯುವಕ ಪವಾಡ ಸದೃಶವಾಗಿ ಅಪಾಯದಿಂದ ಪಾರಾದ ಘಟನೆ ಆ.2ರಂದು ಘಟಿಸಿದೆ.
ಅಲಿಆಸ್ಗರ್, ಹನಾನ್, ಹಫ್ಸಾ, ಅಫ್ಸಾನಾ, ರಿಶ್ವಾನಾ, ರುಕ್ಸಾನಾ, ಅಸ್ಲಾಂ ಅವರು ಮನೆಯಲ್ಲಿ ಇದ್ದಂತೆಯೇ ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಯ ಪಾರ್ಶ್ವದ ಗೋಡೆಯೊಂದು ಕುಸಿದಿತ್ತು.
ಗೋಡೆಯು ಬೀಳುವ ರಭಸಕ್ಕೆ ಕೋಣೆಯಲ್ಲಿ ಹನಾನ್ ಎಂಬ ಯುವಕ ಮಲಗಿದ್ದ ಮಂಚವು ದೂಡಲ್ಪಟ್ಟಿದ್ದು, ನಿದ್ದೆಯಿಂದ ಎದ್ದು ಆತ ಹೊರಗೋಡಿ ಬಂದಿದ್ದರಿಂದ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ.
ಅನಾರೋಗ್ಯದಿಂದ ಹನಾನ್ ಗುರುವಾರವಷ್ಟೇ ಚಿಕಿತ್ಸೆ ಪೂರೈಸಿಕೊಂಡು ಬೆಂಗಳೂರಿನಿಂದ ಉದ್ಯಾವರ ಮೇಲ್ಪೇಟೆಯ ತನ್ನ ಮನೆಗೆ ಆಗಮಿಸಿದ್ದರು. ಬೆಳಗ್ಗೆ ಬೇಗನೆ ಎದ್ದು ದೇವರ ಪ್ರಾರ್ಥನೆ ಮುಗಿಸಿ ಮಲಗಿದ್ದ ಅವರು ಗೋಡೆಯು ಬೀಳುವ ಸಂದರ್ಭದಲ್ಲಿ ಮೊದಲಾಗಿ ಸ್ವಲ್ಪ ಜರಿದ ಗೋಡೆಯ ಭಾಗದಿಂದ ಮಂಚವು ಟೈಲ್ಸ್ ಅಳವಡಿಸಿದ ಕೋಣೆಯೊಳಗೆ ಸ್ವಲ್ಪ ಪಕ್ಕಕ್ಕೆ ಜರುಗಿತ್ತು. ಹಾಗಾಗಿ ಹನಾನ್ ಅಪಾಯದಿಂದ ಪಾರಾಗಿದ್ದಾನೆ ಎಂದು ಅಲಿಅಸ್ಗರ್ ಉದಯವಾಣಿಗೆ ತಿಳಿಸಿರುತ್ತಾರೆ.
ಮನೆಮಂದಿ ಇತರ ಕೋಣೆಗಳಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರಿಂದ ಹೆಚ್ಚಿನ ಅವಘಡದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಉದ್ಯಾವರ ಗ್ರಾ.ಪಂ. ಅಧ್ಯಕ್ಷೆ ಸುಗಂಧಿಶೇಖರ್ ಕೋಟ್ಯಾನ್, ಉಪಾಧ್ಯಕ್ಷ ರಿಯಾಜ್‌ಇಸ್ಮಾಯಿಲ್ ಪಳ್ಳಿ, ಗ್ರಾ.ಪಂ.ಸದಸ್ಯ ವಿಲ್ಸನ್ ವಿಜಯ್ ಕುಮಾರ್, ಪಿ.ಡಿ.ಒ. ರಮಾನಂದ ಪುರಾಣಿಕ್, ಸಿಬಂದಿ ವರ್ಗ, ಗ್ರಾಮ ಸಹಾಯಕ ರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.