ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಆಧಾರಿತವಾಗಿ ಜಾಹೀರಾತು ಫಲಕ ಅಳವಡಿಕೆ ಮತ್ತು ಪ್ರದರ್ಶನಕ್ಕೆ ನಿಯಮಾವಳಿ ರೂಪಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾಹೀರಾತು ಫಲಕ ಅಳವಡಿಕೆ, ಪ್ರದರ್ಶನಕ್ಕೆ ಸಂಬಂಧಪಟ್ಟಂತೆ ನಾನಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾನಾ ರೀತಿಯ ನಿಯಮಗಳು ಜಾರಿಯಲ್ಲಿವೆ. ಹಾಗಾಗಿ ಜನಸಂಖ್ಯೆಗೆ ಅನುಗುಣವಾಗಿ ಫಲಕ ಪ್ರದರ್ಶನ ಹಾಗೂ ಶುಲ್ಕ ವಿಧಿಸುವ ಸಂಬಂಧ ನಿಯಮಾವಳಿ ರೂಪಿಸಲಾಗುವುದು ಎಂದು ತಿಳಿಸಿದರು.
ದೇಶ ಹಾಗೂ ರಾಜ್ಯದ ಜನಸಂಖ್ಯೆಯಲ್ಲಿ ಶೇ.40ರಷ್ಟು ಜನ ನಗರ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಈ ಪ್ರಮಾಣ ಶೇ.50ಕ್ಕೆ ಏರಿಕೆಯಾಗಲಿದೆ. ಹಾಗಾಗಿ ನಗರ ಪ್ರದೇಶಗಳಲ್ಲಿ ಅಗತ್ಯ ಮೂಲ ಸೌಕರ್ಯ ಹಾಗೂ ಪರಿಸರ ಸ್ನೇಹಿ ಸೌಲಭ್ಯಗಳ ಅಳವಡಿಕೆಗೆ ಆದ್ಯತೆ ನೀಡಲಾಗುತ್ತಿದೆ. ಎರಡನೇ ಹಂತದ ನಗರಗಳಲ್ಲಿ ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಪಾರ್ಕಿಂಗ್ ನೀತಿ ಜಾರಿಗೊಳಿಸಲಾಗುವುದು.
ರಾಜ್ಯ ನಗರ ನೀರು ಸರಬರಾಜು ಮಂಡಳಿಗಳ ವತಿಯಿಂದ ಕಿರು ಜಲಾಶಯ ನಿರ್ಮಾಣ ಮಾತ್ರವಲ್ಲದೆ ಇಲಾಖೆಯಿಂದಲೇ ನಿರ್ವಹಣೆ ಮಾಡಲಾಗುವುದು. ಹಾಗೆಯೇ ಒಳಚರಂಡಿ ವ್ಯವಸ್ಥೆ ನಿರ್ಮಾಣದ ಜತೆಗೆ ನಿರ್ವಹಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು. ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಮಳೆ ನೀರು ಕಾಲುವೆ ಆರಂಭಿಕ ಹಾಗೂ ಮುಕ್ತಾಯ ಹಂತದವರೆಗೆ ಸಂಪೂರ್ಣ ಸ್ವಚ್ಛತಾ ಕಾರ್ಯವನ್ನು ಜಾರಿಗೊಳಿಸಲಾಗುತ್ತಿದೆ. ಈ ಸಂಬಂಧ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಇದನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ನಗರಾಭಿವೃದ್ಧಿ ಇಲಾಖೆ ವತಿಯಿಂದ ಕೈಗೊಂಡಿರುವ ಸುಧಾರಿತ ಕ್ರಮಗಳಿಂದ ಆದಾಯ ಸಂಗ್ರಹ ಹೆಚ್ಚಾಗಲಿದ್ದು, ಅದನ್ನು ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಲಾಗುವುದು. ಸುಧಾರಿತ ಸೇವೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ತಿಳಿಸಿದರು.