Advertisement

ರಾಜ್ಯೋತ್ಸವ ಪ್ರಶಸ್ತಿಗೂ ತಟ್ಟಿದ ನೀತಿ ಸಂಹಿತೆ

06:00 AM Nov 01, 2018 | Team Udayavani |

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಉಪ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದೂಡಿದೆ. ಸಾಧಕರನ್ನು ಆಯ್ಕೆ ಮಾಡಲು ಬುಧವಾರ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಅಧಿಕೃತ ಸಭೆ ನಡೆಸಲಾಯಿತು. 

Advertisement

ರಾಜ್ಯದ ಐದು ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಏಳು ಜಿಲ್ಲೆಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೀತಿ ಸಂಹಿತೆ ಮುಕ್ತಾಯವಾದ ನಂತರ ಇಟ್ಟುಕೊಳ್ಳಲು ಸಲಹೆ ನೀಡಿದ್ದಾರೆ. ಅವರ ಸಲಹೆಯಂತೆ ಕನ್ನಡ ಸಂಸ್ಕೃತಿ ಇಲಾಖೆ ನವೆಂಬರ್‌ 8ರ ನಂತರ ರಾಜ್ಯೋತ್ಸವ ಪ್ರಶಸ್ತಿ
ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಆಯ್ಕೆಗೆ ಸಾಹಿತಿ ಕಾಳೇಗೌಡ ನಾಗವಾರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ಕಳೆದ ಒಂದು ವಾರದಿಂದ ನಿರಂತರ ಸಭೆ ನಡೆಸಿ ಸಾಧಕರನ್ನು ಆಯ್ಕೆ ಮಾಡುವ ಕಸರತ್ತು ನಡೆಸಿತ್ತು. ಸಮಿತಿ ಮುಂದೆ ಸುಮಾರು 1,400 ಅರ್ಜಿಗಳು ಬಂದಿದ್ದವು ಎಂದು ಹೇಳಲಾಗಿದೆ. ಅವುಗಳಲ್ಲಿ ಅಳೆದು ತೂಗಿ ಸೂಕ್ತರಾದ 126 ಜನರ ಪಟ್ಟಿ ಸಿದ್ದಪಡಿಸಲಾಗಿತ್ತು
ಎಂದು ತಿಳಿದು ಬಂದಿದೆ. 

ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮ 63 ಜನರ ಪಟ್ಟಿ ಸಿದ್ಧಪಡಿಸಲು ತೀರ್ಮಾನಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ತಡವಾಗಿ ಸಭೆಗೆ ಆಗಮಿಸಿ, ಪ್ರಶಸ್ತಿ ಪ್ರದಾನ ಮುಂದೂಡುವಂತೆ ಸಲಹೆ ನೀಡಿದರು. ಹೀಗಾಗಿ, ನೀತಿ ಸಂಹಿತೆ ಮುಕ್ತಾಯವಾದ ನಂತರ ಮತ್ತೂಂದು ಬಾರಿ ಸಭೆ ಸೇರಿ ಅಂತಿಮ ಪಟ್ಟಿ ಸಿದ್ಧಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಆಯ್ಕೆ ಸಮಿತಿಯಲ್ಲಿ ಗೊಂದಲ: ರಾಜ್ಯೋತ್ಸವ ಪ್ರಶಸ್ತಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹಾಗೂ ಆಯ್ಕೆ ಸಮಿತಿ ಸದಸ್ಯರ ನಡುವೆ ಗೊಂದಲ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಚಿತ್ರರಂಗದ ಕೆಲವು ಹೆಸರುಗಳನ್ನು ಸೇರಿಸುವ ಕುರಿತಂತೆ ವಾದ-ಪ್ರತಿವಾದ ನಡೆದಿತ್ತು ಎಂದು ತಿಳಿದು ಬಂದಿದೆ. ಸಭೆಯ ನಂತರ ಮಾತನಾಡಿದ ಸಚಿವೆ ಜಯಮಾಲಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಅಂತಿಮವಾಗಿದೆ. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದೂಡಲಾಗಿದೆ. ನವೆಂಬರ್‌ 8ರ ನಂತರ ಪ್ರಶಸ್ತಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು. ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ
ಪ್ರತ್ಯೇಕ ಪಟ್ಟಿ ನೀಡಿದ್ದಾರೆ ಎಂಬ ಮಾತನ್ನು ತಳ್ಳಿ ಹಾಕಿದ ಅವರು, “ನನ್ನ ನೇತೃತ್ವದಲ್ಲಿಯೇ ಅರ್ಹರನ್ನು ಆಯ್ಕೆ ಮಾಡಿದ್ದೇವೆ. ಎಲ್ಲವನ್ನೂ ಗೌಪ್ಯವಾಗಿಡಲಾಗಿದೆ’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next