Advertisement

ಅಂಗವಿಕಲರಿಗಾಗಿ ವಿಶೇಷ ಮತಗಟ್ಟೆಯಾಗಿ ಬದಲಾದ ಕೋಡಿ ಗ್ರಾ.ಪಂ.ಕಚೇರಿ

12:01 AM Apr 18, 2019 | sudhir |

ಕೋಟ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಿಕಲಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವಂತೆ ಮಾಡಬೇಕು ಎನ್ನುವ ಸಲುವಾಗಿ ಉಡುಪಿ ಜಿಲ್ಲಾಡಳಿತ ಎಲ್ಲ ರೀತಿಯ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕೋಟ ಹೋಬಳಿಯ ಕೋಡಿಕನ್ಯಾಣ ಹಾಗೂ ಉಡುಪಿಯ ಹನುಮಂತ ನಗರದಲ್ಲಿ ವಿಶೇಷ ಮಾದರಿ ಮತಗಟ್ಟೆಗಳನ್ನು ರೂಪಿಸಿದ್ದು, ವಿಕಲಚೇತನರು ಮನೆಯಿಂದ ಹೊರಟು ಮತದಾನ ಮಾಡಿ ಮತ್ತೆ ಮನೆ ತಲುಪುವ ತನಕ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.

Advertisement

ಮತಗಟ್ಟೆಯ ವಿಶೇಷ ಸೌಲಭ್ಯಗಳು
ಕೋಡಿಯಲ್ಲಿ ಗ್ರಾ.ಪಂ. ಕಚೇರಿಯಲ್ಲಿನ ಎಲ್ಲಾ ಪಿಠೊಪಕರಣ ಹಾಗೂ ಕಚೇರಿಯ ಸಾಮಾಗ್ರಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿ, ಕಟ್ಟಡವನ್ನು ಸ್ವಲ್ಪಮಟ್ಟಿಗೆ ನವೀಕರಿಸಿ ವಿಕಲಚೇತನರ ಮತಗಟ್ಟೆಯಾಗಿ ಪರಿವರ್ತಿಸಲಾಗಿದೆ. ವಿಕಲಚೇತನರು ಮತಗಟ್ಟೆ ಪ್ರವೇಶಿಸಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ವಿನ್ಯಾಸಗೊಳಿಸಲಾಗಿದೆ ಹಾಗೂ ಬಾಗಿಲ ತನಕ ಕಬ್ಬಿಣದ ಹಿಡಿಗಳನ್ನು ಅಳವಡಿಸಲಾಗಿದೆ. ಮತ ಕೇಂದ್ರ ಪಿಂಕ್‌ ಬಣ್ಣದಿಂದ ಶೃಂಗರಿಸಲಾಗಿದೆ. ಪ್ರವೇಶದ್ವಾರದಲ್ಲಿ ಸ್ವಾಗತ್‌ ಕಮಾನ್‌ಗಳನ್ನು ಅಳವಡಿಸಲಾಗಿದೆ. ಸೂಕ್ತ ವಿದ್ಯುತ್‌ ವ್ಯವಸ್ಥೆ, ಫ್ಯಾನ್‌ ವ್ಯವಸ್ಥೆ, ವಿಕಲಚೇತನ ಸ್ನೇಹಿ ಹೊಸ ಶೌಚಾಲಯ ಹಾಗೂ ನೀರಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವೀಲ್‌ ಚೇರ್‌,ಸ್ಟಿಕ್‌ ಮುಂತಾದ ಸಾಧನ ಹಾಗೂ ಮತಗಟ್ಟೆಯ ಹೊರಗೆ ನೆರಳಿಗೆ ಶ್ಯಾಮಿಯಾನ ವ್ಯವಸ್ಥೆ, ತುರ್ತು ಚಿಕಿತ್ಸೆಗಾಗಿ ಆರೋಗ್ಯ ಸಹಾಯಕಿಯರು, ಸ್ವಯಂ ಸೇವಕರ ನಿಯೋಜನೆ, ಸನ್ನೆ ಹಾಗೂ ಸಂಜ್ಞಾ ಭಾಷೆಯಲ್ಲಿ ಮಾತನಾಡಿಸಲು ವ್ಯವಸ್ಥೆ, ಮತಗಟ್ಟೆಗೆ ಬರಲು ಮತ್ತು ವಾಪಸ್‌ ಹೋಗಲು ಸೂಕ್ತ ವಾಹನ ವ್ಯವಸ್ಥೆ, ವಾಹನ ನಿಲ್ಲಿಸಲು ಪಾರ್ಕಿಂಗ್‌ ವ್ಯವಸ್ಥೆ, ಸಹಾಯ ಕೇಂದ್ರ ಸ್ಥಾಪನೆ ಮುಂತಾದ ವ್ಯವಸ್ಥೆ ಮಾಡಲಾಗಿದೆ. ಈ ಮತಗಟ್ಟೆಗಳು ವಿಕಲಚೇತನ ಸಿಬಂದಿಗಳಿಂದ ನಿರ್ವಹಿಸುವ ಮತಗಟ್ಟೆಗಳಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾ ಕಾರಿ ಸಿಂಧೂ ಬಿ ರೂಪೇಶ್‌ ಅವರು ವಿಶೇಷ ಮುತುವರ್ಜಿವಹಿಸಿ ಈ ಮತಗಟ್ಟೆಗಳನ್ನು ಸ್ಥಾಪಿಸಿದ್ದಾರೆ.

ಹೆಚ್ಚು ಮತದಾನಕ್ಕೆ ಪ್ರೇರೇಪಿಸಲು…
ಕೋಡಿ ಮತಕೇಂದ್ರದಲ್ಲಿ ಒಟ್ಟು ಮೂರು ಬೂತ್‌ಗಳಿದ್ದು ಇಲ್ಲಿ ಅತೀ ಹೆಚ್ಚಿನ ಸಂಖ್ಯೆಯ 45 ವಿಕಲಚೇತನ ಮತದಾರರಿದ್ದಾರೆ. ಇದುವರೆಗಿನ ಚುನಾವಣೆಗಳಲ್ಲಿ ಇಲ್ಲಿ ಶೇ. 30ರಿಂದ-35ರ ತನಕ ಮಾತ್ರ ವಿಕಲಚೇತನರ ಮತಗಳು ಚಲಾವಣೆಯಾಗುತ್ತಿದ್ದವು. ಹೀಗಾಗಿ ಈ ಬಾರಿ ಶೇ.100ರಷ್ಟು ವಿಕಲಚೇತನರ ಮತಚಲಾವಣೆಯ ಗುರಿ ಇರಿಸಿ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next