ನಾನೊಬ್ಬ ಸಾಮಾನ್ಯ ವರ್ತಕ. ಲಾಕ್‌ಡೌನ್ ಮುಗಿದ ನಂತರ ನಿವೇಶನದ ಮೌಲ್ಯ ಕಡಿಮೆ ಆಗಬಹುದೇ? ಕೋವಿಡೋತ್ತರ ರಿಯಲ್ ಎಸ್ಟೇಟ್ ಕುಸಿತ ಕಾಣಲಿದೆಯೇ?
Advertisement
ಬೆಂಗಳೂರು ಸೇರಿ ಮಹಾನಗರಗಳಲ್ಲಿ ನಿವೇಶನದ ಬೆಲೆ ಇಳಿಕೆಯಾಗುವ ಸಂಭವ ಬಹಳ ಕಡಿಮೆ. ಒಂದು ವಸ್ತುವನ್ನು ಆಗಲೇ ನಿಗದಿತ ಬೆಲೆ ಕೊಟ್ಟು ಕೊಂಡವರು ಅದಕ್ಕಿಂತ ಕಡಿಮೆ ಬೆಲೆಗೆ ಅದನ್ನು ಮಾರುವ ಸಾಧ್ಯತೆ ಕಡಿಮೆ. ವಸತಿ ಸಂಕೀರ್ಣಗಳಲ್ಲಿ ಇರುವ ಅಪಾರ್ಟ್‌ಮೆಂಟ್‌ಗಳ ಬೆಲೆಯಲ್ಲಿ ಒಂದಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಈಗಾಗಲೇ ಬ್ಯಾಂಕಿನ ಬಡ್ಡಿ ದರವನ್ನು ಬಹಳಷ್ಟು ಕಡಿಮೆ ಮಾಡಲಾಗಿದೆ. ಕಡಿಮೆಯಾದ ಬಡ್ಡಿ ಎಂದಿಗೂ ರಿಯಲ್ ಎಸ್ಟೇಟ್ ವಲಯದಲ್ಲಿ ಚೇತರಿಕೆ ತರುತ್ತದೆ. ಆರು ತಿಂಗಳಲ್ಲಿ ವ್ಯಾಪಾರ, ವಹಿವಾಟು ಮೊದಲಿನಂತೆ ನಡೆಯಲು ಶುರುವಾದರೆ, ರಿಯಲ್ ಎಸ್ಟೇಟ್ ಕ್ಷೇತ್ರ ಚಿಗುರುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ, ನೀವು ನಿವೇಶನವನ್ನು ಕೊಳ್ಳುವ ಹಾಗಿದ್ದರೆ ಇದು ಸಕಾಲ. ಒಂದಷ್ಟು ಚೌಕಾಸಿಗೆ ಈಗ ಅವಕಾಶವಿದೆ. ಬಡ್ಡಿ ಕುಸಿದಿರುವುದರಿಂದ ಬ್ಯಾಂಕಿನಲ್ಲಿ ಜನ ಠೇವಣಿ ಇಡಲು ಬಯಸುವುದಿಲ್ಲ. ರಿಯಲ್ ಎಸ್ಟೇಟ್ ಏರಿಕೆ ಕಾಣುವ ಸಾಧ್ಯತೆ ಅಧಿಕವಿದೆ.● ರಂಗಸ್ವಾಮಿ ಮೂಕನಹಳ್ಳಿ, ಆರ್ಥಿಕ ತಜ್ಞ
ನಾನು 32 ವರ್ಷದ ಗೃಹಿಣಿ. ಒಂದೂವರೆ ವರ್ಷದ ಮಗಳಿಗೆ ಎದೆಹಾಲು ಉಣಿಸುತ್ತಿದ್ದೇನೆ. ಮಗುವನ್ನು ಎತ್ತಿಕೊಳ್ಳುವಾಗ ಕುತ್ತಿಗೆ, ಭುಜ, ಬೆನ್ನಿನ ಮೇಲ್ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಪರಿಹಾರ ಇದೆಯೇ?
ಇದು ಸರ್ವೈಕಲ್ ಸ್ಪಾಂಡಿಲೊಸಿಸ್ ಸಮಸ್ಯೆ ಇದ್ದಿರಬಹುದು. ಕುತ್ತಿಗೆಯ ಭಾಗದಲ್ಲಿ ಮೂಳೆ ಸವೆತವಾಗಿ ನರದ ಮೇಲೆ ಒತ್ತಡ ಬಿದ್ದಾಗ ಹೀಗೆ ನೋವು ಕಾಣಿಸಿಕೊಳ್ಳುತ್ತದೆ. ಭಾರ ಎತ್ತಿದಾಗ ಕುತ್ತಿಗೆ ಭಾಗದ ನೋವು ಜಾಸ್ತಿ ಆಗುತ್ತೆ. ಹೀಗಾಗಿ, ನೀವು ಕುಳಿತುಕೊಂಡೇ ಮಗುವನ್ನು ಎತ್ತಿಕೊಳ್ಳುವುದು ಉತ್ತಮ. ನಿಂತಲ್ಲೇ ಬಾಗಿಕೊಂಡು, ನೆಲದಿಂದ ಮಗುವನ್ನು ಎತ್ತುವ ಕ್ರಮ ಅಷ್ಟು ಒಳ್ಳೆಯದಲ್ಲ. ಎದೆಹಾಲು ಕುಡಿಸುವಾಗ ತಲೆ ಬಗ್ಗಿಸಿದರೆ, ಈ ನೋವು ಇನ್ನೂ ಜಾಸ್ತಿ ಆಗುವ ಸಂಭವವಿದೆ. ಮಲಗುವಾಗ ತಲೆದಿಂಬನ್ನು ಬಳಸಬೇಡಿ. ನಿತ್ಯ ಬೆಳಗ್ಗೆ- ಸಂಜೆ ಭುಜಂಗಾಸನ ಮಾಡಿ. ಕುತ್ತಿಗೆಯ ಭಾಗಕ್ಕೆ ಎಳ್ಳೆಣ್ಣೆ ಅಥವಾ ಆಯುರ್ವೇದಿಕ್ ಮೆಡಿಕಲ್‌ನಲ್ಲಿ ಸಿಗುವ ಕ್ಷೀರ ಬಲ ತೈಲವನ್ನು ಹಚ್ಚಿ. ಆಹಾರದಲ್ಲಿ ಆಲೂಗಡ್ಡೆ, ಬಟಾಣಿ, ಸೋರೆಕಾಯಿ, ಅವರೆಕಾಯಿ, ಶೇಂಗಾ, ಕರಿದ ಪದಾರ್ಥಗಳು, ಸೇಬಿನ ಹಣ್ಣನ್ನು ಸೇವಿಸಬೇಡಿ.
● ಡಾ.ಗಿರಿಧರ ಕಜೆ, ಆಯುರ್ವೇದ ತಜ್ಞ ಶಾಂತಕುಮಾರ್ ಎ. ಗೌಂಡಿ, ನಿಂಬರ್ಗಾ
ಉಜ್ವಲ ಯೋಜನೆಯಡಿ ಅಡುಗೆ ಅನಿಲ ಪಡೆದ ಗ್ರಾಹಕರಿಗೆ, ಇತ್ತೀಚೆಗೆ ಕೇಂದ್ರ ಸರ್ಕಾರ 3 ತಿಂಗಳು ಉಚಿತವಾಗಿ ಸಿಲಿಂಡರ್ ಪೂರೈಸುತ್ತಿದೆ. ಆದರೆ, ಈ ಬಗ್ಗೆ ಗ್ಯಾಸ್ ಏಜೆನ್ಸಿಯವರನ್ನು ಕೇಳಿದರೆ, “ಮೊದಲು ಹಣ ಪಾವತಿಸಿ. ನಂತರ ನಿಮ್ಮ ಖಾತೆಗೆ ಹಣ ಬರುತ್ತೆ’ ಅಂದಿದ್ದಾರೆ. ಗ್ಯಾಸ್ ಪಡೆದು 15 ದಿನಗಳಾದರೂ ಹಣ ಬಂದಿಲ್ಲ. ಏನು ಮಾಡುವುದು?
ಉಜ್ವಲ ಯೋಜನೆ ಅಡಿಯಲ್ಲಿ ಪಡೆದ ಅಡುಗೆ ಅನಿಲ ಪಡೆದ ಗ್ರಾಹಕರಿಗೆ ಮುಂದಿನ ತಿಂಗಳು ಗ್ಯಾಸ್ ಪಡೆಯುವಾಗ ಹಿಂದಿನ ತಿಂಗಳಿನ ಹಣ ಅವರ ಖಾತೆಗೆ ಜಮಾ ಆಗುತ್ತದೆ. ಹೆಸರು ನೋಂದಾಯಿಸಿದ ಹಲವರಿಗೆ ಈಗಾಗಲೇ ಹಣ ಅವರ ಖಾತೆಗೆ ಜಮಾ ಆಗುತ್ತಿದೆ. ನೀವು ಮುಂದಿನ ಅಡುಗೆ ಅನಿಲ ಪಡೆದಾಗ, ಖಂಡಿತವಾಗಿ ಹಣ ಜಮಾ ಆಗುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಉಜ್ವಲ ಯೋಜನೆ ಅಡಿ 18,412 ಹೆಸರು ನೊಂದಾಯಿಸಿದ್ದರು. ಇದರಲ್ಲಿ 16,770 ಫಲಾನುಭವಿಗಳಿಗೆ ಈಗಾಗಲೇ ಹಣ ಜಮಾ ಆಗಿದೆ.
● ದೇವೇಂದ್ರಪ್ಪ ಪಾಣಿ, ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಲಬುರಗಿ
Related Articles
ನಮ್ಮ ಬೇಕರಿ ಸಿಬ್ಬಂದಿ, ಕೆಎಸ್ಸಾರ್ಟಿಸಿಯಲ್ಲಿ ಬಸ್ ಪಾಸ್ ಮಾಡಿಸಿಕೊಂಡು, ನಿತ್ಯ ಹರಿಹರದಿಂದ ಹರಪನಹಳ್ಳಿಗೆ ಓಡಾಡುತ್ತಿದ್ದರು. ಮಾ.14ರಂದು ಮಾಡಿಕೊಂಡಿದ್ದ ಮಾಸಿಕ
ಪಾಸ್‌ನ ಶುಲ್ಕ 1800 ರೂಪಾಯಿ. ಈಗ ಒಂದು ತಿಂಗಳಿಂದ ಲಾಕ್‌ಡೌನ್ ಆಗಿ, ಬಸ್ ಓಡಾಟ ನಿಂತಿದೆ. ಈ ಪಾಸ್, ಲಾಕ್‌ಡೌನ್ ನಂತರದ ತಿಂಗಳಿಗೆ ಅನ್ವಯವಾಗುತ್ತದೆಯೇ?
Advertisement
ಲಾಕ್‌ಡೌನ್ ಅನ್ನು ಮಾರ್ಚ್ 22ಕ್ಕೆ ಅನೌನ್ಸ್ ಮಾಡಿದ್ದರಿಂದ, ನಿಮಗೆ ಈ ಪಾಸ್ ಬಳಕೆಯಾಗಿಲ್ಲ. ಕೆಎಸ್ಸಾರ್ಟಿಸಿಯಲ್ಲಿ ನಿತ್ಯ ಓಡಾಡುವ ಹಲವು ಪ್ರಯಾಣಿಕರಿಗೆ ಈ ಸಮಸ್ಯೆಎದುರಾಗಿದೆ. ಮುಂದೆ ಬಸ್ ಸಂಚಾರ ಆರಂಭಗೊಂಡಾಗ, ನೀವು ಈ ಹಿಂದೆ ಪಾಸ್ ಪಡೆದ ಸ್ಥಳದಲ್ಲಿ, ಪಾಸ್‌ಗೆ ರೀ ಸ್ಟಾಂಪ್ ಮಾಡಿಸಿಕೊಳ್ಳಿ. ಇದರಿಂದ ಉಳಿಕೆ ದಿನಗಳ ಪಾಸ್
ಪ್ರಯೋಜನವನ್ನು ಪಡೆಯಬಹುದು.
● ಮುಖ್ಯ ಸಂಚಾರ ವ್ಯವಸ್ಥಾಪಕರು, ಕೆಎಸ್ಸಾರ್ಟಿಸಿ, ಬೆಂಗಳೂರು ಸಚಿನ್
ಮೇ ತಿಂಗಳಲ್ಲಿ ನಡೆಯಬೇಕಿದ್ದ ಗೆಜೆಟೆಡ್ ಪ್ರೊಬೇಷನರಿ (ಕೆಪಿಎಎಸ್ಸಿ) ಪರೀಕ್ಷೆಗಳು ಮುಂದಕ್ಕೆ ಹೋಗುತ್ತವೆಯೇ?
ನಾವು ಈಗಾಗಲೇ ಪರೀಕ್ಷಾ ವೇಳಾಪಟ್ಟಿ ಹಾಕಿದ್ದೇವೆ. ಆದರೆ, ಅದು ನಡೆಯುತ್ತೋ ಇಲ್ಲವೋ ಎನ್ನುವುದನ್ನು ಕೋವಿಡ್ ಸೃಷ್ಟಿಸಿರುವ ಮುಂದಿನ ಪರಿಸ್ಥಿತಿಗಳ ಆಧಾರದ ಮೇಲೆ
ನಿರ್ಣಯ ಆಗಬೇಕಿದೆ. ಪರೀಕ್ಷೆ ಎನ್ನುವುದು ಒಂದು ಸಮೂಹ ಕ್ರಿಯೆ. ಇದು ಬಹಳ ಸೂಕ್ಷ್ಮ ನಿರ್ಧಾರ. ಲಾಕ್‌ಡೌನ್ ವಾತಾವರಣ ತಿಳಿಯಾದ ಮೇಲೆ ನಮ್ಮ ಕಮಿಷನ್ ಇದಕ್ಕಾಗಿ ಸಭೆ ಸೇರುತ್ತದೆ. ಅಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷಾ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆಯೇ ಕಮಿಷನ್ ಯೋಚಿಸುತ್ತದೆ. ಪ್ರಸ್ತುತ ಸರ್ಕಾರಿ ಕಚೇರಿಗಳು ತೆರೆಯದೇ ಇರುವುದರಿಂದ, ಈಗಲೇ ಈ ಬಗ್ಗೆ ಹೇಳಲಾಗದು.
● ಷಡಕ್ಷರಿ ಸ್ವಾಮಿ, ಕೆಪಿಎಸ್ಸಿ ಅಧ್ಯಕ್ಷ ಲಾಕ್ ಡೌನ್ ಅವಧಿಯಲ್ಲಿ ಏನೇ ಸಮಸ್ಯೆ, ಸಂದೇಹಗಳಿದ್ದರೆ ಉದಯವಾಣಿ ಮೂಲಕ ತಜ್ಞರಿಂದ ಉತ್ತರ ಪಡೆಯಲು ನಮಗೆ ವಾಟ್ಸ್‌ಆ್ಯಪ್ ಮಾಡಿ.
ಕಳುಹಿಸಬೇಕಾದ ವಾಟ್ಸ್ ಆ್ಯಪ್ ಸಂಖ್ಯೆ 8861196369