ತುಮಕೂರು: ಉತ್ಕೃಷ್ಟವಾದ ತೆಂಗು ಬೆಳೆಯುವ ತುಮಕೂರು ಜಿಲ್ಲೆ ತೆಂಗು ಬೆಳೆಗಾರರ ಬದುಕು ಇಂದು ಬೆಲೆ ಕುಸಿತ, ರೋಗ ಭಾದೆ, ಮಳೆಯ ಕೊರತೆ, ಅಂತರ್ಜಲ ಕುಸಿತದಿಂದ ಮೂರಾಬಟ್ಟೆಯಾಗಿದೆ. ಮಾಡಿದ ಸಾಲವನ್ನೂ ತೀರಿಸಲಾಗದ ಸಂಕಷ್ಟ ಸ್ಥಿತಿಯಲ್ಲಿ ರೈತರಿದ್ದು ರೈತರ ನೆರವಿಗೆ ಬರಬೇಕಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಅನ್ನದಾತರನ್ನು ನಿರ್ಲಕ್ಷಿಸಿವೆ.
ಈ ನಡುವೆ ತೆಂಗಿಗೆ ಕಾಣಸಿಕೊಂಡ ರೋಗಬಾಧೆಯಿಂದ ತೆಂಗು ಬೆಳೆ ಗಾರರು ಮತ್ತಷ್ಟು ಕಷ್ಟ ಅನುಭವಿಸುವಂತಾಗಿದೆ.
ಜಿಲ್ಲೆಯ ವಾಣಿಜ್ಯ ಬೆಳೆ ತೆಂಗಿಗೆ ಕಳೆದ ಹಲವು ವರ್ಷಗಳಿಂದ ಅನೇಕ ರೋಗರುಜಿನಗಳು ಹರಡಿ ತೆಂಗು ಬೆಳೆ ಕುಸಿಯುತ್ತಾ ಹೋಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದು, ಸಾಲಸೋಲ ಮಾಡಿ ತೆಂಗಿನ ಮರ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ರೈತರು ತಲುಪಿದ್ದಾರೆ. ಜಿಲ್ಲೆಯಲ್ಲಿ 1,47,733 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇದರಲ್ಲಿ ಜಿಲ್ಲೆಯ ಚಿ.ನಾ. ಹಳ್ಳಿ ತಾಲೂಕಿನಲ್ಲಿ 30,361ಹೆಕ್ಟೇರ್, ತಿಪಟೂರಿನಲ್ಲಿ 34,055 ಹೆಕ್ಟೇರ್, ತುರುವೇಕೆರೆಯಲ್ಲಿ 24,893 ಹೆಕ್ಟೇರ್, ಗುಬ್ಬಿ ತಾಲೂಕಿನಲ್ಲಿ 29,126 ಹೆಕ್ಟೇರ್, ತುಮಕೂರಿನಲ್ಲಿ 11,597ಹೆಕ್ಟೇರ್, ಶಿರಾದಲ್ಲಿ 8,044 ಹೆಕ್ಟೇರ್, ಕುಣಿಗಲ್ 6,787 ಹೆಕ್ಟೇರ್, ಕೊರಟಗೆರೆ 1,396, ಮಧುಗಿರಿ 887, ಪಾವಗಡ 587 ಹೆಕ್ಟೇರ್ ಪ್ರದೇಶಗಳಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ 5-6 ವರ್ಷಗಳಿಂದ ಸಮರ್ಪಕ ವಾಗಿ ಮಳೆಯಿಲ್ಲದೆ ಬರಗಾಲದ ದವಡೆಯಲ್ಲಿ ಸಿಲುಕಿದ ರೈತರಿಗೆ ಕಳೆದ 2022-23ರಲ್ಲಿ ಸುರಿದ ಮಳೆ ಸ್ವಲ್ಪ ನೆಮ್ಮದಿ ತಂದಿತ್ತು.
ಆದರೂ, ಕೆಲವು ಕಡೆಗಳಲ್ಲಿ ಸರಿಯಾಗಿ ಮಳೆ ಬಾರದೇ ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ಶ್ರಮಪಡುತ್ತಿದ್ದಾರೆ. ಇಲ್ಲಿಯವರೆಗೆ ನುಸಿ ಪೀಡೆರೋಗ ತೆಂಗು ಇಳುವರಿ ಕುಸಿತಕ್ಕೆ ಕಾರಣವಾಗಿತ್ತು. ಈಗ ಕಪ್ಪು ತಲೆ ಹುಳುರೋಗಬಾಧೆ ಈಗ ಕಾಣಸಿ ಕೊಂಡು ಸಾವಿರಾರು ಹೆಕ್ಟೇರ್ ತೆಂಗು ಒಣಗುತ್ತಿದೆ. ಜತೆಗೆ ರಸ ಒಡೆಯುವ ರೋಗ, ಕೆಂಪು ತಲೆ ಹುಳು ರೋಗದಿಂದ ತೆಂಗು ಬೆಳೆ ಉಳಿಸಿಕೊಳ್ಳಬೇಕು ಎಂದು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಅಲ್ಲದೆ ಅಣವೆ ರೋಗ ಕಾಣಸಿಕೊಂಡಿದೆ ಇದರಿಂದ ತೆಂಗಿನ ಮರಗಳಿಗೆ ತೊಂದರೆ ಉಂಟಾಗುತ್ತಿದೆ. ಇದೆಲ್ಲದರ ನಡುವೆ ಕೊಬ್ಬರಿ ಬೆಲೆ ಕುಸಿತದಿಂದಾಗಿ ಸಾವಿರಾರು ರೈತರು ಕೊಬ್ಬರಿಗೆ ಬೆಲೆ ನೀಡಿ ತೆಂಗು ಬೆಳೆ ಉಳಿಸಿ ಎಂದು ಹೋರಾಟಕ್ಕೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿಯೂ ಸಕಾಲದಲ್ಲಿ ಮಳೆ ಎಲ್ಲೆಡೆ ಬಂದಿಲ್ಲ ತೆಂಗು ಬೆಳೆಯುವ ರೈತರು ತೋಟಗಾರಿಕಾ ಬೆಳೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 45 ಸಾವಿರಕ್ಕೂ ಅಧಿಕ ತೋಟಗಾರಿಕಾ ಬೆಳೆ ಒಣಗಿದೆ.
ಹಲವು ವರ್ಷಗಳಿಂದ ಮಳೆಯಿಲ್ಲದೆ ಸಂಕಷ್ಟದಲ್ಲೇ ಇರುವ ತೆಂಗು ಬೆಳೆಗಾರರನ್ನು ಉಳಿಸಲು ಸರ್ಕಾರಗಳು ರೈತರ ನೆರವಿಗೆ ಬರಬೇಕು. ತೆಂಗು ಬೆಳೆಯಿಂದ ನಷ್ಟವಾಗಿರುವ ರೈತರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಅವರನ್ನು ಮೇಲಕ್ಕೆತ್ತಬೇಕು. ತೆಂಗಿಗೆ ಬೆಂಬಲ ಬೆಳೆ ನೀಡಬೇಕೆಂದು ರೈತರು ಹೋರಾಟ ಮಾಡುತ್ತಿದ್ದರೂ ಕೇಂದ್ರ-ರಾಜ್ಯ ಸರ್ಕಾರಗಳು ಈವರೆಗೆ ಸ್ಪಂದಿಸದಿರುವುದು ವಿಪರ್ಯಾಸ.
ತುಮಕೂರು ಜಿಲ್ಲೆಯ ವಿವಿಧೆಡೆ ತೆಂಗಿನ ಕಾಂಡದಲ್ಲಿ ರಸ ಸೋರುವ ಬಾಧೆ ಮತ್ತು ಅಣಬೆ ರೋಗ ಕಾಣಸಿ ಕೊಂಡಿದೆ. ಇದಕ್ಕೆ ತಜ್ಞರು ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದಾರೆ. ಔಷಧೋಪಚಾರ ಮಾಡುವ ಬಗ್ಗೆ ಅರಿವು ಮೂಡಿಸಲಾಗು ತ್ತಿದೆ. ತೆಂಗು ಬೆಳೆಗಾರ ರೈತರು ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ. ತೋಟ ಗಾರಿಕೆ ಇಲಾಖೆಯಿಂದ ಬೆಳೆಗಾರರಿಗೆ ಎಲ್ಲಾ ರೀತಿ ಸಲಹೆ ನೀಡಲಾಗುವುದು.
● ಡಾ.ಬಿ.ರಘು, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು
ತೆಂಗು ಬೆಳೆಗಾರರು ಇಂದು ಸಂಕಷ್ಟ ಅನುಭವಿಸುವ ಸ್ಥಿತಿ ಬಂದಿದೆ. ಒಂದು ಕಡೆ ಕೊಬ್ಬರಿ ಬೆಲೆ ಕುಸಿತ ಇನ್ನೊಂದು ಕಡೆ ನಾವು ನಿರೀಕ್ಷಿಸುವಷ್ಟು ಮಳೆಯಿಲ್ಲ. ಜೊತೆಗೆ ತೆಂಗಿನ ಮರಗಳಿಗೆ ರಸಸೋರುವ ರೋಗ, ಅಣಬೆ ರೋಗ ಕಾಣಸಿಕೊಂಡಿದೆ ಇದರಿಂದ ಸಂಕಷ್ಟ ಎದುರಾಗಿದೆ.
● ಹಾಗಲವಾಡಿ ಮಹೇಶ್, ತೆಂಗು ಬೆಳೆಗಾರ
– ಚಿ.ನಿ. ಪುರುಷೋತ್ತಮ್