ಸಕಲೇಶಪುರ: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿ ಸಿರುವ ರಾಜ್ಯ ಬಜೆಟ್ ಭತ್ತ ಬೆಳೆಯುವ ರೈತರಿಗೆ ಸಂತೋಷ ತಂದರೆ ಕಾಫಿ ಹಾಗೂ ಮೆಣಸು ಬೆಳೆಗಾರರಿಗೆ ಮತ್ತೂಮ್ಮೆ ನಿರಾಶಾದಾಯಕವಾಗಿದೆ.
ಮಲೆನಾಡಿನಲ್ಲಿ ಭತ್ತ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 7,500 ರೂ. ಪ್ರೋತ್ಸಾಹ ಧನವನ್ನು ಸರ್ಕಾರ ಘೋಷಣೆ ಮಾಡಿದ್ದು, ರೈತರಿಗೆ ಸಂತೋಷ ತಂದರೆ ಕಾಫಿ ಮತ್ತು ಮೆಣಸು ಬೆಳೆಗಾರರಿಗೆ ಯಾವುದೇ ರೀತಿ ಯ ಯೋಜನೆಯನ್ನು ಘೋಷಣೆ ಮಾಡದಿರುವುದು ರೈತರಿಗೆ ಬೇಸರ ತಂದಿದೆ.
ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ಮಿತಿ ಮೀರಿದ್ದು, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಆನೆ ಕಾರಿಡಾರ್ ಯೋಜನೆ ಅಥವಾ ಆನೆ ಧಾಮಗಳ ಘೋಷಣೆ ಯಾಗದೇ ಕೇವಲ ರೈಲುಹಳಿಗಳ ಸಮೀಪ ಮಾನವ ಹಾಗೂ ಕಾಡಾನೆಗಳ ಸಂಘರ್ಷ ತಪ್ಪಿಸಲು ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡಿರುವುದು ರೈತರಿಗೆ ಯಾವುದೇ ಉಪಯೋಗವಿಲ್ಲದಂತಾಗಿದೆ.
ತಾಲೂಕಿನಲ್ಲಿ ಪ್ರವಾಸೋ ದ್ಯಮಕ್ಕೆ ವಿಪುಲ ಅವಕಾಶವಿದ್ದರೂ ಸಹ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಯಾವುದೇ ಯೋಜನೆಯನ್ನು ಘೋಷಿಸಲಾಗಿಲ್ಲ. ಶೈಕ್ಷಣಿಕವಾಗಿ ತಾಲೂಕಿಗೆ ಯಾವುದೇ ರೀತಿಯ ಉನ್ನತ ಶಿಕ್ಷಣ ಕಲಿಕಾ ಕೇಂದ್ರಗಳು ಮಂಜೂರಾಗಿಲ್ಲ. ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲೆಯ ಇತರ ತಾಲೂಕು ಕೇಂದ್ರಗಳಿಗೆ ನೀಡಿರುವಂತೆ ಪಟ್ಟಣಕ್ಕೆ ಅನುದಾನ ಲಭಿಸಿದೆ.
ಹೋಬಳಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರಾಗಿದೆ. ಇದು ಗ್ರಾಮೀಣ ಭಾಗದ ವಿದ್ಯಾರ್ಥಿ ಗಳಿಗೆ ಸಹಾಯವಾಗುವ ನಿರೀಕ್ಷೆಯಿದೆ. ಜೊತೆಗೆ ಕಾರ್ಮಿಕರು ಮೃತಪಟ್ಟಲ್ಲಿ 2ಲಕ್ಷ ರೂ. ನೀಡುವ ಯೋಜನೆ ಸರ್ಕಾರ ಘೋಷಿಸಿದ್ದು, ಕಾಫಿ ತೋಟದಲ್ಲಿ ಕೂಲಿ ಮಾಡುವ ಕಾರ್ಮಿಕ ಕುಟುಂಬಗಳಿಗೆ ಇದು ತುಸು ನೆಮ್ಮದಿ ತರುವ ವಿಷಯವಾಗಿದೆ.
ಕ್ರೀಡಾಂಗಣ ಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಅನುದಾನ ಘೋಷಣೆ ಮಾಡಿದೆ. ಇದರಿಂದ ಪಟ್ಟಣದ ಸುಭಾಷ್ ಮೈದಾನ ಮೇಲ್ದರ್ಜೆಗೆ ಏರುವ ಸಾಧ್ಯತೆ ಗಳಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ನೀಡಿದ ಬಜೆಟ್ಗಿಂತ ಸಿಎಂ ಕುಮಾರಸ್ವಾಮಿ ನೀಡಿರುವ ರಾಜ್ಯ ಬಜೆಟ್ ತಾಲೂಕಿಗೆ ಉಪಕಾರಿಯಾಗಿದೆ.
* ಸುಧೀರ್ ಎಸ್.ಎಲ್.