ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ಆಹಾರದಲ್ಲಿ ಏನೇನೋ ಅಪಾಯಕಾರಿ ವಸ್ತುಗಳು ಪತ್ತೆಯಾಗುವ ಬಗ್ಗೆ ಸುದ್ದಿಯಾಗುತ್ತಿದೆ. ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು, ಚಿಪ್ಸ್ ಪ್ಯಾಕೇಟ್ ನಲ್ಲಿ ಕಪ್ಪೆ ಹೀಗೆ ಹಲವು ರೀತಿಯ ಸುದ್ದಿಗಳು ಹೊರಬರುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಊಟದಲ್ಲಿ ಜಿರಳೆ ಪತ್ತೆ ಸುದ್ದಿ.
ಹೌದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರೊಬ್ಬರು ಈ ಬಗ್ಗೆ ಟ್ವೀಟ್ ಮಾಡಿ ಸಂಬಂಧಪಟ್ಟ ಸಂಸ್ಥೆಯ ಗಮನಕ್ಕೆ ತಂದಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಭೋಪಾಲ್‌ನಿಂದ ಆಗ್ರಾಕ್ಕೆ ಪ್ರಯಾಣಿಸುವಾಗ ಬಡಿಸಿದ ಆಹಾರದಲ್ಲಿ ‘ಜಿರಳೆ’ ಕಂಡುಬಂದ ದಂಪತಿಗಳಿಗೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಅಧಿಕೃತ ಎಕ್ಸ್ ಖಾತೆಯ ಮೂಲಕ ಕ್ಷಮೆಯಾಚಿಸಿದೆ.
ಜೂನ್ 18ರಿಂದ ನನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಭೋಪಾಲ್‌ನಿಂದ ಆಗ್ರಾಕ್ಕೆ ಪ್ರಯಾಣಿಸುವಾಗ ಅವರಿಗೆ ನೀಡಿದ ಊಟದಲ್ಲಿ ಜಿರಳೆ ಕಂಡು ಬಂದಿತ್ತು. ಈ ವೆಂಡರ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂದು ವಿದಿತ್ ವರ್ಷ್ಣೆ ಎಂಬವರು ಟ್ವೀಟ್ ಮಾಡಿದ್ದರು.
ವಿದಿತ್ ಅವರು ಪೋಸ್ಟ್ ಮಾಡಿದ ಎರಡು ದಿನಗಳ ಬಳಿ ಐಆರ್ ಸಿಟಿಸಿ ಪ್ರತಿಕ್ರಿಯೆ ನೀಡಿ, ಕ್ಷಮೆಯಾಚಿಸಿದೆ. ಸಂಬಂಧಪಟ್ಟ ಸೇವಾ ಪೂರೈಕೆದಾರರ ಮೇಲೆ “ಸೂಕ್ತವಾದ ದಂಡವನ್ನು” ವಿಧಿಸಲಾಗಿದೆ ಎಂದು ಹೇಳಿದೆ.
ಪ್ರಯಾಣಿಕರಿಗೆ ಬೆಂಬಲ ನೀಡುವ ಅಧಿಕೃತ ಖಾತೆಯಾದ ರೈಲ್ವೇ ಸೇವಾ ಕೂಡ ವಿದಿತ್ ದೂರಿಗೆ ಪ್ರತಿಕ್ರಿಯಿಸಿದೆ.