ಕೋಲಾರ: ಜಿಲ್ಲೆಯಲ್ಲಿ ಹಾದು ಹೋಗಿರುವ ದಕ್ಷಿಣ ಪಿನಾಕಿನಿ ನದಿ ಪಾತ್ರವನ್ನು ಅಭಿವೃದ್ಧಿಪಡಿಸಲು ನಿವೃತ್ತ ಜಿಲ್ಲಾಧಿಕಾರಿ ವಿಶ್ವನಾಥ್ ಮುಂದಾಗಿದ್ದಾರೆ. ಬುಧವಾರ ಈ ಸಂಬಂಧ ಜಿಲ್ಲೆಗೆ ಆಗಮಿಸಿ ಹಾಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಸಿದ ಅವರು, ನದಿ ಅಭಿವೃದ್ಧಿಗಾಗಿ ದಕ್ಷಿಣ ಪಿನಾಕಿನಿ ನದಿ ಪುನಃ ಶ್ಚೇತನ ಟ್ರಸ್ಟ್ ಮುಂದಾಗಿದ್ದು, ಇದಕ್ಕೆ ನೆರವು ನೀಡಬೇಕೆಂದು ಮನವಿ ಮಾಡಿಕೊಂಡರು.
ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಿ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ 16 ತಾಲೂಕು ವ್ಯಾಪ್ತಿಯನ್ನು ಪಿನಾಕಿನಿ ನದಿ ಪ್ರದೇಶ ಒಳಗೊಂಡಿದೆ. ಕೋಲಾರ ಜಿಲ್ಲೆಯಲ್ಲಿ ಕೋಲಾರ, ಮಾಲೂರು ಮತ್ತು ಬಂಗಾರಪೇಟೆ ತಾಲೂಕುಗಳು ಸೇರುತ್ತವೆ. ಪಿನಾಕಿನಿ ನದಿ ಪುನಃಶ್ಚೇತನದ ಅನಿವಾರ್ಯತೆಯನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ಅವರು, ಟ್ರಸ್ಟ್ ತನ್ನ ಯೋಜನೆಗಳನ್ನು ಪೂರ್ಣಗೊಳಿಸಲು 3 ವರ್ಷಗಳ ಕಾಲಮಿತಿ ನಿಗದಿ ಮಾಡಲಾಗಿದೆ. ನದಿ ವ್ಯಾಪ್ತಿಯ ತಾಲೂಕುಗಳಲ್ಲಿನ ಕೆರೆಗಳ ಕುರಿತ ಸಮಗ್ರ ಚಿತ್ರಣವನ್ನು ಇಸ್ರೋ ಮೂಲಕ ಪಡೆಯಲಾಗಿದೆ. ಯೋಜನೆಗೆ ಕೋಟ್ಯಂತರ ರೂ. ಅವಶ್ಯಕತೆಯಿದೆ. ಆರ್ಥಿಕ ಸಂಪನ್ಮೂಲವನ್ನು ಟ್ರಸ್ಟ್ ಹೊಂದಿಸುತ್ತದೆ. ಯೋಜನೆ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಬೇಕೆಂದು ಕೋರಿದರು.
5 ಎಕರೆ ಜಮೀನು ಅಗತ್ಯ: ಇದಕ್ಕಾಗಿ ಮಾಲೂರಿನಲ್ಲಿ 5 ಎಕರೆ ಜಮೀನು ಅವಶ್ಯಕತೆಯಿದೆ. ಸರ್ಕಾರಿ ಜಮೀನು ಸಿಕ್ಕರೆ ಒಳ್ಳೆಯದು. ಇಲ್ಲವಾದಲ್ಲಿ ಯೋಗ್ಯ ಬೆಲೆಗೆ ಟ್ರಸ್ಟ್ ವತಿಯಿಂದಲೇ ಖರೀದಿಸಲಾಗುವುದು. ಇಲ್ಲಿ ಜಾಗ ಸಿಗದೇ ಹೋದಲ್ಲಿ ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ಜಾಗ ಇರುವುದರಿಂದ ಆ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.
ಜಿಲ್ಲಾಡಳಿತದಿಂದ ಸಹಕಾರ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ 1,328 ಹಾಗೂ ಜಿಪಂಗೆ ಸೇರಿದ 138 ಕೆರೆಗಳು ಸೇರಿ ಒಟ್ಟು 2,668 ಕೆರೆಗಳಿವೆ. ಈಗಾಗಲೇ ಕೆ.ಸಿ.ವ್ಯಾಲಿ ಯೋಜನೆಯಡಿ 126 ಕೆರೆಗಳಿಗೆ ನೀರು ಹರಿಸುವ ಸಂಬಂಧ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮಾರ್ಕಂಡೇಯ ಜಲಾಶಯ, ಯರಗೋಳ್ ಯೋಜನೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಪಡಿಸಲಾಗುತ್ತಿದೆ. ಇಂತಹ ಸಂದರ್ಭ ದಲ್ಲಿ ಟ್ರಸ್ಟ್ ಕೆರೆ ಸಂರಕ್ಷಣೆಗೆ ಒತ್ತು ನೀಡುವುದು ಒಳ್ಳೆಯ ಕಾರ್ಯ. ಅವಶ್ಯವಿರುವ ಎಲ್ಲ ಸಹಕಾರವನ್ನು ಜಿಲ್ಲಾಡಳಿತದಿಂದ ಒದಗಿಸ ಲಾಗುವುದು ಎಂದು ಭರವಸೆ ನೀಡಿದರು.
ನರೇಗಾ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನು ಕೆರೆಗಳನ್ನು ಅಭಿವೃದ್ಧಿಪಡಿಸಲು ಅವಕಾಶವಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟ ಅವರು, ನೀಲಗಿರಿ ನಿರ್ಮೂಲನೆ ಸಂಬಂಧ ಸರ್ಕಾರ ದಿಂದ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದರು. ಮಾಲೂರು ತಾಲೂಕಿನಲ್ಲಿ 5 ಎಕರೆ ಸರ್ಕಾರಿ ಜಮೀನು ಲಭ್ಯತೆ ಬಗ್ಗೆ ಪರಿಶೀಲನೆ ನಡೆ ಸುವಂತೆ ತೋಟಗಾರಿಕೆ ಅಧಿಕಾರಿಗೆ ಸೂಚಿಸಿದರು. ಪ್ರಗತಿಪರ ರೈತರಾದ ಅಶೋಕ್ ರಾಂಪುರ, ನೆನ ಮನಹಳ್ಳಿ ಚಂದ್ರಶೇಖರ್, ಸಂಪತ್ ಕುಮಾರ್, ಕಡಿಮೆ ನೀರಿನಲ್ಲಿ ಕೃಷಿ ಕ್ಷೇತ್ರದಲಾಗಿರುವ ಸಾಧನೆ ವಿವರಿಸಿದರು. ಜಿಪಂ ಯೋಜನಾ ನಿರ್ದೇಶಕ ರವಿಚಂದ್ರನ್, ಕೃಷಿ ಅಧಿ ಕಾರಿ ನಯೀಮ್ ಪಾಷ ಇತರರು ಹಾಜರಿದ್ದರು.
ಜಿಲ್ಲೆಯ ಕೆರೆ, ರಾಜಕಾಲುವೆಗಳ ಅಭಿವೃದ್ಧಿ ಸೇರಿದಂತೆ ಜಲಾನಯನ ಪ್ರದೇಶಗಳ ಅಭಿವೃದ್ಧಿ, ಮಳೆ ನೀರು ಸಂರಕ್ಷಣೆ,
ಸಾವಯವ ಕೃಷಿಗೆ ಒತ್ತು ನೀಡುವುದು, ನೀಲಗಿರಿ ನಿರ್ಮೂಲನೆ ಕೂಡ ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನ ಟ್ರಸ್ಟ್ ಕಾರ್ಯಕ್ರಮಗಳಲ್ಲಿ ಒಳಪಟ್ಟಿವೆ. ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸುವ ಮೂಲಕ ರೈತರು ಬೆಳೆದ ಉತ್ಪನ್ನಗಳಿಗೆ ಯೋಗ್ಯ ಬೆಲೆ ಮತ್ತು ಮಾರುಕಟ್ಟೆಯನ್ನೂ ಟ್ರಸ್ಟ್ ಕಲ್ಪಿಸುತ್ತದೆ.
ವಿಶ್ವನಾಥ್, ನಿವೃತ್ತ ಐಎಎಸ್ ಅಧಿಕಾರಿ
ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನ ಟ್ರಸ್ಟ್ ಯೋಜನೆ ಮೂರು ವರ್ಷಗಳ ಅವಧಿಯದ್ದು. ಆದರೆ, ಜಿಲ್ಲೆಯ ಜನರಿಗೆ
ಅನುಕೂಲದ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರವಷ್ಟೇ ಯೋಜನೆಯ ಬಗ್ಗೆ ನಂಬಿಕೆ ಮೂಡಲು ಸಾಧ್ಯ. ಹೀಗಾಗಿ, ಆರಂಭದಲ್ಲಿ ಯಾವುದಾದರೂ ಒಂದು ಭಾಗದಲ್ಲಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಪ್ರಾತ್ಯಕ್ಷಿಕೆ ತೋರಿಸೋಣ.
ಜೆ.ಮಂಜುನಾಥ್, ಜಿಲ್ಲಾಧಿಕಾರಿ