ಪುತ್ತೂರು/ಮಣಿಪಾಲ: ಅಡಿಕೆ ಧಾರಣೆ ಏರಿಕೆಯ ಬೆನ್ನಲ್ಲೇ ಕರಾವಳಿಯ ಪ್ರಧಾನ ಉಪಬೆಳೆ ತೆಂಗಿನ ಕಾಯಿ ಧಾರಣೆ ದಾಖಲೆಯ 45 ರೂ.ಗಳ ಗಡಿ ದಾಟಿದೆ.
ಫಸಲು ಕೊರತೆ, ಕಾಡು ಪ್ರಾಣಿಗಳ ಹಾವಳಿ ಪರಿಣಾಮ ತೆಂಗಿನ ಕಾಯಿ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಆಗದಿರುವ ಕಾರಣ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ.
2017ರ ಡಿಸೆಂಬರ್ ಅಂತ್ಯದ ವೇಳೆ ತೆಂಗಿನ ಕಾಯಿ ಬೆಲೆ ಕೆ.ಜಿ.ಗೆ 40 ರೂ. ತಲುಪಿತ್ತು. 2018ರ ಆರಂಭದಲ್ಲೇ ಕೆ.ಜಿ. ತೆಂಗಿನಕಾಯಿಗೆ 43 ರೂ. ಗರಿಷ್ಠ ದಾಖಲೆಯ ಬೆಲೆ ಕರಾವಳಿ ಮಾರುಕಟ್ಟೆಯಲ್ಲಿ ಲಭಿಸಿತ್ತು. 2019ರಲ್ಲಿ ಕೆ.ಜಿ.ಗೆ 37 ರೂ. ತನಕ ಏರಿಕೆಯಾಗಿದ್ದ ತೆಂಗಿನಕಾಯಿ ಧಾರಣೆ ಅನಂತರ ಕುಸಿದಿತ್ತು. ಕಳೆದ ವರ್ಷವೂ ಧಾರಣೆ ಕೊಂಚ ಏರಿಕೆ ಕಂಡು ಬಳಿಕ ಇಳಿಕೆ ಕಂಡಿತ್ತು. ಈಗ ಮಾರುಕಟ್ಟೆಯಲ್ಲಿ ಪ್ರಸ್ತುತ ಒಂದು ಕೆ.ಜಿ. ತೆಂಗಿನಕಾಯಿಗೆ 43ರಿಂದ 45 ರೂ. ತನಕ ಧಾರಣೆ ಇದೆ.
ಎಣ್ಣೆ, ಕೊಬ್ಬರಿ ಧಾರಣೆಯೂ ಏರಿಕೆ
ತೆಂಗಿನ ಕಾಯಿಯೊಂದಿಗೆ ತೆಂಗಿನ ಎಣ್ಣೆ ಮತ್ತು ಕೊಬ್ಬರಿ ಧಾರಣೆ ಕೂಡ ದಾಖಲೆಯ ಮಟ್ಟಕ್ಕೆ ಏರಿದೆ. ಕಳೆದ ತಿಂಗಳು 215ರಿಂದ 220 ರೂ.ಗಳ ಆಸುಪಾಸಿನಲ್ಲಿದ್ದ ತೆಂಗಿನ ಎಣ್ಣೆಯ ಬೆಲೆ ಈಗ ಇದೇ ಮೊದಲ ಬಾರಿಗೆ 240 ರೂ.ಗಳಿಗೆ ತಲುಪಿದೆ.
ಮಾರುಕಟ್ಟೆಯಲ್ಲಿ ಇತರ ಅಡುಗೆ ಎಣ್ಣೆಗಳ ಬೆಲೆಯೂ ಏರಿಕೆಯಾಗಿರುವುದರಿಂದ ಈಗ ಹೆಚ್ಚಿನ ಕಡೆಯಲ್ಲಿ ತೆಂಗಿನ ಎಣ್ಣೆಗೆ ಬೇಡಿಕೆ ವ್ಯಕ್ತವಾಗಿದೆ.
ಕೊಬ್ಬರಿಗೆ ಕ್ವಿಂಟಾಲ್‌ಗೆ 12 ಸಾವಿರ ರೂ.ಗಳಿಂದ 13,500 ರೂ.ಗಳವರೆಗೆ ಧಾರಣೆ ಇದೆ. ತೆಂಗಿನ ಎಣ್ಣೆಯ ಮಿಲ್‌ಗಳಲ್ಲಿ ಕೆ.ಜಿ.ಗೆ 140 ರೂ.ಗಳಲ್ಲಿ ಕೊಬ್ಬರಿ ಖರೀದಿ ನಡೆಯುತ್ತಿದೆ.