Advertisement
ಮಳೆಯ ಆರ್ಭಟಕ್ಕೆ ಉತ್ತರ ಕೊಡಗಿನಲ್ಲಿ ಕಾಫಿ ತೋಟಗಳಿದ್ದ ಗುಡ್ಡಗಳೇ ಕೊಚ್ಚಿ ಹೋಗಿದ್ದು, ಸದ್ಯಕ್ಕೆ ಅಲ್ಲಿ ಕಾಫಿ ಬೆಳೆಯನ್ನು ಕಲ್ಪಿಸಿಕೊಳ್ಳಲಾಗದಂತಹ ಸ್ಥಿತಿಗೆ ತಲುಪಿದೆ.
Related Articles
Advertisement
ಈ ಭಾಗದಲ್ಲಿ ಅರ್ಧ ಎಕರೆಯಿಂದ ನಾಲ್ಕೈದು ಎಕರೆ ತೋಟವಿರುವ ಕಾಫಿ ಬೆಳೆಗಾರರೇ ಶೇ.80ರಷ್ಟಿದ್ದಾರೆ. ಆದರೆ ತೋಟದ ಕುರುಹೂ ಇಲ್ಲದಂತೆ ನಾಶವಾಗಿದ್ದು, ಮತ್ತೆ ಹೊಸದಾಗಿಯೇ ಎಲ್ಲವನ್ನೂ ಸೃಷ್ಟಿಸಬೇಕಿದೆ. ಕಾಫಿ ಮಂಡಳಿ ಪ್ರಾಥಮಿಕ ವರದಿಯಂತೆ 5,000 ಎಕರೆ ತೋಟ ನಾಶವಾಗಿ, ಭೂಕುಸಿತ ಉಂಟಾಗಿದೆ ಎಂದು ಉಲ್ಲೇಖೀಸಲಾಗಿದೆ. ಆದರೆ ವಾಸ್ತವದಲ್ಲಿ 10,000 ಎಕರೆಗಿಂತ ಹೆಚ್ಚು ಪ್ರದೇಶದ ತೋಟ ಹಾಳಾಗಿದೆ ಎಂದು ಹೇಳಿದ್ದಾರೆ.
ಇನ್ನು ದಕ್ಷಿಣ ಕೊಡಗು ಭಾಗದಲ್ಲಿ ಭೂಕುಸಿತ ಉಂಟಾಗದಿದ್ದರೂ ಬೆಳೆ ನಾಶವಾಗಿದೆ. ಕಾಫಿ ಮಾತ್ರವಲ್ಲದೆ ಮೆಣಸು, ಏಲಕ್ಕಿ, ಬಾಳೆ ಬೆಳೆಯೂ ನಷ್ಟವಾಗಿದೆ. ಗುಡ್ಡಗಳೇ ನೀರಂತೆ ಹರಿದಿರುವುದರಿಂದ ನೆರಳಿನಲ್ಲೇ ಬೆಳೆಯುವ ಏಲಕ್ಕಿ ಬೆಳೆಗೆ ಹಲವೆಡೆ ಪೂರಕ ವಾತಾವರಣವೇ ಇಲ್ಲದಂತಾಗಿದೆ. ಈ ಭಾಗದಲ್ಲಿ ಮತ್ತೆ ಕಾಫಿ ಬೆಳೆ ತೆಗೆಯಲು 2-3 ವರ್ಷ ಬೇಕಾಗಬಹುದೆಂದು ನೋವಿನಿಂದ ನುಡಿದರು.
ಸಂಕಷ್ಟದಲ್ಲಿ ಕಾರ್ಮಿಕರು: ಉತ್ತರ ಕೊಡಗಿನಲ್ಲಿ ಭೂಕುಸಿತ ಉಂಟಾಗಿರುವುದರಿಂದ ಮತ್ತೆ ಕೃಷಿ ಚಟುವಟಿಕೆ ಆರಂಭವಾಗಲು ಸಾಕಷ್ಟು ಸಮಯವಾಗಲಿದೆ. ಅಲ್ಲಿಯವರೆಗೆ ಲಕ್ಷಾಂತರ ಕಾರ್ಮಿಕರ ಜೀವನ ನಿರ್ವಹಣೆ ಹೇಗೆಂಬ ಆತಂಕ ಮೂಡಿದೆ.
ಉತ್ತಮ ಫಸಲಿನ ನಿರೀಕ್ಷೆ ಮಣ್ಣುಪಾಲು: ರಾಜ್ಯದಲ್ಲಿ ಮೂರು ವರ್ಷ ಬರ ಕಾಣಿಸಿಕೊಂಡಿದ್ದರಿಂದ ಉತ್ತಮ ಕಾಫಿ ಫಸಲು ಪಡೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪೂರಕ ವಾತಾವರಣ, ಗಿಡದಲ್ಲಿ ಸಾಕಷ್ಟು ಹೂವು ಸೃಷ್ಟಿಯಾಗಿದ್ದರಿಂದ ಬೆಳೆಗಾರರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಮಳೆಯಿಂದಾಗಿ ಕಾಫಿ ಫಸಲು ತೀವ್ರ ನಷ್ಟವಾಗಿದೆ. ಸಾಲ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಎಂ.ಎಸ್. ಭೋಜೇಗೌಡ ಹೇಳಿದರು.
1,5000 ಮಂದಿ ಸಣ್ಣ ಬೆಳೆಗಾರರ ಕಾಫಿ ಬೆಳೆ ನಷ್ಟವಾಗಿದ್ದು, ಮತ್ತೆ ಉತ್ತಮ ಬೆಳೆ ಪಡೆಯಲು ಎರಡೂ¾ರು ವರ್ಷ ಕಾಯಬೇಕು. ಅಲ್ಲಿಯವರೆಗೆ ಬೆಳೆಗಾರರು, ತೋಟಗಳನ್ನೇ ಅವಲಂಬಿಸಿರುವ ಕಾರ್ಮಿಕರ ಸ್ಥಿತಿ ಅಯೋಮಯವಾಗಿದೆ. ಪರಿಸರ ಸಂರಕ್ಷಣೆ ಜತೆಗೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದಲ್ಲೇ ಉನ್ನತ ಸ್ಥಾನದಲ್ಲಿರುವ ಕೊಡಗಿನ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ನೀಡದಿರುವುದು ದುರದೃಷ್ಟಕರ.– ನಂದ ಸುಬ್ಬಯ್ಯ, ಕೊಡಗು ಜಿಲ್ಲಾ ಸಣ್ಣ ಬೆಳೆಗಾರರ ಸಂಘದ ಉಪಾಧ್ಯಕ್ಷ ಕಂದಾಯ ಇಲಾಖೆ ಹಾಗೂ ಕಾಫಿ ಮಂಡಳಿ ವತಿಯಿಂದ ನಷ್ಟ ಪ್ರಮಾಣದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ದೇಶಾದ್ಯಂತ ಇರುವ ಮಂಡಳಿ ಅಧಿಕಾರಿಗಳನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದೆ. ವರದಿ ಕೈ ಸೇರಿದ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸದ್ಯದಲ್ಲೆ ಬೆಳೆಗಾರರ ಪ್ರತಿನಿಧಿಗಳು, ಕಾಫಿ ಬೋರ್ಡ್‌ನ ಪದಾಧಿಕಾರಿಗಳು ಹಾಗೂ ಆ ಭಾಗದ ಜನಪ್ರತಿನಿಧಿಗಳ ಸಭೆ ಕರೆದು ನಷ್ಟ, ಪರಿಹಾರ, ಪುನಶ್ಚೇತನ ಕುರಿತು ಚರ್ಚಿಸಲಾಗುವುದು.
– ಎಂ.ಎಸ್. ಭೋಜೇಗೌಡ, ಕಾಫಿ ಬೋರ್ಡ್ ಅಧ್ಯಕ್ಷ – ಕೀರ್ತಿಪ್ರಸಾದ್ ಎಂ.