Advertisement

ವಿಶ್ವ ಕನ್ನಡ ಸಮ್ಮೇಳನದ ಯಶಸ್ಸಿಗೆ ಸಹಕರಿಸಿ

10:44 AM Jul 31, 2017 | Team Udayavani |

ದಾವಣಗೆರೆ: ರಾಜ್ಯದ ಮಧ್ಯ ಬಿಂದು ದಾವಣಗೆರೆಯಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಮೂರನೇ ವಿಶ್ವ ಕನ್ನಡ ಸಮ್ಮೇಳನದ ಅದ್ಧೂರಿ ಯಶಸ್ಸಿಗೆ ಸರ್ವರೂ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮನವಿ ಮಾಡಿದ್ದಾರೆ.

Advertisement

ಕನ್ನಡ ಸಾಹಿತ್ಯ ಪರಿಷತ್ತು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸಂಯುಕ್ತಾಶ್ರಯದಲ್ಲಿ ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಾರಿಗೆ ಸಂಸ್ಥೆ ಪ್ರಥಮ ರಾಜ್ಯಮಟ್ಟದ ಸಾಹಿತ್ಯ ಸಮಾವೇಶ ಉದ್ಘಾಟಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆಯಲಿರುವ ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಗತ್ಯವಾದ ವಸತಿ, ಸಭಾಂಗಣ, ಸಾರಿಗೆ ಸೌಲಭ್ಯ ಒಳಗೊಂಡಂತೆ ಎಲ್ಲ ಮೂಲ ಸೌಲಭ್ಯ ದಾವಣಗೆರೆಯಲ್ಲಿವೆ. ಬೇರೆ ಕಡೆ ಇರುವ ಸೌಲಭ್ಯಕ್ಕಿಂತಲೂ ಹೆಚ್ಚಿನ ಸೌಲಭ್ಯ ಇಲ್ಲಿವೆ. ಪ್ರತಿಯೊಬ್ಬರು ಸಮ್ಮೇಳನದ ಯಶಸ್ಸಿಗೆ ಶ್ರಮಿಸಬೇಕು ಎಂದರು. 

ಈಚೆಗೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಚರ್ಚೆ ನಡೆಯಿತು. ಕೆಲವರು ಬರಗಾಲದ ಹಿನ್ನೆಲೆಯಲ್ಲಿ ಸಮ್ಮೇಳನ ಮುಂದೂಡಬೇಕು ಎಂದರೆ ಇನ್ನು ಕೆಲವರು ಸಮ್ಮೇಳನ ಮಾಡೋಣ ಎಂದರು. ಒಟ್ಟಾರೆಯಾಗಿ ಡಿಸೆಂಬರ್‌ನಲ್ಲಿ 
ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.

ಕಳೆದ ಬಾರಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ದಲ್ಲಿ ಕೆಲವಾರು ನ್ಯೂನತೆ ಇದ್ದವು ಎಂಬ ಮಾತು ಸಹ ಕೇಳಿ ಬಂದವು. ದಾವಣಗೆರೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಅಂತಹ ಎಲ್ಲ ನ್ಯೂನತೆ ಸರಿಪಡಿಸಿಕೊಂಡು ಸುಗಮ, ಸುಲಲಿತ, ಅಚ್ಚುಕಟ್ಟಾಗಿ ಯಶಸ್ವಿ ಸಮ್ಮೇಳನ ನಡೆಸಲು
ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿಯವರು ಒಳಗೊಂಡಂತೆ ಎಲ್ಲ ಕನ್ನಡದ ಮನಸ್ಸುಗಳು, ಸಂಘಟನೆಗಳು ಸಹಕಾರ ನೀಡಬೇಕು ಎಂದು ಕೋರಿದರು. ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಹೂವಿನಲ್ಲಿ ಅವರು ಜನಿಸಿದ ಕುಪ್ಪಳಿಯ ಮನೆಯ ಪ್ರತಿಕೃತಿಯನ್ನ ತೋಟ ಗಾರಿಕೆ ಇಲಾಖೆಯಿಂದ ಲಾಲ್‌ ಬಾಗ್‌ನಲ್ಲಿ ಪ್ರದರ್ಶಿಸಬೇಕೆಂಬ ಒತ್ತಾಸೆಯ ಹಿನ್ನೆಲೆಯಲ್ಲಿ ಪ್ರತಿಕೃತಿ ನಿರ್ಮಿಸಲಾಗುತ್ತಿದೆ. ಸಾಕಷ್ಟು ಚೆನ್ನಾಗಿ ಮೂಡಿ ಬರುತ್ತಿದೆ ಎಂದು ತಿಳಿಸಿದರು.

ಸಾರಿಗೆ ಸಂಸ್ಥೆಯಲ್ಲಿನ ಕನ್ನಡ ಕ್ರಿಯಾ ಸಮಿತಿಯ ಎಲ್ಲ ಪದಾಧಿಕಾರಿಗಳು ಕನ್ನಡ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಳೆದ ಮೂವತ್ತು ವರ್ಷದಿಂದ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅದರ ಪರಿಣಾಮವಾಗಿ ಸಾರಿಗೆ ಸಂಸ್ಥೆಯಲ್ಲಿ 500ಕ್ಕೂ ಹೆಚ್ಚಿನ ಕವಿ, ಸಾಹಿತಿಗಳು ಇರುವುದು ಸಂತಸದ ವಿಚಾರ. ದಾವಣಗೆರೆಯಲ್ಲಿ ನಡೆಯುತ್ತಿರುವ ಪ್ರಥಮ ಸಾರಿಗೆ ಸಂಸ್ಥೆ ರಾಜ್ಯ ಮಟ್ಟದ ಸಾಹಿತ್ಯ ಸಮಾವೇಶ ಯಶಸ್ವಿಯಾಗಲಿ ಎಂದು ಹಾರೈಸಿದರು. 

Advertisement

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ. ಚನ್ನೇಗೌಡ ಮಾತನಾಡಿ, 1987ಕ್ಕೂ ಮುನ್ನ ಸಂಸ್ಥೆಯಲ್ಲಿ ಇದ್ದಂತಹ ಆಂಗ್ಲಮಯ ವಾತಾವರಣ ದೂರ ಮಾಡುವ ಉದ್ದೇಶದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಚಿಸಿ, ನಿರಂತರ ಹೋರಾಟ
ನಡೆಸಿದ ಫಲವಾಗಿ ಈಗ ಸಾರಿಗೆ ಸಂಸ್ಥೆಯ ಆಡಳಿತದಲ್ಲಿ ಶೇ. 100 ರಷ್ಟು ಕನ್ನಡದ ಬಳಕೆ ಆಗುತ್ತಿದೆ. ಬೇರೆ ಯಾವುದೇ ಇಲಾಖೆಯಲ್ಲಿ ಶೇ. 100 ರಷ್ಟು ಕನ್ನಡದ ಬಳಕೆ ಕಂಡು ಬರುವುದಿಲ್ಲ ಎಂದು ತಿಳಿಸಿದರು.

ಕನ್ನಡದಲ್ಲಿ ಸೇವೆ ಮಾಡುತ್ತಿರುವರನ್ನು ಗುರುತಿಸಿ, ಪ್ರಶಸ್ತಿಯೊಂದಿಗೆ ಸನ್ಮಾನ ಮಾಡಬೇಕು ಎಂಬ ಮಹತ್ತರ ಉದ್ದೇಶದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಪ್ರಾರಂಭಿಸಿದ ನೃಪತುಂಗ ಪ್ರಶಸ್ತಿ 7 ಲಕ್ಷದ 1 ರೂಪಾಯಿ ಮೊತ್ತದ್ದಾಗಿದೆ. ಜ್ಞಾನಪೀಠ ಪ್ರಶಸ್ತಿಗೆ ನೀಡುವ
ಮೊತ್ತಕ್ಕಿಂತಲೂ 1 ರೂಪಾಯಿ ಹೆಚ್ಚಿನ ಮೊತ್ತ ಇರುವುದು ನಮ್ಮ ಹೆಗ್ಗಳಿಕೆ ಎಂದು ಹರ್ಷ ವ್ಯಕ್ತಪಡಿಸಿದರು. ಕ್ರಿಯಾ ಸಮಿತಿಯ ಸಕ್ರಿಯ ಕಾರ್ಯ ಚಟುವಟಿಕೆಯ ಪರಿಣಾಮ ಈಗ ಸಾರಿಗೆ ಸಂಸ್ಥೆಯೊಂದರಲ್ಲೇ 500ಕ್ಕೂ ಹೆಚ್ಚಿನ ಕವಿ, ಸಾಹಿತಿ, ನಾಟಕಕಾರರು ಇದ್ದಾರೆ. ಅವರಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಪ್ರಥಮ ಸಾರಿಗೆ ಸಂಸ್ಥೆ ರಾಜ್ಯ ಮಟ್ಟದ ಸಾಹಿತ್ಯ ಸಮಾವೇಶ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಮೂರು ಸಮಾವೇಶದ ಜೊತೆಗೆ ಕಲಾವಿದರಿಗಾಗಿಯೇ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ, ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಡಾ| ಕೆ.ಎನ್‌. ಇಂಗಳಗಿ ಇತರರು ಇದ್ದರು. ಅಯ್ಯಪ್ಪಯ್ಯ ಹಡಗಲಿಮs… ನಾಡಗೀತೆ ಹಾಡಿದರು. ಕೆ.ಎಸ್‌. ಪ್ರಭು ಸ್ವಾಗತಿಸಿದರು. ಡಾ| ಸಂತೋಷ್‌ ಹಾನಗಲ್‌ ನಿರೂಪಿಸಿದರು.  ವಿವಿಧ ವಿಚಾರ, ಕವಿಗೋಷ್ಠಿ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next