Advertisement

ಬರ ನಿರ್ವಹಣೆಗೆ ನೀತಿ ಸಂಹಿತೆ ಅಡ್ಡಿಯಿಲ್ಲ, ಜನಪ್ರತಿನಿಧಿಗಳು ಭಾಗಿಯಾಗುವಂತಿಲ್ಲ: ಮೀನಾ

10:46 PM Mar 16, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾದ ಶನಿವಾರ ಮಧ್ಯಾಹ್ನದಿಂದಲೇ ಎಲ್ಲೆಡೆ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಬರ ನಿರ್ವಹಣೆ ಸಹಿತ ಕೆಲವು ತುರ್ತು ಕಾಮಗಾರಿಗಳನ್ನಷ್ಟೇ ಕೈಗೊಳ್ಳಬಹುದಾಗಿರುತ್ತದೆ. ಅದರಲ್ಲೂ ಜನಪ್ರತಿನಿಧಿಗಳು ಯಾವುದೇ ಪಾತ್ರ ವಹಿಸುವಂತಿಲ್ಲ. ತಹಶೀಲ್ದಾರ್‌, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೇ ಉಳಿದೆಲ್ಲ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಅಧಿಕಾರಿಗಳು ಸರಕಾರದ ನಿಗದಿತ ಕಾರ್ಯಕ್ರಮಗಳನ್ನು ಮುಂದುವರಿಸಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ ಜನಪ್ರತಿನಿಧಿಗಳು ಸರಕಾರದ ಸಭೆ, ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತಿಲ್ಲ ಎಂದು ಸ್ಪಷ್ಪಪಡಿಸಿದರು.

ಬರ ನಿರ್ವಹಣೆಯ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆ ಮುಂತಾದ ಚಟುವಟಿಕೆಗಳ ಮೂಲಕ ಜನಪ್ರತಿನಿಧಿಗಳು ಮತದಾರರಿಗೆ ಆಮಿಷವೊಡ್ಡುವಂತಿಲ್ಲ. ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದರೆ ಚುನಾವಣ ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದು ಮುಖ್ಯ ಚುನಾವಣಾಧಿಕಾರಿಗಳು ಹೇಳಿದರು.
ಸರಕಾರಿ ವಾಹನಗಳ ಬಳಕೆ, ಖಾಸಗಿ ಕಾರ್ಯಕ್ರಮಗಳಲ್ಲಿ ಮತಯಾಚನೆಗೆ ನಿರ್ಬಂಧ ಇರಲಿದೆ ಎಂದು ತಿಳಿಸಿದ್ದಾರೆ.

ಏನೇನು ಕಟ್ಟುಪಾಡುಗಳು?
*ಸರಕಾರ ಹಾಗೂ ವಿಪಕ್ಷದಲ್ಲಿನ ಪ್ರತಿನಿಧಿಗಳು ಸರಕಾರಿ ವಾಹನ ಬಳಸುವಂತಿಲ್ಲ.
*ಸರಕಾರಿ ಕಟ್ಟಡ, ದೇವಸ್ಥಾನ, ಚರ್ಚ್‌, ಮಸೀದಿ ಸಹಿತ ಧಾರ್ಮಿಕ ಕ್ಷೇತ್ರಗಳನ್ನು ಮತಪ್ರಚಾರಕ್ಕೆ ಬಳಸುವಂತಿಲ್ಲ.
*ಜನಪ್ರತಿನಿಧಿಗಳು ಮತದಾರರಿಗೆ ಯಾವುದೇ ರೀತಿಯ ಆಸೆ-ಆಮಿಷ ಒಡ್ಡುವಂತಿಲ್ಲ.
*ಹಣಬಲ, ತೋಳ್ಬಲ ಅಥವಾ ಇನ್ಯಾವುದೇ ಬಲಗಳನ್ನೂ ಪ್ರದರ್ಶಿಸುವಂತಿಲ್ಲ.
*ಮತದಾರರನ್ನು ಸೆಳೆಯಲು ಯಾವುದೇ ಉಡುಗೊರೆಗಳನ್ನೂ ಕೊಡುವಂತಿಲ್ಲ.
*ಬರಗಾಲದ ಸಂದರ್ಭ ಬಳಸಿಕೊಂಡು ಮತಪ್ರಚಾರಕ್ಕಾಗಿ ಜನರಿಗೆ ನೀರೂ ಕೊಡುವಂತಿಲ್ಲ.
*ರಾಜಕೀಯ ಪಕ್ಷ, ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಇಂದಿನಿಂದಲೇ ನಿಗಾ ಇಡಲಿದ್ದಾರೆ ಆಯೋಗದ ಸಿಬಂದಿ.
*ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ರಾಜಕಾರಣಿಗಳು ಯಾವುದೇ ಕಾರ್ಯಕ್ರಮ ನಡೆಸಿದರೂ ಅದರ ಖರ್ಚಿನ ಬಾಬ¤ನ್ನು ಆಯಾ ಪಕ್ಷ ಅಥವಾ ಅಭ್ಯರ್ಥಿಯ ಚುನಾವಣ ವೆಚ್ಚಕ್ಕೆ ಸೇರಿಕೊಳ್ಳಲಿದೆ.
*ಚುನಾವಣ ಆಯೋಗ ವಿಧಿಸಿರುವ ವೆಚ್ಚದ ಮಿತಿಯನ್ನು ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಮೀರುವಂತಿಲ್ಲ. ಪ್ರತಿಯೊಂದರ ಲೆಕ್ಕವನ್ನೂ ಕಾಲ-ಕಾಲಕ್ಕೆ ಒಪ್ಪಿಸಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next