ಹೌದು, ಕನಸಲ್ಲೂ ನೆನೆದಿರಲಿಲ್ಲ- ನಾನು ಚಾರಣಿಗಳಾಗಿ ಉಂಚಳ್ಳಿಯ ಆ ಸುಂದರವಾದ ಸೌಂದರ್ಯವನ್ನು ನನ್ನ ಕಣ್ಣಿನಿಂದ ಕಾಣುತ್ತ ಮೈಮರೆತು ಸ್ವರ್ಗ ಸುಖವನ್ನು ಅನುಭವಿಸುತ್ತೇನೆಂದು.
NCCಯ ನೇತೃತ್ವದಲ್ಲಿ ಕೈಗೊಂಡ ಚಾರಣ ಶಿಬಿರದಲ್ಲಿ ಆಯ್ಕೆ ಮಾಡಿದ ಸ್ಥಳವೆಂದರೆ ಉಂಚಳ್ಳಿ ಜಲಪಾತ. ಚಾರಣಕ್ಕೆ ಹೊರಡುವ ಹುಮ್ಮಸ್ಸಿನಿಂದ ರಾತ್ರಿ ನಿದ್ದೆಯೇ ಬರಲಿಲ್ಲ. ಅಂತೂ ಇಂತೂ ಮುಂಜಾನೆ 3. 30 ಆಗೇ ಬಿಟ್ಟಿತ್ತು. ಬಹಳ ಸಂತೋಷದಿಂದ ಎದ್ದು ನಿತ್ಯವಿಧಿಯನ್ನು ಮುಗಿಸಿ, ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ತಲುಪಿದೆವು. ರೈಲಿನಲ್ಲಿ ಆರಂಭವಾದ ನಮ್ಮ ಪಯಣ ಕೊನೆಯಾದದ್ದು ಬೆಳಗ್ಗೆ 11. 30ಕ್ಕೆ ಕುಮಟಾದ ರೈಲ್ವೆ ನಿಲ್ದಾಣದಲ್ಲಿ. ನಂತರ ಮಧ್ಯಾಹ್ನದ ಉಟೋಪಚಾರವನ್ನು ಮುಗಿಸಿ ನಮ್ಮ ಚಾರಣದ ಸಮಯವು ಪ್ರಾರಂಭವಾಯಿತು.
ಹೀಗೆ ಚಾರಣಿಗಳಾಗಿ ಉಂಚಳ್ಳಿಯ ಜಲಪಾತವನ್ನು ನೋಡಲು ಹೋಗುತ್ತಿರುವಾಗ ರಸ್ತೆಯ ಮಧ್ಯೆ ಅನೇಕ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿದೆವು. ನಡೆದು ನಡೆದು ಸಂಜೆಯಾದದ್ದು ಗೊತ್ತೇ ಆಗಲಿಲ್ಲ. ಸಂಜೆ ಸುಮಾರು 5:30ರ ಹೊತ್ತಿಗೆ ಒಂದು ಕಾಡು ತಲುಪಿದೆವು. ಎಲ್ಲಿಲ್ಲದ ಖುಷಿಯೊಂದಿಗೆ ಸ್ವಲ್ಪ ಭಯವೂ ತುಂಬಿತ್ತು. ಜನಸಂಚಾರವಿಲ್ಲದ ನಿರ್ಜನ ಪ್ರದೇಶದ ನೀರವ ವಾತಾವರಣ ಸುತ್ತೆಲ್ಲ ತಾಂಡವವಾಡುತ್ತಿತ್ತು. ಸುತ್ತಲೂ ಕಂಗೊಳಿಸುವ ಬೆಟ್ಟ, ಗುಡ್ಡ ಕಣ್ಣನೋಟಕ್ಕೆ ಜೇನ ಸವಿಯನ್ನು ಪ್ರಕೃತಿ ಉಣಬಡಿಸುತ್ತಿತ್ತು. ನೀಲಾಕಾಶ ಚಿತ್ತಾಕರ್ಷಕವಾಗಿ ಕಂಗೊಳಿಸುತ್ತಿತ್ತು. ಇಂಥ ಚಿತ್ತಾಕರ್ಷಕ ಪ್ರಕೃತಿಯ ಮಡಿಲಲ್ಲಿ ಇದ್ದ ನನಗೆ ಏನೋ ಸಂತೋಷ ಕುಣಿದು ಕುಪ್ಪಳಿಸುವಂತಿತ್ತು. ಹೀಗೆ ಕಾಡುಗಳ ಮಧ್ಯದಲ್ಲಿ ಪಯಣ ಸಾಗುತ್ತಿತ್ತು. ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತ ಮುನ್ನಡೆದೆವು. ಕೊನೆಗೂ ಒಂದು ವಿಶಾಲವಾದ ಹಸಿರು ಹುಲ್ಲಿನಿಂದ ಹೆಣೆದ ಚಾಪೆಯಂತೆ ಕಂಗೊಳಿಸುತಿದ್ದ ಸ್ಥಳ ಸಿಕ್ಕಿತು. ಅದರ ತೀರದಲ್ಲೊಂದು ಸರೋವರ. ಅಷ್ಟು ಹೊತ್ತಿಗೆ ಸೂರ್ಯ ತನ್ನ ದೈನಂದಿನ ಕಾರ್ಯವನ್ನು ಮುಗಿಸಿ ಅಸ್ತಂಗತನಾಗಲು ತಯಾರಿ ನಡೆಸಿದ್ದ. ಹೀಗೆ, ನಾವು ವಿಶ್ರಾಂತಿ ಪಡೆದು ಮನೋರಂಜನೆ ಕಾರ್ಯಗಳಲ್ಲಿ ತೊಡಗಿದ್ದೆವು. ನಾನಂತೂ ಪ್ರಕೃತಿಯ ಸವಿಯನ್ನು ಕಣ್ಣಿನಿಂದ ಹೀರುತ್ತಿದ್ದೆ. ಆ ಕಾಡುಗಳ ಮಧ್ಯೆ ಸ್ವರ್ಗಸದೃಶವಾದ ಸುಖವನ್ನನುಭವಿಸುತ್ತಿರುವಾಗ ಆಕಾಶದಂಚಿನ ಗಿರಿಗಳ ಮಧ್ಯೆ ಏನೋ ಹೊಳಪು ತೋರುತ್ತಿತ್ತು. ಪ್ರಕೃತಿಯ ಮುದ್ದಾದ ಬಿಂಬವನ್ನು ಅಸಾಮಾನ್ಯವಾಗಿ ಈ ಬೆಳದಿಂಗಳ ಚಂದ್ರನು ತೆರೆದಿಡುತ್ತಿದ್ದ. ಚಳಿರಾಯ ಮಾತ್ರ ಬೆನ್ನು ಹತ್ತಿದ ಬೇತಾಳನಂತೆ ನಮ್ಮನ್ನು ಬೆನ್ನಟ್ಟಿಯೇ ಬಿಟ್ಟಿದ್ದನು. ಹಾಗೂ ಹೀಗೂ ಪೇಚಾಡಿ ಬೆಂಕಿ ಕಾಯಿಸುತ್ತಿರುವಾಗಲೇ ಮುಂಜಾನೆಯಾಗಿಯೇ ಬಿಟ್ಟಿತು.
ಆ ಕೊರೆಯುವ ಚಳಿಯಲ್ಲಿ ಸೂರ್ಯನ ಮುಂಜಾನೆಯ ಆಗಮನ. ಆಗಂತೂ ನನಗೆ ಸ್ವರ್ಗದಲ್ಲಿರುವಂತೆ ಭಾಸವಾಗುತ್ತಿತ್ತು. ಎಳೆ ಬಿಸಿಲ ಕಾರಣ ಸೂರ್ಯನ ಕಿರಣ ನೀರಲೆಗಳಲ್ಲಿ ಪ್ರತಿಬಿಂಬವಾಗುತ್ತಿತ್ತು. ಅಲೆಗಳು ಬಂಡೆಗಳಿಗೆರಗಿ ಜುಳುಜುಳು ನಿನಾದವನ್ನುಂಟುಮಾಡುತಿತ್ತು. ಇದನ್ನು ವೀಕ್ಷಿಸಿದ ನನ್ನ ಕಣ್ಣುಗಳು ಮಧುರವಾದ ಸೌಂದರ್ಯವನ್ನು ಆಸ್ವಾದಿಸುತ್ತಿತ್ತು. ಹೀಗೆ ಆ ದಿನದ ದೈನಂದಿನ ಕಾರ್ಯ ಮುಗಿಸಿ ಉಂಚಳ್ಳಿ ಜಲಪಾತದ ಸೌಂದರ್ಯವನ್ನು ವೀಕ್ಷಿಸಲು ಹೊರಟೆವು. ಸವಿಸ್ತಾರವಾದ ಉತ್ತುಂಗದ ಪರ್ವತ ಸರಣಿ ದೂರದಿಂದಲೇ ಕಂಗೊಳಿಸುತ್ತಿತ್ತು. ಪಶ್ಚಿಮ ಘಟ್ಟ ಸಾಲಿನ ನಡುವೆ ಕಂಗೊಳಿಸುವ ದಟ್ಟ ಅರಣ್ಯ. ಆ ಅರಣ್ಯದ ಮಧ್ಯೆ ಜಲಸುಂದರಿ ಉಂಚಳ್ಳಿ ಯು ಹರಿಯುವ ರೀತಿ ಮೈಮನಗಳನ್ನು ಮುದಗೊಳಿಸಿಮಂತ್ರಮುಗ್ಧªಳನ್ನಾಗಿ ಮಾಡಿತು. ಬೆಳ್ಳಗೆಯ ಹಾಲ್ನೊರೆಯ ಜಲಪಾತ. ಈ ಜಲಪಾತವು ಶಿರಸಿಯ ಶಂಕರ ದೇವರ ಕೆರೆಯಲ್ಲಿ ಹುಟ್ಟಿ ಮಾನಿ ಹಳ್ಳವಾಗಿ ಹರಿದು ಬರುವ ಇದು ಉಂಚಳ್ಳಿಯಲ್ಲಿ ಕಪ್ಪು ಬಣ್ಣದ ಬೃಹತಾಕಾರದ ಬಂಡೆಯ ಮೇಲಿನಿಂದ ಸುಮಾರು 365ಅಡಿ ಎತ್ತರದಿಂದ ಧುಮುಕುತ್ತದಂತೆ. ಹೀಗೆ ಅರಣ್ಯಗಳ ಮಧ್ಯೆ ಅಘನಾಶಿನಿಯಾಗಿ ಹರಿದು ಅರಬ್ಬೀ ಸಮುದ್ರ ಸೇರುತ್ತದೆ.
ಚೈತಾಲಿ
ದ್ವಿತೀಯ ಎಂ. ಎ. ಮಂಗಳೂರು ವಿಶ್ವವಿದ್ಯಾನಿಲಯ