ಹುಣಸೂರು: ವಿಶ್ವ ಪರಿಸರದಿನಾಚರಣೆ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಕ್ಕೂಟದ ಸದಸ್ಯರುಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು. ತಾಲೂಕಿನ ಬಿಳಿಕೆರೆಹೋಬಳಿಯ ಮನುಗನಹಳ್ಳಿ ಪ್ರೌಢಶಾಲಾ ಆವರಣದಲ್ಲಿ ನಡೆದ ಪರಿಸರ ಸಂರಕ್ಷಣೆ ಹಾಗೂ ಗಿಡವಿತರಣಾ ಸಮಾರಂಭದಲ್ಲಿ ಸಸಿಗಳನ್ನು ವಿತರಿಸಿ ತಾಲೂಕು ಯೋಜನಾಧಿಕಾರಿ ಯಶೋಧಾಶೆಟ್ಟಿ ಮಾತನಾಡಿದರು.
ಹಳ್ಳಿಗಳಲ್ಲಿ ಉತ್ತಮ ಪರಿಸರ, ಸಾಮರಸ್ಯದ ಜೀವನ, ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಹಲವಾರು ಸಮಾಜ ಮುಖೀ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಆಯೋಜಿಸುತ್ತಾ ಬಂದಿದೆ ಎಂದರು.
ಉತ್ತಮ ಪರಿಸರ ನಿರ್ಮಾಣ ಮಾಡುವುದು ಒಂದಾಗಿದ್ದು, ಈ ನಿಟ್ಟಿನಲ್ಲಿ ಕಳೆದೊಂದು ವಾರದಿಂದ ಸೀಡ್ ಬಾಲ್ ತಯಾರಿಕೆಯಲ್ಲೂ ಸಂಸ್ಥೆಯು ಮುಂಚೂಣಿಯಲ್ಲಿದೆ. ಒಕ್ಕೂಟದ ಸದಸ್ಯರುಗಳು ತಮ್ಮ ಮನೆಯ ಸುತ್ತಮುತ್ತಲಿನಲ್ಲಿ ಸ್ವತ್ಛತೆ ಕಾಪಾಡುವುದರ ಜೊತೆಗೆ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸುವ ಜವಾಬ್ದಾರಿ ಹೊರಬೇಕೆಂದು ಆಶಿಸಿದರು.
ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀ ಮಾತನಾಡಿ, ಪ್ರತಿಯೊಬ್ಬ ಸದಸ್ಯರು ಕನಿಷ್ಠ 25 ಸಸಿಗಳನ್ನು ನೆಟ್ಟು ಬೆಳೆಸಬೇಕೆಂದು ಮನವಿ ಮಾಡಿದರು. ಸಂಘದ ಸದಸ್ಯರುಗಳು ಸಸಿ ನೆಟ್ಟು ಬೆಳೆಸುವ ಪ್ರತಿಜ್ಞೆ ಮಾಡಿದರು. ಯೋಜನೆಯ ಮೇಲ್ವಿಚಾರಕ ವೇಣುಗೋಪಾಲ್ ಯೋಜನೆಯ ಉದ್ದೇಶ ತಿಳಿಸಿದರು. ಸೇವಾ ಪ್ರತಿನಿಧಿ ಮಂಗಳ ಸೇರಿದಂತೆ ನೂರಕ್ಕೂ ಹೆಚ್ಚು ಸಂಘದ ಸದಸ್ಯರು ಭಾಗವಹಿಸಿದ್ದರು.