Advertisement

“ಕಾಫಿ ಡೇ’ಅಂಗ ಸಂಸ್ಥೆ ಡಾರ್ಕ್‌ ಫಾರೆಸ್ಟ್‌ ಫರ್ನಿಚರ್‌ಗೆ ಬೀಗ

11:05 PM Nov 25, 2019 | Lakshmi GovindaRaj |

ಚಿಕ್ಕಮಗಳೂರು: ಪ್ರಖ್ಯಾತ “ಕಾಫಿ ಡೇ’ಯ ಅಂಗಸಂಸ್ಥೆ ಡಾರ್ಕ್‌ ಫಾರೆಸ್ಟ್‌ ಫರ್ನಿಚರ್‌ (ಡ್ಯಾಪ್ಕೋ) ಕಂಪನಿಗೆ ಸೋಮವಾರ ಶಾಶ್ವತವಾಗಿ ಬೀಗ ಹಾಕಲಾಗಿದೆ. “ಕಾಫಿ ಡೇ’ ಸಂಸ್ಥಾಪಕ ಸಿದ್ದಾರ್ಥ್ ಹೆಗಡೆ ಸಾವಿನ ನಂತರ ಸಂಸ್ಥೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದಾಗಿ ಕಾರ್ಮಿಕರು ಪರದಾಡುವಂತಾಗಿದೆ.

Advertisement

“ಕಾಫಿ ಡೇ ಗ್ಲೋಬಲ್‌’ ಮುಂಭಾಗದ ಗೇಟಿನ ಮೇಲೆ ಸಂಸ್ಥೆಯನ್ನು ಮುಚ್ಚಿರುವ ಕುರಿತು ನೋಟಿಸ್‌ ಅಂಟಿಸಲಾಗಿದೆ. ಇಲ್ಲಿ ಕೆಲಸ ಮಾಡುತ್ತಿದ್ದ 66 ಜನರನ್ನು ಏಕಾಏಕಿ ಕರ್ತವ್ಯದಿಂದ ತೆಗೆದು ಹಾಕಲಾಗಿದೆ. ಸೋಮವಾರ ಎಂದಿನಂತೆ ಕರ್ತವ್ಯಕ್ಕೆ ಬಂದಿದ್ದ 68 ಜನರನ್ನು ಗೇಟಿನ ಬಳಿಯೇ ತಡೆದ ಸೆಕ್ಯುರಿಟಿ ಗಾರ್ಡ್‌ಗಳು, ನಿಮ್ಮನ್ನು ಕೆಲಸದಿಂದ ತೆಗೆಯಲಾಗಿದೆ. ಒಳಗೆ ಬಿಡದಂತೆ ಆದೇಶ ಬಂದಿದೆ ಎಂದು ತಿಳಿಸಿದರು.

ಕೆಲಸ ಕಳೆದುಕೊಂಡ ಕಾರ್ಮಿಕರು ಗೇಟಿನ ಮುಂಭಾಗ ಬೆಳಗಿನಿಂದ ಸಂಜೆಯವರೆಗೂ ಮೌನ ಪ್ರತಿಭಟನೆ ನಡೆಸಿದರು. ಕೆಲವರು ಕೆಲಸದಿಂದ ಏಕಾಏಕಿ ತೆಗೆದುಹಾಕಿರುವ ಕುರಿತು ಕಾರ್ಮಿಕ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಸಲ್ಲಿಸಿದರು. ಕಾರ್ಮಿಕ ಕಾಯ್ದೆಯಂತೆ ಕೆಲಸದಿಂದ ತೆಗೆಯುವ ತಿಂಗಳ ಮುಂಚೆಯೇ ನೋಟಿಸ್‌ ನೀಡಬೇಕು. ಆದರೆ, ನಮಗೆ ಯಾವುದೇ ನೋಟಿಸ್‌ ನೀಡದೆ ಕೆಲಸದಿಂದ ತೆಗೆದು ಹಾಕಲಾಗಿದೆ.

ಇದರಿಂದಾಗಿ ನಾವು ಮತ್ತು ನಮ್ಮ ಕುಟುಂಬ ಬೀದಿಗೆ ಬೀಳುವಂತಾಗಿದೆ ಎಂದು ಕಾರ್ಮಿಕರು ದೂರಿನಲ್ಲಿ ತಿಳಿಸಿದ್ದಾರೆ. ಕೆಲಸದಿಂದ ತೆಗೆದಿರುವ ಹಿನ್ನೆಲೆಯಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲು ಕೆಲವರು ಸಲಹೆ ನೀಡಿದರೂ, ಅದಕ್ಕೆ ಒಪ್ಪದ ಕಾರ್ಮಿಕರು ತಾವು ಪ್ರತಿಭಟನೆ ನಡೆಸಿ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿದರೆ ಅದು ಸಿದ್ದಾರ್ಥ್ ಹೆಗಡೆ ಅವರಿಗೆ ಅಪಮಾನ ಮಾಡಿದಂತಾಗುತ್ತದೆ. ಆದ ಕಾರಣ ಮೌನ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಬೆಳಗಿನಿಂದ ಸಂಜೆಯವರೆಗೂ ಕಾರ್ಮಿಕರು ಗೇಟಿನ ಮುಂಭಾಗದಲ್ಲಿಯೇ ಇದ್ದರೂ ಯಾವುದೇ ಹಿರಿಯ ಅಧಿಕಾರಿಗಳು ಕಾರ್ಮಿಕರನ್ನು ಭೇಟಿ ಮಾಡಲಿಲ್ಲ. ಈ ನಡುವೆ ಸಂಸ್ಥೆಯನ್ನು ಮುಚ್ಚುತ್ತಿರುವ ಕುರಿತು ಆಡಳಿತ ಮಂಡಳಿ ನೋಟಿಸ್‌ ನೀಡಿದ ಪ್ರತಿಯನ್ನು ಪೊಲೀಸರಿಗೂ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿ ಮುಂಭಾಗದಲ್ಲಿ ಪೊಲೀಸ್‌ ಭದ್ರತೆ ಹಾಕಲಾಗಿತ್ತು.

Advertisement

ಇಬ್ಬರಿಗೂ ನೋಟಿಸ್‌: ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಕಾರ್ಮಿಕ ಆಯುಕ್ತ ಕೆ.ಜಿ.ಜಾನ್ಸನ್‌, “ಡ್ಯಾಪ್ಕೋ’ ಪೀಠೊಪಕರಣ ತಯಾರಿಕಾ ಘಟಕದಲ್ಲಿ 66 ಮಂದಿ ಕೆಲಸಗಾರರಿಗೆ ಸೋಮವಾರದಿಂದ ಕೆಲಸಕ್ಕೆ ಬರಬಾರದೆಂದು ಆಡಳಿತ ಮಂಡಳಿ ತಿಳಿಸಿದೆ.

ಇದರಿಂದ ಆತಂಕಗೊಂಡ ಕೆಲಸಗಾರರು ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸಿ, ಕಾಯ್ದೆ ಬದ್ಧವಾಗಿ ತಮಗೆ ಬರಬೇಕಾದ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.2ರಂದು ಆಡಳಿತ ಮಂಡಳಿ ಹಾಗೂ ಕೆಲಸಗಾರರ ಸಭೆಯನ್ನು ಕಚೇರಿಯಲ್ಲಿ ಕರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಮಿಕರಿಬ್ಬರಿಗೂ ನೋಟಿಸ್‌ ಕಳುಹಿಸಲಾಗಿದೆ. ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಲು ಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಡ್ಯಾಪ್ಕೋ ಇತಿಹಾಸ: 8 ವರ್ಷದ ಹಿಂದೆ “ಕೆಫೆ ಕಾಫಿ ಡೇ’ ಅಂಗ ಸಂಸ್ಥೆಯಾಗಿ “ಡ್ಯಾಪ್ಕೋ’ ಕಂಪನಿಯನ್ನು ಉದ್ಯಮಿ ದಿ|ಸಿದ್ದಾರ್ಥ್ ಹೆಗಡೆ ಪ್ರಾರಂಭಿ ಸಿದ್ದರು. ಕಾಫಿ ಡೇ ಕಂಪನಿ ಉತ್ತುಂಗದಲ್ಲಿದ್ದ ಸಂದರ್ಭ ರಾಜ್ಯ- ಹೊರ ರಾಜ್ಯ ಸೇರಿದಂತೆ ವಿದೇಶಗಳಲ್ಲಿ ಆರಂಭಿಸಲಾಗುವ “ಕಾಫಿ ಡೇ’ ಮಳಿಗೆ ಗಳಿಗೆ ಅಗತ್ಯವಿರುವ ಪೀಠೊಪಕರಣ ಗಳನ್ನು ಇಲ್ಲಿ ತಯಾರಿಸಿ ಕಳುಹಿಸಲಾಗುತ್ತಿತ್ತು.

ಪೀಠೊಪಕರಣ ತಯಾರಿಕೆಗೆ ಅಗತ್ಯವಿರುವ ಮರವನ್ನು ವಿದೇಶಗಳಿಂ ದಲೂ ತರಲಾಗುತ್ತಿತ್ತು. ಗಯಾನವುಡ್‌, ಸಿಲ್ವರ್‌ ಬೀಚ್‌, ರೋಸ್‌ ವುಡ್‌ ಸೇರಿ ಸ್ಥಳೀಯ ಅಕೇಷಿಯಾ ಸಿಲ್ವರ್‌ ಮರಗಳನ್ನು ಬಳಸಿಕೊಂಡು ಪೀಠೊ ಪಕರಣ ಗಳನ್ನು ತಯಾರಿಸಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next