ಹೊನ್ನಾವರ: ತಾಲೂಕಿನಲ್ಲಿ ವರ್ಷಕ್ಕೆ ಸುಮಾರು ಸಾವಿರ ಕೋಟಿ ರೂ. ಆದಾಯ ತರುವ ತೆಂಗಿನ ಕಾಯಿ ತಿಂದು ಹಾಕುತ್ತಿರುವ ಮಂಗಗಳು ಉಳಿಯಬೇಕೋ ಅಥವಾ ಇವುಗಳನ್ನು ಕಷ್ಟಪಟ್ಟು ಬೆಳೆಸಿದ ರೈತ ಉಳಿಯಬೇಕೋ. ಸರ್ಕಾರ ಈ ಕುರಿತು ತೀರ್ಮಾನಕ್ಕೆ ಬರಬೇಕಿದೆ. ತೆಂಗು ಬೆಳೆಗಾರ ಉಳಿಯಬೇಕಾದರೆ ಮಂಗಗಳ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಸರ್ಕಾರಕ್ಕೆ ಅತಿ ಪ್ರಾಣಿದಯೆ ಇದ್ದರೆ ತೋಟಿಗರಿಗೆ ಸಾಯಲು ಪರವಾನಗಿ ಕೊಡಬೇಕು. ತಾಲೂಕಿನಲ್ಲಿ 2117.89 ಹೆಕ್ಟೇರ್ ಅಂದರೆ 5,000 ಎಕರೆಯಷ್ಟು ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ.
ಸಹ್ಯಾದ್ರಿ ಬೆಟ್ಟದ ತುದಿಯಿಂದ ಕಡಲತೀರದವರೆಗೆ ಡ್ರೋಣ್‌ನಲ್ಲಿ ನೋಡಿದರೆ ತೆಂಗಿನಮರ ಬಿಟ್ಟು ಬೇರೇನೂ ಕಾಣುವುದಿಲ್ಲ. ಕರಾವಳಿ ಟೋಲ್ ಎಂದು ಪ್ರಸಿದ್ಧವಾದ ರೋಗರುಜನಿಗಳಿಲ್ಲದ ದೀರ್ಘಕಾಲ ಫಲಕೊಡುವ ಒಂದು ತೆಂಗಿನ ಮರ ಬೆಳೆಸಲು ಕನಿಷ್ಠ 10ವರ್ಷ ಶ್ರಮಪಡಬೇಕು. 1ಮರಕ್ಕೆ ಒಂದು ಕೊಯ್ಲಿಗೆ 200-250 ಕಾಯಿ ಸಿಗುತ್ತದೆ. ವರ್ಷಕ್ಕೆ 6-8 ಕೊಯ್ಲು ಮಾಡಲಾಗುತ್ತದೆ. ಅಂದರೆ ಒಂದು ವರ್ಷಕ್ಕೆ 1600 ಕೋಟಿ ಬೆಲೆಯ ತೆಂಗು ಬೆಳೆಯುತ್ತದೆ. 1000 ಕೋಟಿ ರೂ. ತೆಂಗು ಮಂಗನ ಪಾಲಾಗುತ್ತದೆ. ಇದನ್ನು ತಪ್ಪಿಸಲೇಬೇಕಾದ ಅನಿವಾರ್ಯಗೆ ಉಂಟಾಗಿದೆ. ಇಲ್ಲವಾದರೆ ರೈತರೇ ಹೋರಾಟಕ್ಕಿಳಿಯುವ ಸ್ಥಿತಿ ಇದೆ.
ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಬಂದೂಕು ತೋರಿಸಿ ಮಂಗನನ್ನು ಓಡಿಸಿದರು, ಕೆಲವರು ಮಂಗನನ್ನು ಹೊಡೆದುರುಳಿಸಿದರು, ಇನ್ನೂ ಕೆಲವರು ದುಡ್ಡು ಕೊಟ್ಟು ಮಂಗವನ್ನು ಹಿಡಿಸಿ ಬೇರೆಡೆ ಬಿಟ್ಟು ಬಂದರು. ಕೆಲವರು ಬಾಳೆಹಣ್ಣಿನಲ್ಲಿ ವಿಷಹಾಕಿದರು. ಏನೇ ಆದರೂ ಮಂಗನಕಾಟ ಕಡಿಮೆಯಾಗಿಲ್ಲ. ಬೆಳಗ್ಗೆ ಬೆಳಗ್ಗೆ ತೋಟಕ್ಕೆ ನುಗ್ಗುವ ಮಂಗಗಳು ಎಳೆನೀರನ್ನು ಖಾಲಿ ಮಾಡಿಯೇ ಹೋಗುತ್ತವೆ. ಯಾವ ಬೆದರಿಕೆಗೂ ಜಗ್ಗುವುದಿಲ್ಲ. ಉತ್ತರದ ರಾಜ್ಯಗಳಲ್ಲಿ ಮಂಗಗಳ ಕಾಟತಡೆಯಲಾರದೆ ಅವುಗಳನ್ನು ತಡೆಯಲು ಕುಟುಂಬದ ಯೋಜನೆಯ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇದರಿಂದ ಮಂಗಗಳು ವಿಕೃತ ಮನಸ್ಸಿನಿಂದ ಮನುಷ್ಯನಮೇಲೆ ಎರಗತೊಡಗಿದವು. ಮಂಗಗಳ ಪಾರ್ಕ್ ರಚಿಸಲಾಗಿದ್ದು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಶರಾವತಿ ಹಿನ್ನೀರಿನಲ್ಲಿ ಮಂಗಗಳ ಪಾರ್ಕ್ ಮಾಡುವುದಾಗಿ ಹೇಳಿದ್ದರು. ಸರ್ಕಾರದ ಆದೇಶವೂ ಆಗಿದೆ. ನಿಜವಾಗಿ ಉತ್ತರ ಕನ್ನಡದ ಕರಾವಳಿಗೆ ಮಂಗಗಳ ಪಾರ್ಕಿನ ಅವಶ್ಯಕತೆಯಿದೆ. ತೆಂಗು ಹೆಚ್ಚು ಬೆಳೆಯುವ ಜಿಲ್ಲೆಯ ಇತರ ತಾಲೂಕುಗಳಲ್ಲಿಯೂ ಇದೇ ಅವಸ್ಥೆ ಇದೆ. ಮಂಗಗಳ ಕಾಟದಿಂದ ಆಗುವ ಅಗಾಧ ಹಾನಿಯನ್ನು ಲೆಕ್ಕಹಾಕಿದರೆ ಪಾರ್ಕ್‌ಗೆ ತಗಲುವ ವೆಚ್ಚ ಏನೂ ಅಲ್ಲ. ಸರ್ಕಾರ ಮನಸ್ಸು ಮಾಡದಿದ್ದರೆ ಆಹಾರವಾಗಬೇಕಾದ ತೆಂಗು ಪೋಲಾಗುತ್ತದೆ.
ವರ್ಷಕ್ಕೆ 7 ತೆಂಗಿನ ಕೊಯ್ಲು ಮಾಡುವ ಪ್ರತಿ ಕೊಯ್ಲಿಗೆ 10 ಸಾವಿರ ತೆಂಗಿನ ಕಾಯಿ ಪಡೆಯುವ ಬೋಳಗೆರೆಯ ಜಿ.ಜಿ. ಭಟ್ ಅವರಿಗೆ ಈಗ ಕೊಯ್ಲಿಗೆ ಸಾವಿರ ಕಾಯಿಯೂ ಬರುವುದಿಲ್ಲ. ಪೂರಾ ಮಂಗನ ಪಾಲಾಗುತ್ತಿದೆ. ಮಂಗನನ್ನು ಹಿಡಿಸಿ, ಓಡಿಸಿ ಅದಕ್ಕಾಗಿಯೇ ಆಳನ್ನು ನೇಮಿಸಿಕೊಂಡು ಹಗಲಿಡಿ ಕಾದು ಕೂತಿದ್ದರೂ ಜನ ಬಂದೊಡನೆ ತೆಂಗಿನ ಸುಳಿಯ ಮಧ್ಯೆ ಕೂತು ಯಾರಿಗೂ ಕಾಣದಂತೆ ಸಿಯಾಳ ತಿನ್ನುವ ಮಂಗಗಳು ಮನುಷ್ಯನಿಗಿಂತ ಬುದ್ಧಿವಂತವಾಗಿವೆ. ಯಾವ ತೋಟದಲ್ಲಿ ತೆಂಗು ತಿನ್ನಲು ಹದವಾಗಿ ಬೆಳೆದಿದೆ ಎಂದು ಮಾಹಿತಿ ಪಡೆದವರಂತೆ ಬರುತ್ತವೆ. ಅವುಗಳ ದಾಳಿಗೆ ನಾನು ಸೋತು ಹೋಗಿದ್ದೇನೆ, ಕಷ್ಟಪಟ್ಟು ನೀರು, ಗೊಬ್ಬರ ಹಾಕಿ ಬೆಳೆದ ಬೆಳೆ ಯಾರಿಗೂ ಇಲ್ಲದಂತೆ ಹೋಗುತ್ತಿರುವುದು ನೋಡಲಾಗುತ್ತಿಲ್ಲ. ಸರ್ಕಾರ ಏನಾದರೂ ಸಹಾಯಕ್ಕೆ ಬರದಿದ್ದರೆ ತೆಂಗಿನ ತೋಟದ ಆಸೆ ಬಿಡಬೇಕಾಗುತ್ತದೆ.
-ಜಿ.ಜಿ. ಭಟ್, ತೆಂಗು ಬೆಳೆಗಾರ