Advertisement

ನೆಲ್ಲಿಹುದಿಕೇರಿಯಲ್ಲಿ ಒತ್ತುವರಿ ಜಾಗದ ಕಾಫಿ ತೋಟ ತೆರವು

07:49 PM Sep 09, 2019 | Team Udayavani |

ಮಡಿಕೇರಿ : ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಸುರಿದ ಮಹಾಮಳೆಯಿಂದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾದವರಿಗೆ ನೆಲೆಯೊದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ.

Advertisement

ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿಯಲ್ಲಿ ಒತ್ತುವರಿ ಮಾಡಿಕೊಂಡು ಕಾಫಿ ತೋಟವನ್ನಾಗಿ ಪರಿವರ್ತಿಸಲಾಗಿದ್ದ ಜಾಗವನ್ನು ವಶಕ್ಕೆ ಪಡೆಯಲಾಗಿದೆ.– ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರ ನಿರ್ದೇಶನದಂತೆ ಉಪ ಭಾಗಾಧಿಕಾರಿಗಳ ನೇತೃತ್ವದ ತಂಡದ ಉಸ್ತುವಾರಿಯಲ್ಲಿ ನೆಲ್ಲಿಹುದಿಕೇರಿ ಗ್ರಾಮದ ಸರ್ವೇ ನಂಬರ್‌ 169/1 ರಲ್ಲಿ ಅನಧಿಕೃತವಾಗಿ ಒತ್ತುವರಿಯಾಗಿದ್ದ 10.83 ಎಕರೆ ಜಾಗವನ್ನು ತೆರವುಗೊಳಿಸಿ, ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಕೊಡಗು ಜಿಲ್ಲೆಯಲ್ಲಿ 2019ನೇ ಸಾಲಿನಲ್ಲಿ ಸಂಭಸಿದ ಪ್ರಕೃತಿ ಕೋಪದಿಂದ ಸೋಮವಾರಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿ, ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಗುಹ್ಯ ಗ್ರಾಮಗಳಲ್ಲಿನ ಅನೇಕ ಮನೆಗಳು ಪ್ರವಾಹದಿಂದ ಮುಳುಗಿ ಹೋಗಿದ್ದು, ಈ ಭಾಗದ ಜನರನ್ನು ಶಾಶ್ವತವಾಗಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಒತ್ತುವರಿ ಜಾಗವನ್ನು ವಶಕ್ಕೆ ಪಡೆಯಲಾಗುತ್ತಿದೆ.

ಮಹಾಮಳೆಯಿಂದ ನೆಲೆ ಕಂಡಿರುವವರಿಗೆ ನೆಲೆಯೊದಗಿಸುವ ನಿಟ್ಟಿನಲ್ಲಿ ಈಗಾಗ‌ಲೆ ಶಾಸಕರು, ಜಿಲ್ಲಾಧಿಕಾರಿಗಳು, ಉಪಭಾಗಾ ಧಿಕಾರಿಗಳು, ತಹಶೀಲ್ದಾರರು ಹಾಗೂ ಇತರ ಅಧಿಕಾರಿಗಳು ಸ್ಥಳಾಂತರಕ್ಕೆ ಯೋಗ್ಯವಾದ ಜಾಗಗಳನ್ನು ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಾದ್ಯಂತ ಒತ್ತುವರಿಯಾಗಿರುವ ಸರ್ಕಾರಿ ಜಾಗಗಳನ್ನು ಗುರುತಿಸಿ ತೆರವುಗೊಳಿಸಲು ಜಿಲ್ಲಾಡಳಿತವು ಉಪಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳ ತಂಡವನ್ನು ರಚಿಸಿದೆ. ಜಿಲ್ಲೆಯಾದ್ಯಂತ ಒತ್ತುವರಿಯಾಗಿರುವ ಪೈಸಾರಿ ಜಾಗವನ್ನು ವಶ ಪಡಿಸಿಕೊಳ್ಳುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಉಪಭಾಗಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next