Advertisement
ಎಚ್ಚೆತ್ತರೂ ಎಡವಿತು ಇತರ ದೇಶಗಳಿಗೆ ಹೋಲಿಸಿದರೆ ಕೊಲಂಬಿಯಾ ಕೋವಿಡ್-19 ಅನ್ನು ನಿಯಂತ್ರಿಸಲು ಬಹಳ ಬೇಗನೆ ತಯಾರಿ ಮಾಡಿಕೊಂಡಿತ್ತು. ಎದುರಾಗಲಿರುವ ಬಿಕ್ಕಟ್ಟನ್ನು ಅರಿತು ರಾಜಧಾನಿ ಬೊಗೊಟದಲ್ಲಿ ಮಾರ್ಚ್ 18ರ ವೇಳೆಗೆ ಸಂಪೂರ್ಣ ಲಾಕ್‌ಡೌನ್ ಮಾಡಿದಲ್ಲದೆ ಸಾಮಾಜಿಕ ಅಂತರ ಸೇರಿದಂತೆ ಇತರ ನಿಯಮಗಳನ್ನು ಪಾಲಿಸುವಂತೆ ಕಠಿನ ಆದೇಶ ಹೊರಡಿಸಿತ್ತು.
ಮರಣಾಂತಿಕ ಸೋಂಕಿಗೆ ಬಲಿಯಾಗಿರುವ ಪ್ರತಿಯೊಂದು ರಾಷ್ಟ್ರವನ್ನು ದುಃಸ್ವಪ್ನದಂತೆ ಕಾಡುತ್ತಿರುವ ಸಮಸ್ಯೆ ಆರ್ಥಿಕತೆಯ ಅನಿಶ್ಚಿತತೆ. ಈ ಮಹಾಸಂಕಟವನ್ನು ಎದುರಿಸುತ್ತಿರುವ ಎಲ್ಲ ದೇಶಗಳು ಲಾಕ್‌ಡೌನ್ ಸಡಿಲಿಕೆಗೆ ಮುಂದಾಗುತ್ತಿದ್ದು, ಕೊಲಂಬಿಯ ಕೂಡ ಈ ಸಂಕಷ್ಟದಿಂದ ಹೊರ ಬರಲು ನಿಬಂಧನೆಗಳನ್ನು ತೆರವುಗೊಳಿಸುತ್ತಿದೆ. ಈಗಾಗಲೇ ಕೆಲ ಕೈಗಾರಿಕಾ ಘಟಕಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಟ್ಟಿರುವ ದೇಶ ಹಂತಹಂತವಾಗಿ ಲಾಕ್‌ಡೌನ್ ನಿಯಮಗಳಲ್ಲಿ ವಿನಾಯಿತಿ ನೀಡಲು ಮುಂದಾಗಿದೆ. ಆದರೆ ಕುಸಿಯುತ್ತಿರುವ ಆರ್ಥಿಕ ಕ್ಷೇತ್ರದ ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿ ಸೋಂಕು ಪ್ರಸರಣ ಮಟ್ಟ ಹೆಚ್ಚಾಗುತ್ತದೆಯೇ ಎಂಬ ಸಹಜ ಆತಂಕ ಕೊಲಂಬಿಯದ ದೇಶವಾಸಿಗಳನ್ನು ಕಾಡುತ್ತಿದೆ.
Related Articles
ಲಾಕ್‌ಡೌನ್ ನಿಯಮಗಳಿಂದ ಇಲ್ಲಿನ ಮಧ್ಯಮ ವರ್ಗ ಮತ್ತು ಬಡ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದು, ಆದಾಯ ಮೂಲವಿಲ್ಲದ ಈ ಕುಟುಂಬಗಳು ಹೊಟ್ಟೆಗೆ ತಣ್ಣೀರಿನ ಬಟ್ಟೆ ಹಾಕಿಕೊಂಡಿವೆ. ನಿಯಮಗಳಲ್ಲಿ ವಿನಾಯಿತಿ ನೀಡಿದ್ದರೂ ಕೇವಲ ಸೀಮಿತ ವರ್ಗದಲ್ಲಿ ಕಾರ್ಯಾಚರಿಸುವ ಆದೇಶ ಇರುವ ಕಾರಣ ಕೆಲವೇ ಕೆಲವು ಜನರು ಕೆಲಸ ಮಾಡುತ್ತಿದ್ದಾರೆ. ಪರಿಣಾಮ ಉಳಿದ ಅರ್ಧದಷ್ಟು ಜನರು ಕೆಲಸವಿಲ್ಲದೆ ಮನೆಯಲ್ಲಿ ಉಳಿದಿದ್ದಾರೆ. ಪರಿಣಾಮ ಕೈಯಲ್ಲಿ ಬಿಡುಗಾಸು ಇಲ್ಲದಂತಾಗಿದ್ದು, ನಿರ್ದಿಷ್ಟವಾಗಿ ರಾಜಧಾನಿಯಲ್ಲಿ ಹಸಿವಿನ ಆಕ್ರಂದನ ಹೆಚ್ಚುತ್ತಿದೆ.
Advertisement
ಮೊದಲೇ ಬಡ ರಾಷ್ಟ್ರವಾಗಿರುವ ಕೊಲಂಬಿಯದ ಜಿಡಿಪಿ ದರವೂ ಸ್ಪೇನ್‌ನಂತಹ ದೇಶಗಳೊಂದಿಗೆ ಹೋಲಿಸಿದರೆ ತೀರಾ ಕಡಿಮೆ ಇದೆ. ಶೇ.50ರಷ್ಟು ಜನರು ಜೀವನೋಪಾಯಕ್ಕಾಗಿ ಅಸಂಘಟಿತ ವಲಯವನ್ನು ನಂಬಿಕೊಂಡಿದ್ದಾರೆ. ಕೇವಲ ಸೀಮಿತ ಮಟ್ಟದಲ್ಲಿ ತೈಲ, ಅನಿಲ, ಪರ್ಯಾಯ ಉತ್ಪನ್ನಗಳು ಸೇರಿದಂತೆ ಕಾಫಿ ಮತ್ತು ಚಿನ್ನದ ರಫ್ತು ಚಟವಟಿಕೆಯಲ್ಲಿ ತೊಡಗಿಸಿಕೊಂಡಿರುವ ಈ ದೇಶ ಆರ್ಥಿಕವಾಗಿ ಹಿಂದುಳಿದಿದೆ. ಇದೀಗ ಕೋವಿಡ್-19ನಿಂದಾಗಿ ಆರ್ಥಿಕ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಲಿದ್ದು,ದೇಶಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಮೇ ಮಧ್ಯಾಂತರಕ್ಕೆ ಕೊಲಂಬಿಯ ದೇಶವನ್ನು ಪುನರಾರಂಭಿಸಲು ನಿರ್ಧರಿಸಿದ್ದರೂ ಭವಿಷ್ಯದ ಹಿತದೃಷ್ಟಿಯಿಂದಾಗಿ ಸಾಕಷ್ಟು ಜನರು ಮನೆಯಲ್ಲಿಯೇ ಉಳಿಯುವ ಮುನ್ಸೂಚನೆ ಕಾಣುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಒತ್ತು ನೀಡಲಿದ್ದು, ಹಣಕಾಸು ಚಟುವಟಿಕೆಗಳಿಂದ ದೂರ ಉಳಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.