Advertisement

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

12:07 PM Apr 22, 2024 | Team Udayavani |

ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ನಿಜಾರ್ಥದ “ಮಹಾಚುನಾವಣೆ’ ಒಟ್ಟು ಏಳು ಹಂತಗಳನ್ನು ಹೊಂದಿದೆ. ಎ.19ರಂದು ಮೊದಲ ಹಂತದ ಮತದಾನ ನಡೆದರೆ ಕೊನೆಯ, 7ನೇ ಹಂತದ ಮತದಾನ ನಡೆಯುವುದು ಜೂ.1ರಂದು. ಆ ಬಳಿಕ ಜೂ.4ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 44 ದಿನಗಳಲ್ಲಿ ಈ 7 ಹಂತಗಳು ಹರಡಿಕೊಂಡಿವೆ. ಇದರ ಜತೆಗೆ ಚುನಾವಣ ಆಯೋಗವು ಲೋಕ ಸಭಾ ಚುನಾವಣೆಯನ್ನು ಘೋಷಿಸಿದ ಮಾ. 14, ಅರ್ಥಾತ್‌ ಮಾದರಿ ನೀತಿಸಂಹಿತೆ ಜಾರಿಗೆ ಬಂದ ದಿನವನ್ನೂ ತೆಗೆದುಕೊಂಡರೆ ಒಟ್ಟಾರೆಯಾಗಿ ಹೆಚ್ಚು ಕಡಿಮೆ ಎರಡೂವರೆ ತಿಂಗಳುಗಳ ಕಾಲ ದೇಶ ಬೇಸಗೆಯ ಬಿಸಿಯ ಜತೆಗೆ ಚುನಾವಣೆಯ ಕಾವನ್ನು ಕೂಡ ಅನುಭವಿಸುತ್ತಿದೆ. “ಮಹಾ ಚುನಾವಣೆ’ ಎಂದಿರುವುದು ಇದೇ ಕಾರಣಕ್ಕೆ. ದೇಶದಲ್ಲಿ ಇಷ್ಟು ದೀರ್ಘ‌ ಅವಧಿಯಲ್ಲಿ ಲೋಕ ಸಭಾ ಚುನಾವಣೆ ನಡೆಯುತ್ತಿರುವುದು ಹಲವು ದಶಕಗಳ ಬಳಿಕ ಎನ್ನುವುದು ಗಮನಾರ್ಹ.

Advertisement

ಎರಡೂವರೆ ತಿಂಗಳುಗಳ ಕಾಲ ನೀತಿಸಂಹಿತೆ ಜಾರಿಯಲ್ಲಿರುವ ಬಗ್ಗೆ ದೇಶದ ಅಲ್ಲಲ್ಲಿ ಅಸಮಾಧಾನದ ಮಾತುಗಳು ಕೇಳಿಸುತ್ತಿವೆ. ಮೊದಲ ಹಂತದಲ್ಲಿ ತನ್ನ ಎಲ್ಲ 39 ಲೋಕಸಭಾ ಕ್ಷೇತ್ರಗಳಿಗೆ ಮತದಾನವನ್ನು ಮುಗಿಸಿಕೊಂಡಿರುವ ತಮಿಳುನಾಡಿನಲ್ಲಿ ಈ ಬಗೆಗಿನ ಅಪಸ್ವರ ಕೊಂಚ ಬಲವಾಗಿಯೇ ಕೇಳಿಬಂದಿದೆ. ತಮಿಳುನಾಡು ಸರಕಾರ, ಡಿಎಂಕೆ ಮತ್ತು ಕಾಂಗ್ರೆಸ್‌ನ ತಮಿಳುನಾಡು ಘಟಕಗಳು ಜೂ. 1ರವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರ ಅರ್ಥವಂತಿಕೆಯನ್ನು ಪ್ರಶ್ನಿಸಿವೆ. ಇದು “ಅಸಂಬದ್ಧ’ ಮಾತ್ರವಲ್ಲದೆ “ನಾಗರಿಕ ಹಕ್ಕುಗಳ ಉಲ್ಲಂಘನೆ’ ಎಂಬುದು ಅವುಗಳ ಆರೋಪ.

ಈ ಸಂಬಂಧ ಮುಖ್ಯ ಚುನಾವಣ ಆಯುಕ್ತ ರಾಜೀವ್‌ ಕುಮಾರ್‌ ಅವರಿಗೆ ಪತ್ರವನ್ನೂ ಬರೆದಿರುವ ಕಾಂಗ್ರೆಸ್‌ ಸಂಸದ ಮತ್ತು ವೀರುಡುನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಾಣಿಕಮ್‌ ಠಾಗೋರ್‌, ಮಾದರಿ ನೀತಿ ಸಂಹಿತೆಯಡಿ ನಗದು ರೂಪದಲ್ಲಿ 50 ಸಾವಿರ ರೂ.ವರೆಗೆ ಮಾತ್ರ ಒಯ್ಯಲು ಅನುಮತಿ ಇರುವುದು, ಮಾರಾಟ ವಸ್ತುಗಳನ್ನು ಸಾಗಾಟ ಮಾಡಿದರೆ ಮಾದರಿ ನೀತಿ ಸಂಹಿತೆಯಡಿ ಕ್ರಮಕ್ಕೆ ಒಳಗಾಗಬಹುದಾದ ಅಪಾಯ ಇರುವುದು ಸಣ್ಣ ವ್ಯಾಪಾರಿಗಳಿಗೆ ತೊಂದರೆ ಉಂಟು ಮಾಡುತ್ತಿದೆ, ಇದು ಅವರ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಗಮನ ಸೆಳೆದಿದ್ದಾರೆ.

ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದ ಚುನಾವಣ ಆಯೋಗವು ಚುನಾವಣೆ ಅಕ್ರಮಗಳನ್ನು ಪರಿಣಾಮಕಾರಿಯಾಗಿ ತಡೆಯುವಲ್ಲಿ ಯಶಸ್ವಿಯಾಗಿದೆ ಮತ್ತು ಇದು ಶ್ಲಾಘನೀಯ. ಆದರೆ ಇಡೀ ದೇಶದಲ್ಲಿ ಎರಡೂವರೆ ತಿಂಗಳುಗಳ ಕಾಲ ನೀತಿ ಸಂಹಿತೆ ಜಾರಿಯಲ್ಲಿರುವ ಕುರಿತಂತೆ ತಮಿಳುನಾಡಿನಿಂದ ಕೇಳಿಬಂದಿರುವ ಧ್ವನಿಯನ್ನು ತಳ್ಳಿಹಾಕುವಂತೆಯೂ ಇಲ್ಲ. ಕರ್ನಾಟಕವನ್ನೇ ತೆಗೆದುಕೊಂಡರೆ ರಾಜ್ಯದ ಅರ್ಧದಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಎ. 26ರ ಬಳಿಕ ಮತ್ತು ಇನ್ನರ್ಧದಷ್ಟು ಕ್ಷೇತ್ರಗಳಲ್ಲಿ ಮೇ 7ರ ಬಳಿಕ ಇದೇ ರೀತಿಯ ಪರಿಸ್ಥಿತಿಯನ್ನು ನಾಗರಿಕರು ಅನುಭವಿಸಬೇಕಾಗಿ ಬರಲಿದೆ.

ಇಷ್ಟು ದೀರ್ಘ‌ ಅವಧಿಯ ಚುನಾವಣೆಯನ್ನು ಯೋಜಿಸಿಕೊಳ್ಳುವಾಗ ಪರಿಸ್ಥಿತಿ ಗಳ ನಿರ್ವಹಣೆಯ ನಿಟ್ಟಿನಲ್ಲಿಯೂ ಚುನಾವಣ ಆಯೋಗವು ಉಪಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚಿಂತಿಸಬೇಕಿತ್ತು ಎಂದರೆ ತಪ್ಪಾಗಲಾರದು. ಕೇವಲ ನಗದು ಸಾಗಾಟ, ವಸ್ತು-ಪರಿಕರಗಳ ಸಾಗಾಟ ಮಾತ್ರ ಅಲ್ಲ; ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಆಡಳಿತ ಯಂತ್ರವೂ ಕೈಕಟ್ಟಿ ಕುಳಿತಿರಬೇಕಾದ ಸ್ಥಿತಿ ಇರುತ್ತದೆ. ಇದರಿಂದ ಹಲವು ರೀತಿಯಲ್ಲಿ ಜನರಿಗೂ ಸ್ಥಳೀಯಾಡಳಿತ, ರಾಜ್ಯ ಸರಕಾರಗಳಿಗೂ ಅಭಿವೃದ್ಧಿಯ ದೃಷ್ಟಿಯಿಂದ ಅಡಚಣೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿ ಅಭಿವೃದ್ಧಿ ಮತ್ತು ಆರ್ಥಿಕತೆಯ ದೃಷ್ಟಿಯಿಂದಲೂ ಹಿತವಲ್ಲ. ಈ ಹಿನ್ನೆಲೆ ಯಲ್ಲಿ ಚುನಾವಣ ಆಯೋಗವು ಮುಂದಿನ ದಿನಗಳಲ್ಲಾದರೂ ವಿಹಿತವಾದ, ವಿವೇಚನೆಯ ಹೆಜ್ಜೆಗಳನ್ನು ಇರಿಸಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next