Advertisement
ಅಕ್ರಮ ವಲಸಿಗರಿಂದುಟಾಗುವ ಸಮಸ್ಯೆಯ ತೀವ್ರತೆಯನ್ನು ಈಶಾನ್ಯ ರಾಜ್ಯಗಳು ದಶಕಗಳಿಂದಲೂ ಅನುಭವಿಸುತ್ತಲೇ ಬಂದಿವೆ. ಹೀಗಾಗಿ ಬಾಂಗ್ಲಾ ನುಸುಳುಕೋರರ ವಿಚಾರದಲ್ಲಿ ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ನಡೆಯುವಷ್ಟು ಚರ್ಚೆ, ಉಂಟಾಗಿರುವ ಜಾಗೃತಿ ದೇಶದ ಉಳಿದ ರಾಜ್ಯಗಳಲ್ಲಿ ಆಗುತ್ತಲೇ ಇಲ್ಲ. ಸಮಸ್ಯೆಯೆಂದರೆ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ ರಾಜ್ಯ ಸರ್ಕಾರಗಳಿಗೆ ಇದು ಗಮನಹರಿಸಬೇಕಾದ ಸಂಗತಿಯೆಂದೇ ಅನಿಸಿಲ್ಲ.
Related Articles
Advertisement
ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಬೆಳಂದೂರು ಪೊಲೀಸರು, ಯುಐಡಿಎಐ ಅಧಿಕಾರಿಗಳ ಸಹಾಯದಿಂದ ಬಂಧಿಸಿದ್ದ 7 ಜನರಲ್ಲಿ ಆರು ಜನ ಬಾಂಗ್ಲಾದೇಶಿಯರಾಗಿದ್ದರು. ಇವರೆಲ್ಲ ಸ್ಥಳೀಯ “ಶಕ್ತಿ’ಗಳ ಸಹಾಯದಿಂದ 500 ರೂಪಾಯಿಗೆ ಆಧಾರ್ ಕಾರ್ಡ್ ಪಡೆದು ವೈಟ್‌ಫೀಲ್ಡ್ ಪ್ರದೇಶದಲ್ಲಿನ ಐಟಿ ಕಂಪೆನಿಗಳಲ್ಲಿ ಹೌಸ್ ಕೀಪಿಂಗ್ ಸೇರಿದಂತೆ, ಹಲವು ಕೆಳಸ್ತರದ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಅಕ್ರಮ ವಲಸಿಗರನ್ನು ಸಕ್ರಮಗೊಳಿಸುವ ಬೃಹತ್ ಜಾಲವೇ ಬೆಂಗಳೂರಲ್ಲಿ ನಿರ್ಮಾಣವಾಗಿದೆ ಎಂದೇ ಇದರರ್ಥವಲ್ಲವೇ?
ಈಗ ಗುವಾಹಟಿಯಲ್ಲಿ ಸಿಕ್ಕಿಬಿದ್ದಿರುವ ಅಕ್ರಮ ವಲಸಿಗನೊಬ್ಬ “ಬೆಂಗಳೂ ರಲ್ಲಿ ಅನೇಕ ಬಾಂಗ್ಲಾದೇಶಿ ಕುಟುಂಬಗಳಿವೆ. ಎಲ್ಲವೂ ಹೊಟ್ಟೆಪಾಡಿಗಾಗಿ ಚಿಕ್ಕಪುಟ್ಟ ಕೆಲಸ ಮಾಡುತ್ತಿವೆ’ ಎಂದು ಆಂಗ್ಲವಾಹಿನಿಯೊಂದಕ್ಕೆ ಹೇಳಿದ್ದಾನೆ.
ಸಮಸ್ಯೆಯಿರುವುದು ಇಂಥವರಿಂದಲ್ಲ, ಬದಲಾಗಿ, ಭಾರತದೊಳಕ್ಕೆ ಹೊಟ್ಟೆಪಾಡಿಗೆಂದು ನುಸುಳದೇ, ಅನ್ಯ ಉದ್ದೇಶದಿಂದ ಬಂದವರಿಂದಲೇ ಅಪಾಯವಿರುವುದು. ಅಸ್ಸಾಂ, ಮಿಜೋರಾಂ, ಮಣಿಪುರದಲ್ಲಿ ಈಗಾಗಲೇ ಬಾಂಗ್ಲಾ-ಚೀನಾ-ಪಾಕ್ ಬೆಂಬಲಿತ 17ಕ್ಕೂ ಹೆಚ್ಚು ಉಗ್ರ ಸಂಘಟನೆಗಳು ಅಸ್ತಿತ್ವದಲ್ಲಿವೆ. ಸೆಪ್ಟೆಂಬರ್ 13ರಿಂದ ಸೆಪ್ಟೆಂಬರ್ 23 ನಡುವೆ, ಅಂದರೆ ಕೇವಲ 11 ದಿನದಲ್ಲಿ ಭಾರತೀಯ ಭದ್ರತಾಪಡೆಗಳು ಈಶಾನ್ಯ ರಾಜ್ಯಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ಗೆ ಸೇರಿದ 9 ಉಗ್ರರನ್ನು ಬಂಧಿಸಿವೆ. ಈ ಉಗ್ರ ಸಂಘಟನೆಯ ಮುಖ್ಯವಾಗಿ ಸೆಳೆದುಕೊಳ್ಳುತ್ತಿರುವುದು ಈಶಾನ್ಯ ರಾಜ್ಯಗಳಲ್ಲಿನ ಬಾಂಗ್ಲಾದೇಶಿ ಅಕ್ರಮ ವಲಸಿಗ ಯುವಕರನ್ನು ಎನ್ನುತ್ತವೆ ಗುಪ್ತಚರ ವರದಿಗಳು. ಇಂಥ ದೇಶವಿರೋಧಿ ಶಕ್ತಿಗಳಿಗೆ ಬೇರೆ ರಾಜ್ಯಗಳಿಗೆ ನುಸುಳುವುದಕ್ಕೆ ಕಷ್ಟವೇನೂ ಆಗದಲ್ಲವೇ? ಏನೇ ಇದ್ದರೂ ಈಗ ಚೆಂಡು ರಾಜ್ಯ ಸರ್ಕಾರದ ಅಂಗಳದಲ್ಲಿದೆ. ಅಕ್ರಮ ವಲಸಿಗರನ್ನು ಗುರುತಿಸಲು ಕಟ್ಟುನಿಟ್ಟಿನ ಆಜ್ಞೆ ಜಾರಿಮಾಡಬೇಕಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಹೊರದೇಶದಿಂದ ಬಂದವರಿಗೆ ನೆಲೆ ಒದಗಿಸಲು ಪ್ರಯತ್ನಿಸುತ್ತಿರುವ ಸ್ಥಳೀಯ ಜಾಲವನ್ನು ಹತ್ತಿಕ್ಕುವುದು ಆದ್ಯತೆಯಾಗಬೇಕು.