ಪ್ರಧಾನಿ ನರೇಂದ್ರ ಮೋದಿ ಮತ್ತೂಮ್ಮೆ ಚುನಾಯಿತರಾಗುವುದನ್ನು ಬೆಂಬಲಿಸುತ್ತೇನೆ ಎಂಬ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್‌ರ ಹೇಳಿಕೆಯು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ಹೇಳಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು ಯಾವುದೇ ರಾಜಕೀಯ ಪಕ್ಷದ ಪರ ಮಾತನಾಡು ವಂತಿಲ್ಲ. ಆದರೆ ಕಲ್ಯಾಣ್‌ಸಿಂಗ್ ಅವರು ಮಾ.23ರಂದು ಅಲಿಗಡದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಲ್ಲದೆ, ನಾವೆಲ್ಲರೂ ಬಿಜೆಪಿ ಕಾರ್ಯ ಕರ್ತರು. ಪಕ್ಷವನ್ನು ಗೆಲ್ಲಿಸಬೇಕು ಹಾಗೂ ಪ್ರಧಾನಿ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಹೇಳಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಅವರ ಹೇಳಿಕೆಯು ನೀತಿ ಸಂಹಿತೆಯ ಉಲ್ಲಂಘನೆಯೇ ಎಂಬ ಬಗ್ಗೆ ಚುನಾವಣಾ ಆಯೋಗ ಪರಿಶೀಲನೆ ಆರಂಭಿಸಿತ್ತು. ಇದೀಗ ಕಲ್ಯಾಣ್‌ಸಿಂಗ್ ಅವರು ಸಾಂವಿಧಾನಿಕ ಹುದ್ದೆಯಲ್ಲಿರುವ ಕಾರಣ, ಈ ವಿಚಾರಕ್ಕೆ ಸಂಬಂಧಿಸಿ ಚುನಾವಣಾ ಆಯೋಗವು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆಯುವ ಸಾಧ್ಯತೆಯಿದೆ. 1990ರಲ್ಲಿ ಹಿಮಾಚಲ ಪ್ರದೇಶದ ಅಂದಿನ ರಾಜ್ಯಪಾಲ ಗುಲ್ಶರ್ ಅಹ್ಮದ್ ಅವರು ತಮ್ಮ ಪುತ್ರನ ಪರ ಪ್ರಚಾರ ಮಾಡಿ ಇಂಥದ್ದೇ ವಿವಾದ ಸೃಷ್ಟಿಸಿದ್ದರು. ನಂತರ ಅವರು ರಾಜೀನಾಮೆ ನೀಡಿದ್ದರು.