ತುಮಕೂರು: ತುಮಕೂರಿನ ಉತ್ಕೃಷ್ಟ ತೆಂಗಿಗೆ ದೇಶದೆಲ್ಲೆಡೆ ಬೇಡಿಕೆ ಇದೆ. ಹತ್ತು ಹಲವು ರೋಗಗಳಿಂದ ತೆಂಗು ಬೆಳೆ ಒಣಗಿ ಹೋಗುತ್ತಿರುವ ಸಂದರ್ಭದಲ್ಲೇ ಕೊಬ್ಬರಿ ಬೆಲೆ ಕುಸಿತದಿಂದ ರೈತ ಕಂಗಾಲಾಗಿದ್ದಾನೆ.
ಜಿಲ್ಲೆಯ 10 ತಾಲೂಕುಗಳಲ್ಲೂ 10,64,754 ಹೆಕ್ಟೇರ್ ಒಟ್ಟು ಭೌಗೋಳಿಕ ವಿಸ್ತೀರ್ಣವಿದ್ದು ಅದರಲ್ಲಿ 707635 ಹೆಕ್ಟೇರ್ ಸಾಗುವಳಿ ವಿಸ್ತೀರ್ಣವಿದ್ದು, ಅದರಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ 26419 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ. ಇದರಲ್ಲಿ 1,53,376 ಹೆಕ್ಟೇರ್ ವಿಸ್ತೀರ್ಣದಲ್ಲಿ ತೆಂಗು ಬೆಳೆಯಲಾಗುತ್ತಿದೆ. 34,161 ಹೆಕ್ಟೇರ್ ವಿಸ್ತೀರ್ಣದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, 26,684 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಸೇರಿದಂತೆ ಇತರೆ ಹಣ್ಣಿನ ಬೆಳೆ ಬೆಳಯಲಾಗುತ್ತಿದೆ.
ರೋಗಬಾಧೆ-ಬೆಲೆ ಕುಸಿತ: ಈ ಜಿಲ್ಲೆಯ ತೆಂಗಿಗೆ ಭಾರೀ ಬೇಡಿಕೆ ಇತ್ತು, ತೆಂಗಿನಕಾಯಿ ಮಾರುವುದ ಕ್ಕಿಂತ, ತೆಂಗಿನಿಂದ ಕೊಬ್ಬರಿ ಮಾಡಿ ಮಾರಾಟ ಮಾಡು ವುದೇ ಈ ಭಾಗದಲ್ಲಿ ಹೆಚ್ಚು. ಜಿಲ್ಲೆಯ ತಿಪಟೂರು, ಗುಬ್ಬಿ, ಹುಳಿಯಾರು, ತುರುವೇಕೆರೆ, ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಕೊಬ್ಬರಿ ಮಾರಾಟ ಬರದಿಂದ ನಡೆಯುತ್ತದೆ. ವಾರ್ಷಿಕವಾಗಿ ಸಾವಿರ ಕೋಟಿಗೂ ಹೆಚ್ಚು ವಹಿವಾಟು ಜಿಲ್ಲೆಯಲ್ಲಿ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ತೆಂಗಿಗೆ ತಗುಲಿರುವ ನುಸಿಪೀಡೆ, ರಸ ಹೊಡೆಯುವ ರೋಗ, ಬೆಂಕಿ ರೋಗ ಇತ್ಯಾದಿ ರೋಗ ಬಾಧೆಯಿಂದ ತೆಂಗಿನ ಇಳುವರಿ ಕಡಿಮೆಯಾಗಿದೆ. ಇದರ ಜೊತೆಗೆ 2018-19ನೇ ಸಾಲಿನಲ್ಲಿ ಮುಂಗಾರು ಹಂಗಾಮಿ ಮಳೆ ಕೊರತೆ ಯಿಂದ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಅದರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತೆಂಗು- 9719.98 ಹೆಕ್ಟೇರ್, ಅಡಿಕೆ 157,96 ಹೆಕ್ಟೇರ್, ಶಿರಾ ತಾಲೂಕಿನಲ್ಲಿ ತೆಂಗು-3,386 ಹೆಕ್ಟೇರ್, ಅಡಿಕೆ- 1,842, ನಿಂಬೆ-7 ಹೆಕ್ಟೇರ್, ತಿಪ ಟೂರು ತಾಲೂಕು- ತೆಂಗು- 44,39,79, ಹೆಕ್ಟೇರ್, ಅಡಿಕೆ-101 ಹೆಕ್ಟೇರ್, ತುರುವೇಕೆರೆ- ತೆಂಗು- 1265-ಹೆಕ್ಟೇರ್, ಪಾವಗಡ- ತೆಂಗು-629 ಹೆಕ್ಟೇರ್, ತುಮಕೂರು, ಗುಬ್ಬಿ, ಕುಣಿಗಲ್, ಸೇರಿದಂತೆ ವಿವಿಧ ಕಡೆಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ನೀರಿನ ಕೊರತೆಯಿಂದ ಬಿಸಿಲ ತಾಪದಿಂದ ಒಣಗಿ ಹೋಗುತ್ತಿದೆ.
1500 ಅಡಿ ಕೊರೆದರೂ ಬರೀ ಧೂಳು: ಹಲವಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ತೋಟ ಗಾರಿಕಾ ಬೆಳೆಗಳನ್ನು ಉಳಿಕೊಳ್ಳಬೇಕು ಎಂದು ರೈತರು ಹರಸಾಹಸ ಪಡುತ್ತಿದ್ದಾರೆ. ಮಳೆ ಇಂದು ಬರುತ್ತದೆ, ನಾಳೆ ಬರುತ್ತದೆ. ಎಂದು ಕಾದು ಕೊನೆಗೆ ಮಳೆ ಬಾರದೇ ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂ. ಖರ್ಚುಮಾಡಿ ಸಾವಿರಾರು ಅಡಿಗಳ ವರೆಗೆ ಭೂಮಿ ಕೊರೆದರೂ ಒಂದು ಹನಿ ನೀರು ಬರದೇ ಬರೀ ಧೂಳು ಬರುತ್ತಿದ್ದು ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲಾಗದೇ ಸಂಕಷ್ಟ ಪಡುವ ಪರಿಸ್ಥಿತಿಗೆ ತಲುಪಿದ್ದಾರೆ.
ರೋಗದಿಂದ ಇಳುವರಿ ಕುಸಿತ : ಜಿಲ್ಲೆಯಲ್ಲಿ ತೆಂಗಿಗೆ ಕಾಣಿಸಿಕೊಂಡಿರುವ ರೋಗಬಾಧೆಯಿಂದ ಇಳುವರಿ ಸಂಪೂರ್ಣವಾಗಿ ಕುಸಿತ ಉಂಟಾಗಿದೆ. 1000 ತೆಂಗಿನ ಕಾಯಿಯನ್ನು ಕೊಬ್ಬರಿಗೆ ಹಾಕಿದರೆ 150 ರಿಂದ 200 ಕೆ.ಜಿ. ತೂಕ ಬರಬೇಕು ಆದರೆ 75 ರಿಂದ 80 ಕೆ.ಜಿ. ತೂಕ ಬರುತ್ತಿದೆ, ಇದರಿಂದ ರೈತರಿಗೆ ತುಂಬಾ ಹೊಡೆತ ಉಂಟಾಗಿದೆ. ಕೊಬ್ಬರಿಗೆ ಈಗ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ಗೆ ಗರಿಷ್ಠ 16,900ರೂ. ಕನಿಷ್ಠ 14,800 ರೂ. ಮಾದರಿ 16,00ರೂ. ಬೆಲೆ ಇದೆ.
ಒಣಗುತ್ತಿರುವ ತೆಂಗಿನ ಮರಗಳು : ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಮಳೆ ಬಾರದೆ ಬರಗಾಲ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೆ, ಮಳೆಯೂ ಇಲ್ಲದೆ ಬಯಲು ಸೀಮೆಯ ಈ ತೆಂಗಿನ ಮರಗಳು ಬಿಸಿಲ ತಾಪಕ್ಕೆ ಒಣಗಿ ಹೋಗು ತ್ತಿವೆ. ಒಂದೆಡೆ ರೋಗಬಾಧೆ, ಇನ್ನೊಂದೆಡೆ ನೀರಿನ ಕೊರತೆ ಇದರಿಂದ ತೆಂಗು ತನ್ನ ಇಳುವರಿಯನ್ನು ಕಳೆದುಕೊಳ್ಳುತ್ತಿದೆ. ತೆಂಗು ನಂಬಿದ್ದ ರೈತರಿಗೇನೂ ಪ್ರಯೋಜನವಾಗದ ಸ್ಥಿತಿ ನಿರ್ಮಾಣವಾಗಿದೆ. ಈಗ ರೈತರಿಗೆ ಅನುಕೂಲವಾಗುವಂತಹ ಬೆಲೆ ಕೊಬ್ಬರಿಗೆ ಇದ್ದರೂ ರೈತರ ಬಳಿ ನಿರೀಕ್ಷೆಯಷ್ಟು ತೆಂಗು ಉತ್ಪತ್ತಿ ಯಾಗುತ್ತಿಲ್ಲ ಕಾರಣ ಮಳೆಯ ಕೊರತೆ, ರೋಗಬಾಧೆ ತೆಂಗು ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಉಳಿಸಿ ಕೊಳ್ಳಲು ಲಕ್ಷಾಂತರ ರೂ. ಖರ್ಚು ಮಾಡಿದ್ದರೂ ಅದರ ಬೆಲೆ ರೈತರಿಗೆ ಸಿಗುತ್ತಿಲ್ಲ, ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ನೀಡುತ್ತಿರುವ ಬೆಲೆ ಸಾಲದಾಗಿದ್ದು, ಈ ಬೆಳೆಗಳಿಗೆ ಉತ್ತಮ ಪ್ರೋತ್ಸಾಹ ನೀಡಿ ರೈತರನ್ನು ರಕ್ಷಿಸಬೇಕಿದೆ.
ಚಿ.ನಿ. ಪುರುಷೋತ್ತಮ್