Advertisement

ಬೆಳಗ್ಗೆ ಚಳಿ, ಸಂಜೆ ಮೋಡ, ರಾತ್ರಿ ಸೆಕೆ!

10:05 AM Dec 19, 2019 | mahesh |

ಮಹಾನಗರ: ಡಿಸೆಂಬರ್‌ ತಿಂಗಳ ಅರ್ಧಭಾಗ ಪೂರ್ಣಗೊಂಡಿದ್ದರೂ ಕರಾವಳಿ ಭಾಗದಲ್ಲಿ ಇನ್ನು ಕೂಡ ಪೂರ್ಣ ಪ್ರಮಾಣದ ಚಳಿಗಾಲದ ಅನುಭವಕ್ಕೆ ಬಂದಿಲ್ಲ ಎನ್ನುವುದು ವಾಸ್ತವ. ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ದ.ಕ., ಉಡುಪಿ ಜಿಲ್ಲೆ ಸಹಿತ ಕರಾವಳಿ ಭಾಗದಲ್ಲಿ ಮೈ ಕೊರೆಯುವ ಚಳಿಯ ಅನುಭವಾಗುವುದು ವಾಡಿಕೆ. ಆದರೆ ಜಾಗತಿಕ ಮಟ್ಟದ ಹವಾಮಾನ ಬದಲಾವಣೆಯ ಪರಿಣಾಮ ಗಮನಾರ್ಹವಾಗಿದ್ದು, ಕರಾವಳಿ ಭಾಗಕ್ಕೂ ವ್ಯಾಪಿಸುತ್ತಿದ್ದು, ಹೀಗಾಗಿ, ಚಳಿಗಾಲದಲ್ಲಿ ಅದರಲ್ಲಿಯೂ ರಾತ್ರಿವೇಳೆ ಚಳಿಗಿಂತ ಸೆಕೆಯ ಪ್ರಮಾಣ ಹೆಚ್ಚಾಗುತ್ತಿದೆ.

Advertisement

ಅಂತರ್ಜಲ ಮಟ್ಟ ಕುಸಿತ
ಹೆಚ್ಚುತ್ತಿರುವ ಕಟ್ಟಡಗಳು, ಜನಸಂಖ್ಯೆ, ಕಾಡು ನಾಶ ಮುಂತಾದ ಕಾರಣದಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ ಕಾಣುತ್ತಿದೆ. ಅಕ್ಟೋಬರ್‌, ನವೆಂಬರ್‌ ತಿಂಗಳ ಅಂಕಿ ಅಂಶದ ಪ್ರಕಾರ ಮಂಗಳೂರು ನಗರದಲ್ಲಿ 1.57 ಮೀ.ನಷ್ಟು ಕುಸಿತ ಕಂಡಿದ್ದು, ಉಳಿದ ತಾಲೂಕುಗಳಲ್ಲೂ ಇಳಿಕೆಯಾಗಿದೆ. ನೀರಿನ ಮಟ್ಟ 400ರಿಂದ 500 ಅಡಿಗೆ ಇಳಿದಿದೆ. ಕಳೆದ ವರ್ಷ ಪಶ್ಚಿಮಘಟ್ಟ ತಪ್ಪಲಿನಲ್ಲಿ ಉಂಟಾಗಿದ್ದ ಭೂಕುಸಿತದಿಂದಾಗಿ ಸುಮಾರು 2,500 ಹೆಕ್ಟೆರ್‌ ಅರಣ್ಯ ನಾಶ ಹೊಂದಿತ್ತು.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಅರಣ್ಯ ಪ್ರದೇಶ ದಿನದಿಂದ ದಿನಕ್ಕೆ ನಾಶ ವಾಗುತ್ತಿರುವುದೇ ಹವಾಮಾನ ವೈಪರಿತ್ಯದ ಪರಿಣಾಮ ಎಂದು ಪರಿಸರವಾದಿ ಗಳು ಹೇಳುತ್ತಿದ್ದಾರೆ. ಈ ಹಿಂದೆ ಭೂಕುಸಿತ ಉಂಟಾಗಿದ್ದ ಚಾರ್ಮಾಡಿ, ಮಡಿಕೇರಿ ಭಾಗಗಳಲ್ಲಿ ಸೆಕೆ ಪ್ರಮಾಣ ಹೆಚ್ಚಾಗುತ್ತಿದೆ. ಭೂಕುಸಿತ ಉಂಟಾದ ಪ್ರದೇಶಗಳಲ್ಲೀಗ ಕಲ್ಲು, ಮಣ್ಣು ಮಾತ್ರ ಕಾಣುತ್ತಿದ್ದು, ಸೂರ್ಯನ ಕಿರಣಗಳು ಕಲ್ಲಿಗೆ ನೇರವಾಗಿ ಬೀಳುತ್ತಿದೆ. ಇದೇ ಕಾರಣಕ್ಕೆ ತಂಪಾಗಿರಬೇಕಾದ ಅರಣ್ಯ ಪ್ರದೇಶಗಳಲ್ಲಿಯೂ ಉಷ್ಣಾಂಶ ಹೆಚ್ಚಾ ಗುತ್ತಿದೆ. ಇದರಿಂದ ಕಾಡಿ ನಲ್ಲಿ ರಬೇಕಾದ ಪ್ರಾಣಿಗಳು ಸೆಕೆ ಹೆಚ್ಚಾಗಿ ನಾಡಿಗೆ ಬರಲಾರಂಭಿಸಿವೆ.

ಕರಾವಳಿ ಭಾಗದಲ್ಲಿ ಹತ್ತು ವರ್ಷಗಳಲ್ಲಿ ಈ ರೀತಿಯ ಹವಾಮಾನ ವೈಪರೀತ್ಯ ಉಂಟಾಗಿರಲಿಲ್ಲ. ಇದೇ ಮೊದಲ ಬಾರಿಗೆ ಗರಿಷ್ಠ ಉಷ್ಣಾಂಶವು 38 ಡಿ.ಸೆ. ದಾಟುತ್ತಿದ್ದು, ಚಳಿಗಾಲದಲ್ಲೂ ಸೆಕೆಯ ಅನುಭವವಾಗುತ್ತಿದೆ. ಡಿಸೆಂಬರ್‌ನಲ್ಲಿ ವಾತಾವರಣ ತಂಪಾಗಿ ಬೆಳಗ್ಗೆ ಕೊರೆವ ಚಳಿ ಇರುತ್ತದೆ. ಅದೇ ರೀತಿ, ರಾತ್ರಿ ಆಗುತ್ತಿದ್ದಂತೆ ಮತ್ತೆ ಚಳಿ ಆರಂಭವಾಗುತ್ತದೆ.

ಕೆಲವೇ ದಿನಕ್ಕೆ ಸೀಮಿತವಾಗಿದೆ ಚಳಿಗಾಲ
ಭೂಗರ್ಭಶಾಸ್ತ್ರಜ್ಞ ಅನಂತರಾಮನ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಈ ರೀತಿಯ ಹವಾಮಾನ ವೈಪರಿತ್ಯಕ್ಕೆ ಪಶ್ಚಿಮಘಟ್ಟದಲ್ಲಿ ಕಾಡುನಾಶ, ಭೂಕುಸಿತದ ಜತೆಗೆ ಜಾಗತಿಕ ಹವಾಗುಣ ಬದಲಾವಣೆಯೂ ಕಾರಣ. ಇದೊಂದು ದೀರ್ಘ‌ಕಾಲದಲ್ಲಾಗುವ ಪ್ರಕ್ರಿಯೆಯಾಗಿದ್ದು, ಈಗ ಪರಿಣಾಮ ಬೀರುತ್ತಿದೆ. ವಾತಾವರಣದಲ್ಲಿ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗಿ ಚಳಿ ಕೆಲವೇ ದಿನಕ್ಕೆ ಸೀಮಿತವಾಗುತ್ತಿದೆ. ವಾಯುಗೋಳ ಇಡೀ ಜಗತ್ತಿಗೆ ಒಂದೇ ಆಗಿದ್ದರಿಂದ ಇದೊಂದು ಜಾಗತಿಕ ಸಮಸ್ಯೆ. 37 ಬಿಲಿಯನ್‌ ಟನ್‌ ಕಾರ್ಬನ್‌ ಗಾಳಿ ಸೇರುತ್ತಿದೆ. ಜಾಗತಿಕವಾಗಿಯೂ ಯುರೋಪ್‌, ಫ್ರಾನ್ಸ್‌ಗಳಲ್ಲೂ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

Advertisement

ಸಾಮಾನ್ಯವಾಗಿ ಡಿಸೆಂಬರ್‌ ಸಮಯದಲ್ಲಿ ಶುಭ್ರ ಆಕಾಶ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶುಭ್ರ ಆಕಾಶವಿದ್ದರೂ ಮಧ್ಯಾಹ್ನ ಬಳಿಕ ಚದುರಿದ ಮೋಡ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಸೆಕೆಯ ಅನುಭವವಾಗುತ್ತಿದೆ. ಬೆಳಗ್ಗಿನ ವೇಳೆ ತುಸು ಚಳಿ ಆರಂಭವಾಗಿದೆ ಬಿಟ್ಟರೆ ಉಳಿದಂತೆ ಸೆಕೆ ಹೆಚ್ಚಾಗುತ್ತಿದೆ.

ಮೋಡಗಳ ಚಲನೆ
ದಾಖಲೆ ಎಂಬಂತೆ ಕರ್ನಾಟಕ ಕರಾವಳಿ ಭಾಗಕ್ಕೆ ಈ ವರ್ಷ ಬಂಗಾಳಕೊಲ್ಲಿಯಲ್ಲಿ “ಫೋನಿ’ ಎಂಬ ಚಂಡಮಾರುತ, ಇದಾದ ಬಳಿಕ ಜೂನ್‌ ತಿಂಗಳಲ್ಲಿ “ವಾಯು’, ಕೆಲವು ದಿನಗಳ ಹಿಂದೆ “ಕ್ಯಾರ್‌’, “ಮಹಾ’, “ಬುಲ್‌ ಬುಲ್‌’ ಚಂಡಮಾರುತ ಉಂಟಾಗಿತ್ತು. ಇದೀಗ ಕೇರಳ, ಲಕ್ಷದ್ವೀಪದಲ್ಲಿ ಟ್ರಫ್‌ ಉಂಟಾಗಿದ್ದು, ಇದರ ಪರಿಣಾಮವಾಗಿ ಆಕಾಶದಲ್ಲಿ ಮೋಡಗಳ ಚಲನೆ ಇರುವುದು ಕೂಡ ಚಳಿಗಾಲ ದೂರ ಹೋಗಲು ಕಾರಣ ಎನ್ನುತ್ತಾರೆ ಹವಾಮಾನ ತಜ್ಞರು.

ಅರಣ್ಯ ನಾಶ
ಪಶ್ಚಿಮಘಟ್ಟ ತಪ್ಪಲಿನ ಅರಣ್ಯ ಪ್ರದೇಶ ದಿನದಿಂದ ದಿನಕ್ಕೆ ನಾಶ ಹೊಂದುತ್ತಿದೆ. ಸಸ್ಯ ಸಂಕುಲ, ಜೀವ ಸಂಕುಲಗಳು ನಶಿಸುತ್ತಿದೆ. ಕಳೆದ ಬಾರಿ ಸುಮಾರು 173 ಕಡೆಗಳಲ್ಲಿ ಭೂಕುಸಿತ ಉಂಟಾಗಿ, ಸುಮಾರು 2,500 ಹೆಕ್ಟೆರ್‌ ಅರಣ್ಯ ನಾಶ ಹೊಂದಿತ್ತು. ಮತ್ತೂಂದೆಡೆ, ಅರಣ್ಯ ಪ್ರದೇಶದಲ್ಲಿ ಹೋಂ ಸ್ಟೇ ನಿರ್ಮಾಣದಿಂದ ಕಾಡುಗಳು ಕ್ರಮೇಣ ಕಡಿಮೆಯಾಗುತ್ತಿದೆ. ಇದು ಕೂಡ ಹವಾಮಾನ ವೈಪರಿತ್ಯಕ್ಕೆ ಕಾರಣ ಎನ್ನಬಹುದು.
– ದಿನೇಶ್‌ ಹೊಳ್ಳ, ಪರಿಸರವಾದಿ

ಮೋಡಗಳ ಚಲನೆ
ಕರಾವಳಿ ಭಾಗದಲ್ಲಿ ಡಿಸೆಂಬರ್‌ ವೇಳೆ ಚಳಿ ಇರಬೇಕಿತ್ತು. ಆಕಾಶದಲ್ಲಿ ಮೋಡಗಳ ಚಲನೆ ಇರುವುದಿಂದ ಗರಿಷ್ಠ ಉಷ್ಣಾಂಶ ಏರಿಕೆಯಾಗಿ ಸೆಕೆ ಹೆಚ್ಚುತ್ತಿದೆ. ಹಿಂಗಾರು ಮಾರುತ ಕ್ಷೀಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಶುಭ್ರ ಆಕಾಶ ಉಂಟಾಗಿ, ಚಳಿ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ.
 - ಸುನಿಲ್‌ ಗವಾಸ್ಕರ್‌, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next