Advertisement

ದುಷ್ಕರ್ಮಿಗಳ ಪತ್ತೆಗೆ ಸಹಕರಿಸಿ: ಖಾದರ್‌

03:10 AM Jul 16, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಇದನ್ನು ಕದಡುವ ಕಾರ್ಯವನ್ನು ಯಾರೂ ಮಾಡಬಾರದು. ಶಾಂತಿ ಸಾಮರಸ್ಯ ಕಾಯ್ದುಕೊಳ್ಳಲು ಸರ್ವರೂ ಸಹಕರಿಸಬೇಕು; ಜತೆಗೆ ದುಷ್ಕರ್ಮಿಗಳ ಮಾಹಿತಿಯಿದ್ದಲ್ಲಿ ಪೊಲೀಸ್‌ ಇಲಾಖೆಗೆ ತಿಳಿಸಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಮನವಿ ಮಾಡಿದರು.

Advertisement

ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಶ್ರಮಿಸುತ್ತಿರುವ ಪೊಲೀಸರಿಗೆ ನೈತಿಕಬಲ ನೀಡುವ ಕಾರ್ಯ ಆಗಬೇಕು, ಕೃತ್ಯ ಎಸಗಿದವರ ಜತೆಗೆ ಇದರ ಹಿಂದಿರುವ ಪಿತೂರಿದಾರರನ್ನು ಕೂಡ ಪತ್ತೆಹಚ್ಚುವ ಕಾರ್ಯ ನಡೆಯಲಿದೆ ಎಂದರು.

ಪರಿಹಾರಕ್ಕೆ ಸೂಚನೆ: ಹತ್ಯೆಯಾದ ಅಶ್ರಫ್‌ ಹಾಗೂ ಶರತ್‌ ಅವರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಇಲಾಖೆ ಈ ಕುರಿತಂತೆ ದಾಖಲೆಗಳನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ ಬಳಿಕ ಪರಿಹಾರ ಮಂಜೂರಾಗುತ್ತದೆ. ಅಹಿತಕರ ಘಟನೆಗಳಲ್ಲಿ ಗಾಯಗೊಂಡ ಅಮಾಯಕರ ಚಿಕಿತ್ಸೆ ವೆಚ್ಚದ ಬಗ್ಗೆ ಬಿಲ್‌ಗ‌ಳನ್ನು ನೀಡಿದರೆ ಅವುಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.

ಶರತ್‌ ಹತ್ಯೆಯ ಬಗ್ಗೆ ಸ್ಫೋಟಕ ಮಾಹಿತಿಗಳು ಯಾರಲ್ಲಿಯಾದರೂ ಇದ್ದರೆ ಅದನ್ನು ಪೊಲೀಸ್‌ ಇಲಾಖೆಗೆ ನೀಡಬೇಕು. ಮಾಹಿತಿ ಮರೆಮಾಚುವುದು ಕಾನೂನಿಗೆ ವಿರುದ್ಧವಾಗಿರುತ್ತದೆ ಎಂದವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕಾರ್ಯಕರ್ತರ ಸ್ಪರ್ಧೆಯೇ ಬಿಜೆಪಿ ನಾಯಕರಿಗೆ ಸೂಕ್ತ
ಚುನಾವಣೆಯಲ್ಲಿ ಸಚಿವ ಖಾದರ್‌ ಹಾಗೂ ಸಚಿವ ರಮಾನಾಥ ರೈ ಅವರ ವಿರುದ್ಧ ಬಿಜೆಪಿ ಸಾಮಾನ್ಯ ಕಾರ್ಯಕರ್ತರನ್ನು ಸ್ಪರ್ಧೆಗೆ ನಿಲ್ಲಿಸಿ ಗೆಲ್ಲಿಸುತ್ತದೆ ಎಂಬುದಾಗಿ ಆ ಪಕ್ಷದ ನಾಯಕರ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಕರ್ತರನ್ನು ನಿಲ್ಲಿಸಿದರೆ ನಾಯಕರು ಮರ್ಯಾದೆ ಉಳಿಸಿಕೊಳ್ಳಬಹುದು. ನಾವು ನಮ್ಮ ಕ್ಷೇತ್ರದ ಸರ್ವಧರ್ಮದ ಮತದಾರರ ಬೆಂಬಲ ಹಾಗೂ ಸರಕಾರದ ಜನಪರ ಕಾರ್ಯಕ್ರಮಗಳಡಿಯಲ್ಲಿ ಸ್ಪರ್ಧಿಸುತ್ತಿದ್ದೇವೆ ಎಂದರು. ಮೇಯರ್‌ ಕವಿತಾ ಸನಿಲ್‌, ಕಾರ್ಪೊರೇಟರ್‌ಗಳಾದ ಮಹಾಬಲ ಮಾರ್ಲ, ಅಬ್ದುಲ್‌ ಲತೀಫ್‌, ರಾಧಾಕೃಷ್ಣ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next