Advertisement

ತೋಟವಿದ್ದರೂ ನಿತ್ಯ ಬಳಕೆಗೂ ಸಿಗುತ್ತಿಲ್ಲ ತೆಂಗಿನಕಾಯಿ

01:20 AM Dec 06, 2019 | mahesh |

ಸುಬ್ರಹ್ಮಣ್ಯ : ಮಲೆನಾಡು ಭಾಗದಲ್ಲಿ ರೈತರ ಬೆಳೆ ನಾಶ ಮಾಡಿ ಆರ್ಥಿಕ ಸಂಕಷ್ಟ ತಂದೊಡ್ಡುವ ಮಂಗಗಳ ಹಾವಳಿ ಬೇಸಿಗೆ ಆರಂಭದಲ್ಲೆ ಯಥೇತ್ಛವಾಗಿ ಕಾಡುತ್ತಿದೆ. ರೈತರ ಬಳಿ ನೂರು ತೆಂಗಿನ ಮರಗಳಿದ್ದರೂ ಮಂಗಗಳ ಕಾಟದಿಂದಾಗಿ ನಿತ್ಯ ಬಳಕೆಗೆ ಒಂದು ತೆಂಗಿನಕಾಯಿ ಬೇಕಿದ್ದರೂ ಅಂಗಡಿಯಿಂದಲೇ ತರಬೇಕಾದ ದುಃಸ್ಥಿತಿ ಗ್ರಾಮೀಣ ಪ್ರದೇಶ ಕೆಲವೆಡೆ ಇದೆ.

Advertisement

ಕರಾವಳಿ ಒಳನಾಡಿನ ಸುಳ್ಯ ಭಾಗದಲ್ಲಿ ಕೃಷಿಕರು ಮಂಗಗಳ ಉಪಟಳದಿಂದ ರೋಸಿ ಹೋಗಿದ್ದಾರೆ. ಇದು ಕೃಷಿಕರ ನಿತ್ಯದ ಗೋಳಾಗಿ ಪರಿಣಮಿಸಿದೆ. ಕೃಷಿ ಫಸಲು ನಾಶವಾಗುತ್ತಿದ್ದರೂ ತೋಟದಲ್ಲಿ ದಾಂಧಲೆ ಮಾಡುವ ಮಂಗಗಳನ್ನು ದಂಡಿಸುವಂತಿಲ್ಲ. ಮಂಗಗಳಿಂದಾದ ಬೆಳೆ ಹಾನಿಗೆ ಪರಿಹಾರವೂ ಸಿಗುತ್ತಿಲ್ಲ. ಇದರಿಂದ ಕೃಷಿಕರು ಬೆಳೆ ಸಂರಕ್ಷಣೆಯ ಸಮಸ್ಯೆ ಜತೆಗೆ ಆರ್ಥಿಕ ನಷ್ಟದಿಂದ ಬಳಲಿ ಬೆಂಡಾಗಿದ್ದಾರೆ.

ಸುಳ್ಯ ತಾಲೂಕು ಕೃಷಿ ಅವಲಂಬಿತ ಪ್ರದೇಶ. ಬಹುತೇಕ ಕೃಷಿಕರನ್ನು ಹೊಂದಿರುವ ಇಲ್ಲಿ ಅಡಿಕೆ, ತೆಂಗು ಪ್ರಮುಖ ಆರ್ಥಿಕ ಬೆಳೆಗಳು. ಇತ್ತೀಚಿನ ವರ್ಷಗಳಲ್ಲಿ ರಬ್ಬರ್‌ ಹಾಗೂ ಕೊಕ್ಕೋ, ಕರಿಮೆಣಸು ಇತ್ಯಾದಿ ಉಪ ಬೆಳೆಗಳನ್ನು ಕೃಷಿಕರು ನೆಚ್ಚಿಕೊಂಡಿದ್ದರೂ ಅಡಿಕೆ, ತೆಂಗು ಇಂದಿಗೂ ಇಲ್ಲಿನ ಪ್ರಮುಖ ಬೆಳೆಗಳಾಗಿವೆ.

ಸುಳ್ಯ ಹಾಗೂ ಕಡಬ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಂಗಗಳು ಕಾಡಿನಲ್ಲಿ ಆಹಾರದ ಕೊರತೆಯಿಂದ ಸಮೀಪದ ಕೃಷಿಕರ ತೋಟಗಳಿಗೆ ನುಗ್ಗಿ ಫಸಲು ನಷ್ಟ ಮಾಡುತ್ತಿವೆ. ಅಡಿಕೆ, ಕೊಕ್ಕೋ, ತೆಂಗಿನ ಕಾಯಿ ಸುಲಿದು ತಿನ್ನುವುದಲ್ಲದೆ, ತಿನ್ನುವುದಕ್ಕಿಂತ ಹೆಚ್ಚು ಹಾಳು ಮಾಡುತ್ತವೆ.

ತೋಟಗಳಿಗೆ, ಮನೆಯ ಅಂಗಳಕ್ಕೂ ನುಗ್ಗುವ ಮಂಗಗಳನ್ನು ಓಡಿಸಲು ಶಬ್ದ ಮಾಡುವ ಯಾವ ಪ್ರಯೋಗಗಳೂ ಫಲ ಕೊಡುತ್ತಿಲ್ಲ. ಈಗ ಅವುಗಳಿಗೆ ಅಂತಹ ಶಬ್ದಗಳು ರೂಢಿಯಾಗಿವೆ. ಹೀಗಾಗಿ, ಲೂಟಿಯನ್ನು ಮುಂದುವರಿಸುತ್ತವೆ. ಮಂಗಗಳ ಹಾವಳಿಯಿಂದಾಗಿ ಎಳೆಯ ಅಡಿಕೆ, ಬಲಿತ ಅಡಿಕೆ, ಎಳನೀರು ಇತ್ಯಾದಿಗಳು ನೆಲಕ್ಕುರುಳುತ್ತಿವೆ. ಪಪ್ಪಾಯಿ ಗಿಡದ ಕಾಯಿ ಒತ್ತಟ್ಟಿಗಿರಲಿ, ಎಲೆಗಳನ್ನೂ ಬಿಡುವುದಿಲ್ಲ. ಮರಗಳೆಲ್ಲ ಬೋಳಾಗಿ ಕಾಣುತ್ತಿವೆ. ತರಕಾರಿ ಕೃಷಿಗೂ ಲಗ್ಗೆಯಿಟ್ಟು ಹಾಳು ಮಾಡುತ್ತಿವೆ. ಇದರಿಂದ ಬೇಸತ್ತಿರುವ ಕೃಷಿಕರು, ತೋಟಗಾರಿಕೆ ಬೆಳೆಗಳ ಸಹವಾಸವೇ ಬೇಡ ಎನ್ನುವ ಸ್ಥಿತಿಗೆ ಬಂದಿದ್ದಾರೆ. ಆನೆ, ಜಿಂಕೆ, ಕಡವೆ, ಕಾಡುಕೋಣ ಇತ್ಯಾದಿ ವನ್ಯಜೀವಿಗಳಿಂದ ರೈತರಿಗಾಗುವ ಬೆಳೆ ನಷ್ಟಕ್ಕೆ ಪರಿಹಾರ ನಿಗದಿಪಡಿಸಲಾಗಿದೆ. ತೊಂದರೆ ನೀಡುತ್ತಿರುವ ಮಂಗ ವನ್ಯ ಜೀವಿಯಾಗಿದ್ದರೂ ಬೆಳೆ ನಷ್ಟ ಪರಿಹಾರ ನೀಡಲು ಅವಕಾಶವಿಲ್ಲ. ವನ್ಯಜೀವಿ ಎರಡನೇ ಶೆಡ್ನೂಲ್‌ನಲ್ಲಿ ಮಂಗಗಳೂ ಸೇರಿವೆ. ಸರಕಾರ, ಜನಪ್ರತಿನಿಧಿಗಳು, ರೈತರಿಗೆ ಮಂಗಗಳಿಂದಾಗುವ ನಷ್ಟ ಪರಿಹಾರ ತುಂಬಿಕೊಡಲು ಸ್ಪಂದಿಸುತ್ತಿಲ್ಲ.

Advertisement

ಇತ್ತೀಚಿನ ವರ್ಷಗಳಲ್ಲಿ ಮಂಗಗಳ ಸಂತತಿಯೂ ಹೆಚ್ಚುತ್ತಿದ್ದು, ಬೇಸಗೆಯ ದಿನಗಳಲ್ಲಿ ಕಾಡಿನಲ್ಲಿ ಅವುಗಳಿಗೆ ಆಹಾರ ಸಿಗುತ್ತಿಲ್ಲ. ಹೀಗಾಗಿ, ಮಂಗಗಳು ಹೆಚ್ಚು ಆಕ್ರಮಣಕಾರಿಯಾಗಿರುತ್ತವೆ. ಸಾಮಾನ್ಯವಾಗಿ ಮಂಗಗಳು ತೋಟಕ್ಕೆ ದಾಳಿ ಮಾಡಿ ತಿನ್ನುವುದಕ್ಕಿಂತಲೂ ಹಾಳು ಮಾಡುವುದೇ ಹೆಚ್ಚು. ಹಂದಿ, ಕಾಡು ಕೋಣ, ಕಾಡಮ್ಮೆ, ಕಡವೆ ಕಾಟ ಜತೆ ಇವುಗಳ ಉಪಟಳ ಮಿತಿಮೀರಿದೆ. ಚಿರತೆ ಉಪಟಳವಿದ್ದರೂ ಬೆಳೆ ನಾಶಕ್ಕಿಂತ ಅವುಗಳಿಂದ ಜೀವ ಭಯ ಹೆಚ್ಚು.

ಮಂಗಗಳಿಂದಾಗುತ್ತಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ರೈತರು ಅರಣ್ಯ ಇಲಾಖೆ, ಸರಕಾರವನ್ನು ಒತ್ತಾಯಿ ಸುತ್ತಲೇ ಬಂದಿದ್ದಾರೆ. ಕೃಷಿ ಕುಂಠಿತಕ್ಕೆ ಬೆಳೆಗಳಿಗೆ ತಗಲುವ ನಾನಾ ರೋಗಗಳ ಜತೆ ಕಾರ್ಮಿಕರ ಕೊರತೆ ಹಾಗೂ ಕೂಲಿ ಹೆಚ್ಚಳ, ಕಾಡು ಪ್ರಾಣಿಗಳ ಅದರಲ್ಲೂ ಮಂಗಗಳ ಉಪಟಳ ಮುಖ್ಯ ಕಾರಣ ಎನ್ನುವುದು ರೈತರ ಗೋಳು. ಡಿ.ವಿ ಸದಾನಂದ ಗೌಡ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಸುಳ್ಯದಲ್ಲಿ ಮಂಕಿ ಪಾರ್ಕ್‌ ಸ್ಥಾಪಿಸುವ ಕುರಿತು ಮಾತನಾಡಿದ್ದರು. ಬಳಿಕ ಅದು ಕಾರ್ಯ ರೂಪಕ್ಕೆ ಬಂದಿರಲಿಲ್ಲ.

ಕೃಷಿಕರ ಬೇಡಿಗಳೇನು?
ಸಂತಾನಹರಣ ಚಿಕಿತ್ಸೆ ಮೂಲಕ ಮಂಗಗಳ ಸಂತತಿ ನಿಯಂತ್ರಿಸಬೇಕು (ಹಿಮಾಚಲ ಮಾದರಿಯಲ್ಲಿ). ರೈತರಿಗೆ ಮಂಗಗಳನ್ನು ಓಡಿಸಲು ಆಧುನಿಕ ಕೋವಿ (ರಬ್ಬರ್‌ ಗುಂಡು) ಒದಗಿಸಬೇಕು. ಹೊಸ ಆವಿಷ್ಕಾರವಾಗಬೇಕು. ಮಂಗ ಗಳನ್ನು ಅರಣ್ಯದಲ್ಲಿ ಬಿಡಬೇಕು. ಮಂಗಗಳಿಂದಾಗುವ ಬೆಳೆ ನಷ್ಟಕ್ಕೆ ಸರಕಾರ ಪರಿಹಾರ ಕೊಡಬೇಕು. ವಿಧಾನ ಸಭೆಯಲ್ಲಿ ಚರ್ಚೆಯಾಗಿ ಕಾಯ್ದೆ ರೂಪುಗೊಂಡು ಶಾಸನವಾದರೆ ಮಾತ್ರ ಇದು ಸಾಧ್ಯ. ಮಂಗಗಳ ಉದ್ಯಾನವನ ತೆರೆದರೂ ಪ್ರಯೋಜನ ದೊರಕಬಹುದು.

 ಸಂತತಿ ಹೆಚ್ಚಿವೆ
ವರ್ಷಗಳು ಉರುಳಿದಂತೆ ಮಂಗಗಳ ಉಪಟಳ ಹೆಚ್ಚುತ್ತಲೇ ಇದೆ. ಅವುಗಳ ಸಂತತಿ ಹೆಚ್ಚಿರುವುದೇ ಇದಕ್ಕೆ ಕಾರಣ. ಅವುಗಳಿಂದ ಬೆಳೆ ನಾಶವಾಗುತ್ತಿದೆ. ಯಾವ ಬೆಳೆಯನ್ನು ಉಳಿಸುತಿಲ್ಲ. ಪರಿಹಾರ ಕೂಡ ಇಲ್ಲದ ಕಾರಣ ಕ್ರಷಿಕ ಫಸಲು ಬೆಳೆಯುದನ್ನೆ ನಿಲ್ಲಿಸುವಷ್ಟು ಬೇಸರ ತರಿಸಿದೆ.
 - ಜಯಪ್ರಕಾಶ್‌ ಕೂಜುಗೋಡು, ಸಾವಯವ ಕೃಷಿಕ, ಐನಕಿದು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next