ಸಕಲೇಶಪುರ: ತಾಲೂಕಿನ ಪ್ರಮುಖ ಬೆಳೆಯಾದ ಕಾಫಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ನೆರವು ನೀಡದ ಕಾರಣ, ಉದ್ಯಮ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದೆ. ಹವಾಮಾನ ವೈಪರೀತ್ಯದ ನಡುವೆಯೂ ಅಳಿದುಳಿದಿದ್ದ ಕಾಫಿ ಬೆಳೆಗೆ ಈಗ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ, ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಾಫಿ ಬೆಳೆಗಾರರು ವಾರ್ಷಿಕ 6 ಸಾವಿರ ಕೋಟಿ ರೂ.ವಿದೇಶಿ ವಿನಿಮಯವನ್ನು ರಾಷ್ಟ್ರದ ಬೊಕ್ಕಸಕ್ಕೆ ನೀಡುತ್ತಿದ್ದು, 15 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಹೆಚ್ಚಾಗುತ್ತಿರುವ ಉತ್ಪಾದನಾ ವೆಚ್ಚ: ಇಷ್ಟೆಲ್ಲ ಆದಾಯ ತಂದುಕೊಡುತ್ತಿದ್ದರೂ ಕಾಫಿ ಬೆಳೆಗಾರರು ಮತ್ತು ಉದ್ಯಮ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬರುತ್ತಿಲ್ಲ. ಉದ್ಯಮವನ್ನು ಮುಂದುವರಿ ಸುವುದು ಹೇಗೆ ಎಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ. ಇತ್ತ ಹವಾಮಾನ ವೈಪರೀತ್ಯ, ಬೆಲೆ ಕುಸಿತ, ಕಾರ್ಮಿಕರ ಕೊರತೆ, ರಸಗೊಬ್ಬರ, ಕೀಟನಾಶಕ, ಪೆಟ್ರೋಲ್, ಡೀಸೆಲ್ ಯಂತ್ರೋಪಕರಣಗಳ ಬೆಲೆ 10 ಪಟ್ಟು ಹೆಚ್ಚಾಗಿ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲಾಗುತ್ತಿಲ್ಲ. ಇತ್ತ ಬೆಳೆದ ಕಾಫಿ ಬೆಳೆಗೆ ಸರಿಯಾಗಿ ಮಾರುಕಟ್ಟೆಯಲ್ಲಿ ಬೆಲೆ ದೊರಕದ ಹಿನ್ನೆಲೆಯಲ್ಲಿ ಬೆಳೆಗಾರರು ಆತಂಕಕ್ಕೆ ಸಿಲುಕಿದ್ದಾರೆ.
ಕೇಂದ್ರ ಮಂತ್ರಿಗೂ ಮಾಹಿತಿ: 2020ನೇ ಸಾಲಿನಲ್ಲಿ ಸುರಿದ ಬಾರಿ ಮಳೆಯಿಂದ ಕಾಫಿಯು ಶೇ.60 ರಿಂದ 70 ಹಾನಿಯಾಗಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇಂತಹ ಸಮಯದಲ್ಲಿ ಬೆಳೆಗಾರರ ನೆರವಿಗೆ ಬರಬೇಕು ಎಂದು ಕಳೆದ ಆ.31ರಂದೇ ಕರ್ನಾಟಕ ಬೆಳೆಗಾರರ ಒಕ್ಕೂಟವು ಸ್ಥಳೀಯ ಶಾಸಕರು, ಸಂಸದರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಗೂ ಆನ್‌ಲೈನ್‌ನಲ್ಲಿ ಸಭೆ ನಡೆಸಿ, ನೈಜ ಸ್ಥಿತಿಯ ಬಗ್ಗೆ ಮಾಹಿತಿ ನೀಡಿತ್ತು. ಇದರ ಬೆನ್ನಲ್ಲೇ 2021ರ ಜನವರಿ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಈ ವರ್ಷದ ಕಾಫಿ ಫಸಲು ನೆಲಕಚ್ಚಿ, ನಷ್ಟದ ಬಗ್ಗೆ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ರೋಬಾಸ್ಟ ಕಾಫಿ ದರ ಏರಿಳಿತ: ಅರೇಬಿಕಾ ಕಾಫಿ ತೋಟದ ನಿರ್ವಹಣೆ ಕಷ್ಟ ಆಗಿದೆ. ಹೀಗಾಗಿ ರೋಬಾಸ್ಟ ಕಾಫಿ ಬೆಳೆಯತ್ತ ರೈತರು ಹೆಚ್ಚು ಒಲವು ತೋರುತ್ತಿದ್ದಾರೆ. ಇಂತಹ ಸಮಯದಲ್ಲಿ ರೋಬಾಸ್ಟ ಕಾಫಿ ದರ ಏರಿಳಿತವಾಗುತ್ತಿರುವುದು ಈಗ ಬೆಳೆಗಾರರಿಗೆ ಆತಂಕ ತಂದಿದೆ. 50 ಕೆ.ಜಿಯ ಒಂದು ಚೀಲ ರೋಬಾಸ್ಟ ಪಾರ್ಚ್‌ಮೆಂಟ್ ಬೆಳೆ 5050 ರೂ. ಇದ್ದು, ರೋಬಾಸ್ಟ ಚೆರ್ರಿ 2900 ರೂ. ಇದೆ. ರೋಬಾಸ್ಟ ಚೆರ್ರಿ ಕಾಫಿಗೆ ಕಳೆದ ಕೆಲವು ದಿನಗಳ ಹಿಂದಷ್ಟೆ 3100, 3300 ರೂ.ವರೆಗೂ ದರ ಇತ್ತು. ಇದೀಗ 2900 ರೂ. ಇದೆ. ರೋಬಾಸ್ಟ ಪಾರ್ಚ್‌ಮೆಂಟ್ 50 ಕೆ.ಜಿ ಒಂದು ಚೀಲ ಕಳೆದ ಕೆಲವು ದಿನಗಳ ಹಿಂದಷ್ಟೇ 5600 ರೂ. ಇತ್ತು. ಕಳೆದ ವರ್ಷ 6850 ರೂ. ಇತ್ತು. ಇದೀಗ ರೋಬಾಸ್ಟ ಕಾಫಿ ದರ ಇಳಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಅರೇಬಿಕಾ ಕಾಫಿ ದರ ಈ ವರ್ಷ ತುಸು ಏರಿಕೆ ಕಂಡಿದೆ. 50 ಕೆ.ಜಿ ಒಂದು ಬ್ಯಾಗ್‌ನ ಅರೇಬಿಕಾ ಪಾರ್ಚ್‌ಮೆಂಟ್ ಬೆಲೆ 9900 ರೂ. ಇದ್ದು, ಚೆರ್ರಿಗೆ 3700 ರೂ. ಪ್ರಸ್ತುತ ಬೆಲೆ ಇದೆ.
ಇದನ್ನೂ ಓದಿ :ವಿಟ್ಲ: ಬೈಕ್ ಗೆ ಗುದ್ದಿದ ಬೊಲೆರೊ ವಾಹನ, ಬೈಕ್ ಸವಾರ ಸ್ಥಳದಲ್ಲೇ ಸಾವು
ಕಳೆದ ವರ್ಷ ಅರೇಬಿಕಾ ಪಾರ್ಚ್‌ಮೆಂಟ್ 9300 ರೂ. ಹಾಗೂ ಚೆರ್ರಿ 3400 ರಿಂದ 3500 ರೂ. ಇತ್ತು.ಮಾರುಕಟ್ಟೆಯಲ್ಲಿ ಕಾಫಿ ದರ ತಲ್ಲಣ: ಕಾಫಿ ಬೆಳೆಗೆ ಸರಿಯಾದ ದರ ನೀಡಲು ಕಾಫಿ ಮಂಡಳಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ಖಾಸಗಿ ಕಂಪನಿಗಳು ಹಾಗೂ ಮಧ್ಯವರ್ತಿಗಳು ಬೆಳೆಗಾರರಿಗೆ ಇಲ್ಲ ಸಲ್ಲದ ನೆಪ ಹೇಳಿ ಬೆಳೆದ ಬೆಳೆಗೆ ಕಡಿಮೆ ದರ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬೆಂಬಲ ಬೆಲೆ ನೀಡಬೇಕು, ಇದರಿಂದ ಮಾತ್ರ ಖಾಸಗಿ ಕಂಪನಿಗಳ ಆಟೋಟಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.