ಬೀದರ: ಜಿಲ್ಲೆಯ ವಿವಿಧ ಕಾರ್ಖಾನೆಗಳಲ್ಲಿ ಪದೇ ಪದೇ ಅವಘಡಗಳು ಸಂಭವಿಸುತ್ತಿದ್ದರೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾತ್ರ ಜಾಗೃತರಾಗಿಲ್ಲ. ಹೌದು ಕಳೆದ ವರ್ಷ ಹುಮನಾಬಾದ ತಾಲೂಕಿನ ಮೂರು ಕಾರ್ಖಾನೆಗಳಲ್ಲಿ ಅವಘಡಗಳು ಸಂಭವಿಸಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು.
ಹತ್ತಾರು ಜನರು ಗಂಭೀರ ಗಾಯಗೊಂಡಿದ್ದರು. ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅವಘಡದಲ್ಲಿ ವ್ಯಕ್ತಿಯೊಬ್ಬ ಸಜೀವ ದಹನವಾಗಿದ್ದರು. ಇದೀಗ ಬೀದರ ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಾರ್ಖಾನೆಯಲ್ಲಿ ಜ.17ರಂದು ರಾತ್ರಿ ಸಂಭವಿಸಿದ ಅವಘಡದಲ್ಲಿ ಐವರು ಗಾಯಗೊಂಡಿದ್ದಾರೆ. ಇದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆಗಳು ಇಲ್ಲದ ಕಾರಣ ಅವಘಡಗಳಲ್ಲಿ ಕಾರ್ಮಿಕರು, ಸಿಬ್ಬಂದಿಗಳು ನರಳುವಂತಾಗುತ್ತಿದೆ. ಕಾರ್ಖಾನೆಗಳ ಮಾಲೀಕರು ಲಾಭಕ್ಕೆ ನೀಡುವ ಗೌರವ ಕಾರ್ಮಿಕರ ಹಾಗೂ ಸಿಬ್ಬಂದಿ ಜೀವನಕ್ಕೆ ನೀಡುತ್ತಿಲ್ಲ ಎಂಬ ಆರೋಪಗಳು ಹೆಚ್ಚಿವೆ. ಇದನ್ನು ಸೂಕ್ತ ಸಂದರ್ಭದಲ್ಲಿ ಪರಿಶೀಲಿಸಬೇಕಿರುವ ಅಧಿಕಾರಿಗಳು ಕಾರ್ಖಾನೆಗಳ ಮಾಲೀಕರ ಹಾಗೂ ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಾರ್ಖಾನೆಗಳ ಕಡೆಗೆ ತೆರಳುತ್ತಿಲ್ಲ ಎಂಬ ಆರೋಪಗಳು ಕೂಡ ಇವೆ.
ಸುರಕ್ಷತೆ ಕೊರತೆ: ಕೈಗಾರಿಕಾ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ಸುರಕ್ಷತೆ ಕುರಿತು ತಿಳಿವಳಿಕೆ ನೀಡುವ ಕೆಲಸ ನಡೆಯುತ್ತಿಲ್ಲ. ಅಲ್ಲದೆ, ಕೆಲಸದ ಸಂದರ್ಭದಲ್ಲಿ ಜೀವ ರಕ್ಷಣೆಗಾಗಿ ಧರಿಸಬೇಕಾದ ಪರಿಕರ ಬಳಸದಿರುವುದು ಕೂಡ ಅವಘಡಗಳಲ್ಲಿ ಗಂಭೀರ ಗಾಯವಾಗಿ ನರಳುವ ಸ್ಥಿತಿ ಎದುರಾಗಿತ್ತಿದೆ. ಸದ್ಯ ಜಿಲ್ಲೆಯಲ್ಲಿ ಸಂಭವಿಸಿದ ವಿವಿಧ ಅವಘಡಗಳಲ್ಲಿ ಕಾರ್ಮಿಕರು ಹಾಗೂ ಸಿಬ್ಬಂದಿ ಸುರಕ್ಷತೆ ಪರಿಕರಗಳು ಬಳಸದಿರುವುದು ತಿಳಿದು ಬಂದಿದೆ. ಸುರಕ್ಷತೆ ಕುರಿತು ಕಾರ್ಖಾನೆಗಳ ಮುಖ್ಯಸ್ಥರಿಗೆ ತಿಳಿಸಿದರೆ ಕಿರುಕುಳ ನೀಡಿ ಕೆಲಸದಿಂದ ತೆಗೆದು ಹಾಕುತ್ತಾರೆ. ಈ ಬಗ್ಗೆ ಕಾರ್ಮಿಕ ಇಲಾಖೆ ಹೆಚ್ಚಾಗಿ ಕಾರ್ಮಿಕರ ಸುರಕ್ಷತೆ ಕುರಿತು ಕಾಳಜಿ ವಹಿಸುವಲ್ಲಿ ವಿಫಲಗೊಂಡಿದೆ ಎಂದು ಕೈಗಾರಿಕಾ ಕಾರ್ಮಿಕರು ನೋವು ತೊಡಿಕೊಂಡಿದ್ದಾರೆ.
ನ್ಯಾಯಾಧೀಶರ ಭೇಟಿ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮನಗೋಳಿ ಪ್ರೇಮಾವತಿ ಅವರು ಶುಕ್ರವಾರ ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಗಾಯಗೊಂಡ ಕಾರ್ಮಿಕರ ಆರೋಗ್ಯ ವಿಚಾರಿಸಿದರು. ನಗರದ ಅಪೆಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಾರ್ಮಿಕರನ್ನು ಭೇಟಿಯಾದ ಅವರು, ಘಟನೆ ಕುರಿತು ಮಾಹಿತಿ ಪಡೆದರು. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಕಂಪನಿ ಮಾಲೀಕರೊಂದಿಗೆ ಮಾತನಾಡಿ ತಮಗೆ ಪರಿಹಾರ ಧನ ಕೊಡುವ ಬಗ್ಗೆ ಚರ್ಚಿಸುತ್ತೇನೆ. ಕಾನೂನಿನಡಿ ಪರಿಹಾರ ಧನ ಒದಗಿಸಲು ಪ್ರಯಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.