Advertisement

ಅಡಿಕೆಯ ಬಳಿಕ ತೆಂಗಿಗೂ ರೋಗಬಾಧೆ ಭೀತಿ

12:31 AM Jan 04, 2023 | Team Udayavani |

ಉಡುಪಿ: ಅಡಿಕೆ ಬೆಳೆಗಾರರ ಕಂಗೆಡಿಸಿರುವ ಎಲೆಚುಕ್ಕಿ ರೋಗ ತೆಂಗು ಬೆಳೆಗಾರರಿಗೂ ಸಮಸ್ಯೆ ನೀಡುವ ಸಾಧ್ಯತೆ ಎದುರಾಗಿದೆ. ತೆಂಗಿನ ಮರಗಳಲ್ಲೂ ಎಲೆಚುಕ್ಕಿ ರೋಗಗಳ ಜತೆಗೆ ಕಾಂಡ ಸೋರುವ ರೋಗ ಕಾಣಿಸಿಕೊಳ್ಳುತ್ತಿದೆ.

Advertisement

ಆದರೆ ಅಡಿಕೆ ಬೆಳೆಗಾರರಿಗೆ ಆರ್ಥಿಕವಾಗಿ ನಷ್ಟ ಮಾಡುಷ್ಟರ ಮಟ್ಟಿಗೆ ತೆಂಗು ಬೆಳೆಗಾರರಿಗೆ ಎಲೆಚುಕ್ಕಿ ರೋಗದಿಂದ ಸಮಸ್ಯೆಯಾಗುತ್ತಿಲ್ಲ. ಆದರೆ ಭವಿಷ್ಯದಲ್ಲಿ ಇದರಿಂದ ದೊಡ್ಡಮಟ್ಟಿನ ಸವಾಲು ಆಗದಂತೆ ಈಗಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45,129 ರೈತರು ಸುಮಾರು 35,623.68 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 39,834 ಬೆಳೆಗಾರರು 18,919 ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದಾರೆ. ಅನೇಕ ಕುಟುಂಬಗಳು ತೆಂಗಿನ ಬೆಳೆಯನ್ನೇ ಆಧರಿಸಿ ಜೀವನ ನಡೆಸುವುದೂ ಇದೆ.

ಬೆಂಬಲ ಬೆಲೆ ಬರಬೇಕು
ಸಿಪ್ಪೆ ತೆಗೆದ ತೆಂಗಿನ ಕಾಯಿ ಪ್ರತೀ ಕೆ.ಜಿ.ಗೆ 28ರಿಂದ 30 ರೂ.ಗಳ ವರೆಗೂ ದರ ಮಾರುಕಟ್ಟೆಯಲ್ಲಿದೆ. ಸಿಪ್ಪೆ ಸಹಿತವಾದ ತೆಂಗಿನಕಾಯಿ 9ರಿಂದ 10 ರೂ.ಗಳಿಗೆ ಮಾರಾಟವಾಗುತ್ತಿವೆ. ಸಿಪ್ಪೆ ಸಹಿತವಾಗಿ ಇರುವ ತೆಂಗಿನ ಕಾಯಿ ಬೆಲೆ ಈ ವರ್ಷ ತೀರ ಕುಸಿತ ಕಂಡಿದೆ. ಆದರೆ ಕೊಬ್ಬರಿಗೆ ಪ್ರತಿ ಕೆ.ಜಿ.ಗೆ 85ರಿಂದ 90 ರೂ.ಗಳ ವರೆಗೂ ಇದೆ. ಕೊಬ್ಬರಿಗೆ 11 ಸಾವಿರ ರೂ. ಪ್ರತೀ ಕ್ವಿಂಟಾಲ್‌ಗೆ ಕೇಂದ್ರ ಸರಕಾರ ಬೆಂಬಲ ಬೆಲೆ ನೀಡುತ್ತದೆ. ಇದೇ ಮಾದರಿಯಲ್ಲಿ ತೆಂಗಿನ ಕಾಯಿ ಮಾರಾಟದಲ್ಲೂ ಬೆಂಬಲ ಬೆಲೆ ಬರಬೇಕು ಎಂಬುದು ಕರಾವಳಿ ಭಾಗದ ಬೆಳೆಗಾರರ ಆಗ್ರಹವಾಗಿದೆ.

ಸಹಾಯಧನವೂ ಇದೆ
ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿಯಿಂದ ತೆಂಗು ಮರುನಾಟಿ ಮತ್ತು ಪುನಶ್ಚೇತನ ಹಾಗೂ ನಿರ್ವಹಣೆ ಕಾರ್ಯಕ್ರಮದಡಿ ತೆಂಗಿನ ತೋಟಗಳಲ್ಲಿ ಸಂಪೂರ್ಣವಾಗಿ ಒಣಗಿರುವ, ಕೀಟ ಅಥವಾ ರೋಗಬಾಧಿತ ತೆಂಗಿನ ಮರಗಳನ್ನು ಬುಡ ಸಮೇತ ತೆಗೆಯಲು ಶೇ. 100ರಂತೆ ಪ್ರತೀ ಗಿಡಕ್ಕೆ 1 ಸಾವಿರ ರೂ.ಗಳಂತೆ ಪ್ರತೀ ಹೆಕ್ಟೇರ್‌ಗೆ ಗರಿಷ್ಠ 32 ಮರಗಳನ್ನು ತೆಗೆಯಲು 32 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಶೇ. 50ರಂತೆ 100 ಸಸಿಗಳ ಮರುನಾಟಿಗೆ ಪ್ರತೀ ಹೆಕ್ಟೇರ್‌ಗೆ ಗರಿಷ್ಠ 4 ಸಾವಿರ ರೂ. ನೀಡಲಾಗುತ್ತದೆ. ಹಾಗೆಯೇ ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಸಸ್ಯ ಸಂರಕ್ಷಣೆ ಔಷಧಗಳಿಗೆ ಗರಿಷ್ಠ 1 ಹೆಕ್ಟೇರ್‌ಗೆ ಶೇ.75ರಂತೆ ಸಾಮಾನ್ಯ ರೈತರಿಗೆ 7500ರೂ., ಶೇ.90ರಂತೆ ಪರಿಶಿಷ್ಟ ಜಾತಿ, ಪಂಡಗಡದ ರೈತರಿಗೆ 9 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.

Advertisement

ತೆಂಗಿಗೆ ಕರಾವಳಿ ಭಾಗದಲ್ಲಿ ಕಾಂಡ ಸೋರುವ ರೋಗ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲೇ ಸೂಕ್ತ ರಾಸಾಯನಿಕ ಸಿಂಪಡಿಸುವ ಮೂಲಕ ಉಪಶಮನ ಸಾಧ್ಯ. ಅಡಿಕೆಯಷ್ಟು ಸಮಸ್ಯೆ ತೆಂಗಿಗೆ ಆಗಲಾರದಾದರೂ ಎಚ್ಚರ ವಹಿಸಬೇಕು.
– ಭುವನೇಶ್ವರಿ, ಉಪನಿರ್ದೇಶಕಿ, ಉಡುಪಿ ತೋಟಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next