Advertisement

ಕರಾವಳಿ ಜಿಲ್ಲೆಗಳಲ್ಲಿ ಕೊಕ್ಕೊ ಬೆಳೆ ಪ್ರಮಾಣ ಕುಸಿತ: ಬೇಡಿಕೆ ಹೆಚ್ಚಿದ್ದರೂ ದರ ಕುಸಿತದಿಂದ ರೈತರಲ್ಲಿ ಆಸಕ್ತಿ ಕುಂಠಿತ

12:52 AM Dec 20, 2022 | Team Udayavani |

ಸುಳ್ಯ : ಕೆಲವು ವರ್ಷಗಳ ಹಿಂದಿನ ವರೆಗೆ ಕರಾವಳಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದ ಕೊಕ್ಕೊ ಪ್ರಸ್ತುತ ಕುಸಿತ ಕಂಡಿದೆ. ರೋಗಬಾಧೆ, ಬೆಲೆ ಕುಸಿತ, ಅಧಿಕ ನಿರ್ವಹಣೆ ವೆಚ್ಚ ಮುಂತಾದವು ರೈತರು ಈ ವಾಣಿಜ್ಯ ಬೆಳೆಯಿಂದ ವಿಮುಖರಾಗಲು ಪ್ರಧಾನ ಕಾರಣ.

Advertisement

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಅಡಿಕೆ, ತೆಂಗಿನ ಜತೆಗೆ ಮಿಶ್ರ ಬೆಳೆಯಾಗಿ ಕೊಕ್ಕೊ ಬೆಳೆಯಲಾಗುತ್ತದೆ. ಬೆಲೆಯೂ ಉತ್ತಮವಾಗಿದ್ದ ಕಾರಣ ರೈತರಲ್ಲಿ ಆಸಕ್ತಿಯೂ ಇತ್ತು. ಆದರೆ ಬರಬರುತ್ತ ಮಳೆಗಾಲದಲ್ಲಿ ಕೊಕ್ಕೊ ಬೆಳೆಗೆ ರೋಗಬಾಧೆ, ಬೆಲೆ ಕುಸಿತ, ಅಧಿಕ ನಿರ್ವಹಣ ವೆಚ್ಚದ ಕಾರಣ ರೈತರು ಈ ಬೆಳೆಯಿಂದ ದೂರವಾಗುತ್ತಿದ್ದಾರೆ.

ಶೇ. 60 ಕುಸಿತ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಸ್ತುತ ಕೊಕ್ಕೊ ಬೆಳೆ ಶೇ. 60ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕುಸಿತವಾಗಿದೆ. ಕೊಕ್ಕೊದ ಸೂಕ್ತ ರೀತಿಯ ನಿರ್ವಹಣೆಗೆ ವೆಚ್ಚ ಅಧಿಕವಾಗಿರುವುದು ರೈತರಿಗೆ ತ್ರಾಸದಾಯಕವಾಗುತ್ತಿದೆ. ಒಂದೊಮ್ಮೆ ಕೆ.ಜಿ.ಗೆ 40 ರೂ. ವರೆಗೆ ಕುಸಿದಿದ್ದ ಬೆಲೆ ಬಳಿಕ 70 ರೂ. ವರೆಗೆ ಏರಿಕೆ ಕಂಡಿತ್ತು. ಪ್ರಸ್ತುತ ಕೆ.ಜಿ.ಗೆ 55 ರೂ. ಇದೆ. ಧಾರಣೆ ಕೆ.ಜಿ.ಗೆ 80 ರೂ. ವರೆಗೆ ಹೆಚ್ಚಿದಲ್ಲಿ ಮಾತ್ರ ಈ ಬೆಳೆ ಲಾಭದಾಯಕ ಎನ್ನುವುದು ರೈತರ ಮಾತು. ಕೊಕ್ಕೊ ಗಿಡಗಳು ಮಳೆಗಾಲದಲ್ಲಿ ಅಧಿಕ ಇಳುವರಿ ನೀಡುತ್ತವೆ. ಈ ವೇಳೆ ರೋಗಬಾಧೆಯೂ ಕಂಡುಬರುತ್ತದೆ. ಇದಕ್ಕೆ ಔಷಧ ಸಿಂಪಡನೆ ಮಾಡಬೇಕು. ಈಗಿರುವ ಧಾರಣೆಯಲ್ಲಿ ಇದು ಕಷ್ಟ. ಜತೆಗೆ ಅಡಿಕೆಗೆ ಹೆಚ್ಚು ಬೆಲೆ ಇರುವುದರಿಂದಲೂ ರೈತರು ಕೊಕ್ಕೊ ಬೆಳೆಯತ್ತ ಆಸಕ್ತಿ ತೋರುತ್ತಿಲ್ಲ ಎಂಬ ಮಾತಿದೆ.

ಬೇಡಿಕೆ ಇದೆ
ಬೆಳೆ, ಧಾರಣೆ ಕುಸಿತವಾಗಿದ್ದರೂ ಕೊಕ್ಕೊಗೆ ಬೇಡಿಕೆ ಮಾತ್ರ ಹಾಗೆಯೇ ಇದೆ. ಕೊಕ್ಕೊ ಚಾಕಲೇಟು ಸಹಿತ ಹಲವು ವಿಧದ ಉತ್ಪನ್ನಗಳಿಗೆ ಮೂಲವಸ್ತು. ಹೀಗಾಗಿ ಬೇಡಿಕೆ ಇದ್ದೇ ಇದೆ. ಕೊಕ್ಕೊವನ್ನು ಪ್ರಧಾನವಾಗಿ ಕ್ಯಾಂಪ್ಕೋ ಜತೆಗೆ ಇತರ ಸಂಸ್ಥೆಯವರೂ ಖರೀದಿಸುತ್ತಿದ್ದು, ಅವರ ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಆಮದಿತ ಕೊಕ್ಕೊವನ್ನು ನೆಚ್ಚಿಕೊಳ್ಳಬೇಕಾಗಿದೆ.

ಪ್ರೋತ್ಸಾಹ
ಕೊಕ್ಕೊ ಬೆಳೆಗಾರರಿಗೆ ಕ್ಯಾಂಪ್ಕೋ ಸಂಸ್ಥೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಖರೀದಿ ಮಾತ್ರವಲ್ಲದೆ ಬೆಳೆಯ ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತದೆ. ಕೊಕ್ಕೊವನ್ನು ವ್ಯವಸ್ಥಿತವಾಗಿ ಬೆಳೆದರೆ ಲಾಭದಾಯಕವಾಗುತ್ತದೆ ಎಂಬುದು ಸಂಸ್ಥೆಯವರ ಮಾತು. ಪ್ರಸ್ತುತ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಕೊಕ್ಕೊ ಬೆಳೆ ಇಳಿಮುಖವಾದ ಕಾರಣ ಉತ್ತರ ಕರ್ನಾಟಕ ಭಾಗದ ರೈತರಿಗೆ ಕ್ಯಾಂಪ್ಕೋ ಪ್ರೋತ್ಸಾಹ ನೀಡುತ್ತಿದೆ. ಕೊಕ್ಕೊ ಬೆಳೆಗೆ ಸ್ಥಿರ ಧಾರಣೆ ಒದಗಿಸಿ ಇಲ್ಲಿನ ಬೆಳೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಪೂರಕ ಯೋಜನೆ, ಕ್ರಮಗಳನ್ನು ಕೈಗೊಳ್ಳಲಿ ಎಂಬುದು ಬೆಳೆಗಾರರ ಒತ್ತಾಯ.

Advertisement

ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಕೊಕ್ಕೊ ಬೆಳೆ ಕುಸಿತ ಕಂಡಿದೆ. ಕ್ಯಾಂಪ್ಕೊ ವತಿಯಿಂದ ಕೊಕ್ಕೊ ಬೆಳೆಗಾರರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ರೈತರನ್ನು ಕೂಡ ಕೊಕ್ಕೊ ಬೆಳೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬೇಡಿಕೆ ಇದ್ದರೂ ಕೊಕ್ಕೊ ಪೊರೈಕೆ ಕಡಿಮೆ ಆಗಿದೆ.
– ಕಿಶೋರ್‌ ಕುಮಾರ್‌ ಕೊಡ್ಗಿ ಅಧ್ಯಕ್ಷರು, ಕ್ಯಾಂಪ್ಕೊ

ಕೊಕ್ಕೊ ಲಾಭದಾಯಕ ಬೆಳೆ. ಆದರೆ ಇಂದು ಉತ್ತಮ ಬೆಲೆ ಇಲ್ಲದೆ, ನಿರ್ವಹಣ ವೆಚ್ಚ ಅಧಿಕ ಆಗಿರುವುದರಿಂದ ಹೆಚ್ಚಿನ ಕಡೆ ಕೊಕ್ಕೊ ಬೆಳೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಮುಂದೊಂದು ದಿನ ಕೊಕ್ಕೊ ಬೆಳೆಗೆ ಉತ್ತಮ ಬೆಲೆ ಬರುವ ನಿರೀಕ್ಷೆ ಇದೆ.
– ವಿನೋದ್‌ ಲಸ್ರಾದೋ ಹಳೆಗೇಟು, ಸುಳ್ಯ, ಕೃಷಿಕರು

– ದಯಾನಂದ ಕಲ್ನಾರ್

Advertisement

Udayavani is now on Telegram. Click here to join our channel and stay updated with the latest news.

Next