Advertisement

ತೆಂಗಿನ ಬೆಲೆ ಕುಸಿತ- ಬೆಳೆಗಾರ ಕಂಗಾಲು

09:37 AM Jun 07, 2019 | keerthan |

ಉಡುಪಿ: ಎರಡು ವರ್ಷಗಳ ಹಿಂದೆ ತೆಂಗಿನಕಾಯಿ ಬೆಲೆ ಕುಸಿತವಾದಾಗ ಸರಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮೂಲಕ ಕೆಜಿಗೆ 16 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಿತ್ತು. ಈಗಲೂ ಧಾರಣೆ ಕುಸಿತವಾಗಿದೆ. ಉಡುಪಿ ಜಿಲ್ಲೆಯಲ್ಲಿ 22,120 ಹೆ. ಪ್ರದೇಶದಲ್ಲಿ, ದ.ಕ. ಜಿಲ್ಲೆಯಲ್ಲಿ ಇಷ್ಟೇ ಪ್ರಮಾಣದಲ್ಲಿ ತೆಂಗು ಬೆಳೆಯುವ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

Advertisement

2018ರ ಜೂನ್‌ ಆರಂಭದಲ್ಲಿ ಒಣ ಕೊಬ್ಬರಿ ದರ ಕೆಜಿಗೆ 137 ರೂ. ಇತ್ತು. ಈಗ 100 ರೂ.ಗಿಂತ ಕಡಿಮೆ ಇದೆ. ತೆಂಗಿನಕಾಯಿ ದರ ಕೆಜಿಗೆ 41- 42 ರೂ. ಇತ್ತು, ಈಗ 24-25 ರೂ. ಇದೆ. ಇದು ರೈತರು ಮಾರಾಟ ಮಾಡುವ ದರ. ಒಂದೂವರೆ ತಿಂಗಳ ಹಿಂದೆ ತೆಂಗಿನಕಾಯಿ ಬೆಲೆ ಕೆಜಿಗೆ 32-34 ರೂ. ಇತ್ತು.

ತೆಂಗಿನ ಒಣಪುಡಿ ಮಾಡುವ ಘಟಕಗಳ ಉತ್ಪನ್ನಗಳಿಗೆ ಬೇಡಿಕೆ ಕುಸಿದದ್ದೇ ದರ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಇದು ಉತ್ತರ ಭಾರತ ಮತ್ತು ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಆಗುತ್ತಿತ್ತು. ಅಲ್ಲಿ ಬೇಡಿಕೆ ಕುಸಿದುದರ ಪರಿಣಾಮ ಇಲ್ಲೂ ಆಗಿದೆ. ಪರಿಣಾಮ ಘಟಕದವರು ರೈತರಿಂದ ಖರೀದಿಸುತ್ತಿಲ್ಲ. ಥಾçಲಂಡ್‌, ಇಂಡೋನೇಶ್ಯಾ, ವಿಯೆಟ್ನಾಂನಿಂದ ಅಗ್ಗದ ದರದಲ್ಲಿ ತೆಂಗಿನಕಾಯಿ ಪೂರೈಕೆಯಾಗುತ್ತಿರುವುದರಿಂದ ವಿದೇಶಿ ಮಾರು ಕಟ್ಟೆಯಲ್ಲಿ ಭಾರತದ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ. ವಿದೇಶಿ ಉತ್ಪಾದಕರು ಕಡಿಮೆ ದರದಲ್ಲಿ ಕಡಿಮೆ ಗುಣ ಮಟ್ಟದ ಪೌಡರ್‌ನ್ನು ಭಾರತಕ್ಕೂ ಪೂರೈಸುತ್ತಿ ರುವುದರಿಂದ ಉತ್ತರ ಭಾರತದಲ್ಲಿ ಇಲ್ಲಿನ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಒಟ್ಟಾರೆ ಪರಿಣಾಮ ಬೆಳೆಗಾರರ ಮೇಲಾಗಿದೆ.

ವಾಣಿಜ್ಯ ಸಚಿವರಲ್ಲಿ ಮಾತನಾಡುತ್ತೇನೆ
ವಿದೇಶಗಳಿಂದ ತೆಂಗಿನ ಕಳಪೆ ಗುಣಮಟ್ಟದ ಉತ್ಪನ್ನಗಳು ಆಮದಾಗುವ ವಿಷಯವನ್ನು ಕೇಂದ್ರ ವಾಣಿಜ್ಯ ಸಚಿವರಿಗೆ ತಿಳಿಸುತ್ತೇನೆ. ಕೇಂದ್ರದಿಂದ ಬೆಂಬಲ ಬೆಲೆ ಘೋಷಿಸುವುದಾದರೆ ದೇಶದ ವಿವಿಧ ರಾಜ್ಯಗಳಲ್ಲಿ ತೆಂಗು ಬೆಳೆಗಾರರು ಇರುವುದರಿಂದ ಬೆಂಬಲ ಬೆಲೆಯನ್ನು ಎಲ್ಲ ಕಡೆಗೂ ಕೊಡಬೇಕಾಗುತ್ತದೆ. ಈ ಕುರಿತೂ ಪ್ರಸ್ತಾವಿಸುತ್ತೇನೆ..
– ಶೋಭಾ ಕರಂದ್ಲಾಜೆ, ಸಂಸದರು, ಉಡುಪಿ -ಚಿಕ್ಕಮಗಳೂರು ಕ್ಷೇತ್ರ.

ರೈತರ ಹಿತಾಸಕ್ತಿ ಕಡಿಮೆಯಾಗಿದೆ
ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ದರ ಕಡಿಮೆಯಾದರೆ ಮುಖದಲ್ಲಿ ಮಂದಹಾಸ ಉಂಟಾಗುತ್ತದೆ. ಆದರೆ ರೈತರ ಹಿತಾಸಕ್ತಿಯನ್ನು ಕಾಪಾಡಲು ಯಾರೂ ಇಲ್ಲ. ಒಂದು ತೆಂಗಿನ ಕಾಯಿ ದರದಲ್ಲಿ ಶೇ.25 ಕಾಯಿ ಕೀಳಲು ಖರ್ಚಾಗುತ್ತದೆ. ನೀರು ಪೂರೈಕೆ, ಬಾವಿ,  ಪಂಪ್‌ಸೆಟ್‌ ಇತ್ಯಾದಿಗಳಿಗೆ ಮಾಡುವ ಬಂಡವಾಳ ಹೂಡಿಕೆಯನ್ನು ಗಣಿಸಿದರೆ ರೈತನಿಗೆ  ಲಾಭ ಸಿಗುವುದಿಲ್ಲ..
ರಾಮಕೃಷ್ಣ ಶರ್ಮ ಬಂಟಕಲ್ಲು, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷರು

Advertisement

ಕ್ಯಾಂಪ್ಕೋ ಮಾದರಿ ಅಗತ್ಯ
ಕಾಡುಪ್ರಾಣಿಗಳ ಉಪಟಳ ನಿಯಂತ್ರಿಸಲು ಬೇಕಾದ ಕೋವಿಗಳಿಗೆ ಸರಕಾರ ಪರವಾನಿಗೆ ಶುಲ್ಕವನ್ನು ಮನ್ನಾ ಮಾಡಬೇಕು. ರಾಜ್ಯದ ಕೆಲವು ಜಿಲ್ಲೆಗಳಲ್ಲಿರುವ ಕೊಬ್ಬರಿ ಖರೀದಿ ಕೇಂದ್ರಗಳನ್ನು ಉಡುಪಿಗೂ ವಿಸ್ತರಿಸಬೇಕು. ತೆಂಗಿನ ಉತ್ಪನ್ನ, ತೆಂಗಿನೆಣ್ಣೆ ಘಟಕ, ಕೊಬ್ಬರಿ ಪುಡಿ ಕಾರ್ಖಾನೆಗಳನ್ನು ಕ್ಯಾಂಪ್ಕೋ ಮಾದರಿಯಲ್ಲಿ ಸ್ಥಾಪಿಸಿ ತೆಂಗು ಬೆಳೆಗಾರರ ರಕ್ಷಣೆ ಮಾಡಬೇಕು.
ಸತೀಶ್‌ಕುಮಾರ್‌ ಶೆಟ್ಟಿ ಯಡ್ತಾಡಿ, ಕೃಷಿಕರು

ಎಷ್ಟು ದಿನ ನಷ್ಟ ಅನುಭವಿಸಬಹುದು?
ಉತ್ತರ ಭಾರತಕ್ಕೆ ವಿದೇಶಗಳಿಂದ ಬರುತ್ತಿರುವ ಕಳಪೆ ಗುಣಮಟ್ಟದ ತೆಂಗಿನ ಪೌಡರ್‌ ಬಗ್ಗೆ ಸರಕಾರಕ್ಕೆ ಬರೆದಿದ್ದೇವೆ. ದರ ಕಡಿಮೆ ಎಂಬ ಕಾರಣಕ್ಕೆ ಇಲ್ಲಿ ಮಾರುಕಟ್ಟೆ ಸೃಷ್ಟಿಯಾಗಿದೆ. ನಾವು ಎಷ್ಟು ದಿನ ನಷ್ಟ ಅನುಭವಿಸಬಹುದು? ಒಂದು ತಿಂಗಳಿಂದ ನನ್ನ ಘಟಕವನ್ನು ಮುಚ್ಚಿದ್ದೇನೆ.
ಜಾನ್‌ ಡಿ’ಸಿಲ್ವ ಸಾಣೂರು ಕುಂಟಲ್ಪಾಡಿ,  ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next