ಬೆಂಗಳೂರು: ಮಳೆ ಪ್ರಮಾಣ ತಗ್ಗುತ್ತಿದ್ದಂತೆಯೇ ರಾಜ್ಯಾದ್ಯಂತ ಚಳಿ ಮತ್ತೆ ಎಂಟ್ರಿ ಕೊಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಚಳಿ ಅಧಿಕವಾಗಿದ್ದು, ಹೆಚ್ಚಿನ ತೇವಾಂಶದ ಜತೆಗೆ ಕೊರೆಯುವ ಚಳಿಗೆ ಜನ ತತ್ತರಿಸಿ ಹೋಗಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನ.22ರ ವರೆಗೆ ಅಧಿಕ ಚಳಿ ಉಂಟಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ಆಗಾಗ ಉಂಟಾಗುತ್ತಿರುವ ವಾಯುಭಾರ ಕುಸಿತ ಮುಂದುವರಿದಿದೆ.
ಹೀಗಾಗಿ ರಾಜ್ಯದಲ್ಲಿ ಹವಾಮಾನದಲ್ಲಿ ವೈಪರೀತ್ಯ ಕಂಡು ಬರುತ್ತಿದೆ. ಇದೀಗ ಮತ್ತೆ ವಾಯುಭಾರ ಕುಸಿತದಿಂದ ತಮಿಳುನಾಡು ಕಡೆಯಿಂದ ರಾಜ್ಯದ ಪೂರ್ವ ದಿಕ್ಕು, ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶದತ್ತ ಹೆಚ್ಚಿನ ಗಾಳಿ ಬೀಸಲಿದೆ.
ಪರಿಣಾಮಈ ಭಾಗಗಳಲ್ಲಿ ತೇವಾಂಶ ಹೆಚ್ಚಲಿದೆ. ಇದರಿಂದ ಮೈ ಕೊರೆಯುವ ಚಳಿಯ ವಾತಾವರಣ ಉಂಟಾಗಲಿದೆ. ಇದೇ ಮಾದರಿಯ ಹವಾಮಾನ ನ.22ರ ವರೆಗೆ ಮುಂದುವರಿಯಲಿದ್ದು, ಇದರ ಜತೆಗೆ ರಾಜ್ಯದ ಅಲ್ಲಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು “ಉದಯವಾಣಿ’ಗೆ ತಿಳಿಸಿದ್ದಾರೆ.
ಕರಾವಳಿಯಲ್ಲೂ ತಾಪಮಾನ ಕಡಿಮೆ: ಮುಂದಿನ 48 ಗಂಟೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಂತೆ ಉತ್ತರ ಒಳನಾಡು ಹಾಗೂ ಕರಾವಳಿಯ ಒಂದೆರಡು ಕಡೆಗಳಲ್ಲಿ ಕಂಡು ಬರುವ ಸಾಧ್ಯತೆಗಳಿವೆ. ಇಷ್ಟು ದಿನ ಮಳೆಯಿಂದ ಕಂಗಾಲಾಗಿದ್ದ ರಾಜಧಾನಿ ಸದ್ಯ ಚಳಿಯಿಂದ ನಡುಗುತ್ತಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದು, ಮುಂಜಾನೆ ಮಂಜು ಮುಸುಕುವ ಸಾಧ್ಯತೆ ಗಳಿವೆ. ವಿಶೇಷವಾಗಿ ರಾತ್ರಿ ಮತ್ತು ಮುಂಜಾನೆ
ಸಮಯದಲ್ಲಿ ಮುಂದಿನ 4 ದಿನಗಳವರೆಗೆ ಅಧಿಕ ಚಳಿ ವಾತಾವರಣ ಮುಂದುವರಿಯಲಿದೆ. ಗರಿಷ್ಠ 26 ಹಾಗೂ ಕನಿಷ್ಠ 16 ಡಿ.ಸೆ. ಉಷ್ಣಾಂಶ ಇರಲಿದೆ. ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸಂಜೆಯಾಗುತ್ತಿ ದ್ದಂತೆಯೇ ಚಳಿಯ ವಾತಾವರಣ ಸೃಷ್ಟಿಯಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ಆಗಾಗ ವಾಯುಭಾರ ಕುಸಿತ ಉಂಟಾಗುತ್ತಿದೆ. ಇದರಿಂದಾಗ ಚೆನ್ನೈನ ಕರಾವಳಿ ಭಾಗಕ್ಕೆ ಹೆಚ್ಚಿನ ಗಾಳಿ ಬೀಸುತ್ತದೆ. ರಾಜ್ಯದ ಕೆಲ ಭಾಗಗಳಿಗೂ ಗಾಳಿ ಬೀಸಲಿದ್ದು, ತೇವಾಂಶದಿಂದ ಚಳಿಯ ಜತೆಗೆ ಮೋಡ ಕವಿದ ವಾತಾವರಣ ಉಂಟಾಗಲಿದೆ.
● ಶ್ರೀನಿವಾಸ ರೆಡ್ಡಿ, ಹವಾಮಾನ ತಜ್ಞರು