Advertisement

ಸಾವಯವ ಕೃಷಿಕರಿಂದ ಕೊಬ್ಬರಿ ಎಣ್ಣೆ- ಸೋಪು ತಯಾರಿಕೆ

11:36 PM Dec 13, 2019 | Lakshmi GovindaRaj |

ಚಾಮರಾಜನಗರ: ರೈತರು ಸಾಂಪ್ರದಾಯಿಕ ವಿಧಾನದ ಕೃಷಿಗೇ ಅವಲಂಬಿತರಾಗದೇ, ಆಧುನಿಕ ಅನ್ವೇಷಣೆಗೆ, ಕೃಷಿ ಆಧಾರಿತ ಉಪ ಕಸುಬಿಗೆ ತೆರೆದುಕೊಂಡರೆ ಕೃಷಿಯನ್ನು ಲಾಭದಾಯಕವನ್ನಾಗಿಸಬಹುದು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಜಿಲ್ಲೆಯ ಹೊನ್ನೂರು ಗ್ರಾಮದ ಸಾವಯವ ಕೃಷಿಕರು ಕೊಬ್ಬರಿ ಎಣ್ಣೆ ಹಾಗೂ ನಾಡ ಹಸುವಿನ ಹಾಲು ಬಳಸಿ ಸಾಬೂನು ತಯಾರಿಸಿ ಯಶಸ್ಸು ಕಂಡಿದ್ದಾರೆ.

Advertisement

ಸಾವಯವ ಕೃಷಿಕರ ಸಂಘ ಸ್ಥಾಪನೆ: ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಮೈಸೂರಿನ ನಿಸರ್ಗ ಟ್ರಸ್ಟ್‌ ಸಹಯೋಗದೊಂದಿಗೆ ನೈಸರ್ಗಿಕ ಸಾವಯವ ಕೃಷಿಕರ ಸಂಘವನ್ನು ಸ್ಥಾಪಿಸಲಾಗಿದೆ. ಈ ಸಂಘದಡಿಯಲ್ಲಿ ಹಲವು ರೈತ ಕುಟುಂಬಗಳು ಒಡಗೂಡಿ ಸಾಮೂಹಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡಿವೆ. ಇದರಲ್ಲಿ ಈಗಾಗಲೇ ಅನೇಕ ಬೆಳೆಗಳನ್ನು ಸಾವಯವ ಪದ್ಧತಿಯ ಮೂಲಕ ಸಾಮೂಹಿಕವಾಗಿ ಬೇಸಾಯ ಮಾಡಲಾಗಿದೆ. ಈ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬೆಳೆದು, ಗ್ರಾಹಕರಿಗೆ ನೇರ ಮಾರುಕಟ್ಟೆಯಲ್ಲಿ ಮಾರಾಟವನ್ನೂ ಮಾಡಲಾಗುತ್ತಿದೆ. ಅಲ್ಲದೇ ಸಾಮೂಹಿಕ ಹೈನುಗಾರಿಕೆಯನ್ನೂ ನಡೆಸುತ್ತಿದೆ.

ಶೀಘ್ರದಲ್ಲೇ ಮೈಸೂರಿನ ನಿಸರ್ಗ ಟ್ರಸ್ಟ್‌ನಲ್ಲಿ ಮಾರಾಟ: ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನೈಸರ್ಗಿಕ ಸಾವಯವ ಕೃಷಿಕರ ಸಂಘ, ಇದೀಗ ಕೊಬ್ಬರಿ ಎಣ್ಣೆ ಹಾಗೂ ನಾಡಹಸುವಿನ ಹಾಲು ಬಳಸಿ ಸ್ನಾನದ ಸಾಬೂನು ತಯಾರಿಕೆ ಆರಂಭಿಸಿದೆ. ಅಲ್ಲದೇ ಅಲೊವೆರಾ, ಅರಿಶಿನ, ಕ್ಯಾರೆಟ್‌, ಬೀಟ್‌ರೂಟ್‌, ಬೇವು, ಗೋ ಮೂತ್ರವನ್ನು ಇದಕ್ಕೆ ಬೆರೆಸಿ ಸೋಪುಗಳನ್ನು ತಯಾರಿಸಲಾಗುತ್ತಿದೆ. ಈ ಸ್ನಾನದ ಸೋಪುಗಳನ್ನು ಮೈಸೂರಿನ ನಿಸರ್ಗ ಟ್ರಸ್ಟ್‌ನಲ್ಲಿ ಸದ್ಯವೇ ಮಾರಾಟ ಮಾಡಲಾಗುತ್ತದೆ.

ಸೋಪಿನ ತಯಾರಿಕೆ ಹೇಗೆ: ಸ್ವಲ್ಪ ಪ್ರಮಾಣದ ಕಾಸ್ಟಿಕ್‌ ಸೋಡಾ, ಶೇ.75ರಷ್ಟು ಕೊಬ್ಬರಿ ಎಣ್ಣೆ, ಶೇ.25 ರಷ್ಟು ಹಸುವಿನ ಹಾಲು ಬಳಸಿ ಸೋಪನ್ನು ತಯಾರಿಸಲಾಗುತ್ತದೆ. ಕಾಸ್ಟಿಕ್‌ ಸೋಡಾ ಬಿಟ್ಟರೆ ಇನ್ನಾವುದೇ ರಾಸಾಯನಿಕ ವಸ್ತು ಬಳಸುವುದಿಲ್ಲ. ಹೀಗೆ ತಯಾರಿಸಿದ ಸೋಪನ್ನು 30 ದಿನಗಳ ಕಾಲ ಒಣಗಿಸಬೇಕು. ಯಾವುದೇ ಯಂತ್ರ ಬಳಕೆ ಇಲ್ಲದೇ ಕೈನಿಂದ ತಯಾರಿಸಿದ ಸೋಪುಗಳಿವು. ಮಾರುಕಟೆಯಲ್ಲಿ ದೊರಕುವ ಕೈನಿಂದ ತಯಾರಿಸಿದ (ಹ್ಯಾಂಡ್‌ಮೇಡ್‌) ಬ್ಯಾಂಡೆಡ್‌ ಸೋಪುಗಳಿಗೆ ಬಹಳ ಬೇಡಿಕೆಯಿದೆ. ಇಷ್ಟೇ ಅಲ್ಲ, ಫೇಸ್‌ ವಾಶ್‌ ಅನ್ನೂ ತಯಾರಿಸಲು ಉದ್ದೇಶಿಸಲಾಗಿದೆ. ಹಾಲು , ಜೇನುತುಪ್ಪ, ಅರಿಶಿನಪುಡಿ ಹಾಗೂ ಹುಣಸೆಹಣ್ಣು ಬಳಸಿ ಫೇಸ್‌ ವಾಶ್‌ ಅನ್ನು ತಯಾರಿಸಲು ಉದ್ದೇಶಿಸಲಾಗಿದೆ.

ನಾವೇ ದರ ನಿಗದಿ ಮಾಡ್ತೇವೆ: ಈ ನೈಸರ್ಗಿಕ ಸಾವಯವ ಕೃಷಿಕರ ಸಂಘವು ತನ್ನದೇ ಉತ್ಪನ್ನಗಳನ್ನು ತಯಾರಿಸುವ ಸಾಹಸಕ್ಕೆ ಕೈ ಹಾಕಿದೆ. ತಾವು ಬೆಳೆದ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಖರೀದಿ ಮಾಡುವವ ಕೊಡುವ ದರವನ್ನೇ ಪಡೆಯಬೇಕು. ಆದರೆ, ನಾವು ಬೆಳೆದ ಉತ್ಪನ್ನಗಳನ್ನು ಮೌಲ್ಯವರ್ಧಿತಗೊಳಿಸಿ, ಪ್ಯಾಕ್‌ ಮಾಡಿ ಮಾರಾಟ ಮಾಡಿದರೆ ನಾವೇ ದರ ನಿಗದಿ ಮಾಡಬಹುದು. ಆ ಕೆಲಸಕ್ಕೆ ನಮ್ಮ ಬಳಗ ಇದೀಗ ಮುಂದಾಗಿದೆ ಎಂದು ನೈಸರ್ಗಿಕ ಸಾವಯವ ಕೃಷಿಕರ ಸಂಘದ ಸ್ಥಾಪಕ ಹಾಗೂ ಜಿಲ್ಲಾ ರೈತ ಸಂಘದ ಅಧ್ಯಕ್ಷರೂ ಆಗಿರುವ ಹೊನ್ನೂರು ಪ್ರಕಾಶ್‌ ತಿಳಿಸಿದರು.

Advertisement

ನಮ್ಮ ಸಂಘ ಇದೀಗ ತಾನೇ ಅಸ್ತಿತ್ವಕ್ಕೆ ಬಂದಿದ್ದು ಒಂದೇ ಕಡೆ ನಾನಾ ಉತ್ಪನ್ನಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು, ಆ ಉತ್ಪನ್ನಗಳನ್ನು ಮೌಲ್ಯವರ್ಧಿತಗೊಳಿಸಿ ನಾವೇ ದರ ನಿಗದಿ ಮಾಡಿ ಮಾರಾಟ ಮಾಡುವುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಇದೀಗ ನಾವು ದಾಪುಗಾಲು ಹಾಕಿದ್ದೇವೆ. ಇದಕ್ಕೆ ಮೈಸೂರಿನ ನಿಸರ್ಗ ಟ್ರಸ್ಟ್‌ ಬೆನ್ನೆಲುಬಾಗಿ ನಿಂತಿದೆ ಎಂದು ಮಾಹಿತಿ ನೀಡಿದರು.

ಸಾಮೂಹಿಕ ಬೇಸಾಯ ಪದ್ಧತಿಯ ವಿಶೇಷ: ಹೊನ್ನೂರು ಗ್ರಾಮದಲ್ಲಿ ರಚಿಸಿಕೊಂಡಿರುವ ಸಾಮೂಹಿಕ ಬೇಸಾಯ ಬಳಗದ ಪರಿಕಲ್ಪನೆ ವಿಶಿಷ್ಟವಾದದು. ಈ ಹಿಂದಿನ ಅವಿಭಕ್ತ ಕುಟುಂಬಗಳು ಸೇರಿ ಮಾಡುತ್ತಿದ್ದ ಸಾಮೂಹಿಕ ಪದ್ಧತಿಯ ಪ್ರತಿರೂಪ ಇದು. ಹೊನ್ನೂರಿನಲ್ಲಿ ಸದ್ಯ 15 ಕುಟುಂಬಗಳು ಸೇರಿ ಸಾಮೂಹಿಕ ಪದ್ಧತಿಯಡಿ ಸಾವಯವ ಕೃಷಿಯನ್ನು ಶುರು ಮಾಡಿವೆ. 5 ಎಕರೆ ಭೂಮಿಯಲ್ಲಿ ಎಲ್ಲರೂ ಸೇರಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇಲ್ಲಿ ಸಿರಿಧಾನ್ಯ ಸೇರಿದಂತೆ ನಾನಾ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ. ಈ ಉತ್ಪನ್ನಗಳನ್ನು ಶುದ್ಧೀಕರಿಸಿ, ಪ್ಯಾಕಿಂಗ್‌ ಮಾಡಿ, ಮಾರಾಟ ಮಾಡಲಾಗುತ್ತದೆ. ಈ ಪ್ರಯತ್ನ ಇದೀಗ ಸಣ್ಣದಾಗಿ ಶುರುವಾಗಿದೆ. ಈ ಸಾವಯವ ಕೃಷಿಕರ ಸಂಘವು ಇದೀಗ ಬ್ಯಾಂಕ್‌ ಮೂಲಕ 5 ಲಕ್ಷ ರೂ . ಸಾಲ ಪಡೆದು ತನ್ನ ಸಾಹಸಕ್ಕೆ ಕೈ ಹಾಕಿದೆ. ಮುಂದೆ ಇನ್ನು ಐದು ಲಕ್ಷ ರೂ. ಸಾಲ ಬರಲಿದ್ದು ಸೋಪು, ಫೇಸ್‌ವಾಶ್‌ ಅಲ್ಲದೇ ಎಣ್ಣೆ ತಯಾರಿ, ಅರಿಶಿನ ಪುಡಿ ಸೇರಿದಂತೆ ನಾನಾ ತಯಾರಿಕಾ ಘಟಕಗಳನ್ನು ಸ್ಥಾಪನೆ ಮಾಡುವ ಉದ್ದೇಶವನ್ನು ಹೊಂದಿದೆ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next