Advertisement

ಮೇ 13ಕ್ಕೆ ಕೋಚಿಮಲ್ ನಿರ್ದೇಶಕ ಚುನಾವಣೆ

01:27 PM Apr 23, 2019 | Team Udayavani |

ಕೋಲಾರ: ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಸ್ಥೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಮೇ 13ರಂದು ಚುನಾವಣೆ ನಿಗದಿಯಾಗಿದ್ದು, ಹಾಲಿ ಇರುವ 14 ನಿರ್ದೇಶಕರ ಪೈಕಿ 10ಕ್ಕೂ ಹೆಚ್ಚು ಮಂದಿ ಮತ್ತೆ ಕಣಕ್ಕಿಳಿಯಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.

Advertisement

ಹೀಗಿರುವ ಶಾಸಕರೂ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರ ನೇತೃತ್ವದ ಆಡಳಿತ ಮಂಡಳಿಯ ಅಧಿಕಾರಾವಧಿ ಮೇ 24ಕ್ಕೆ ಕೊನೆಗೊಳ್ಳಲಿದೆ. ಇದಕ್ಕೂ ಮೊದಲೇ ನೂತನ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬರಬೇಕಾಗಿರುವುದರಿಂದ ಮೇ 13ಕ್ಕೆ ಚುನಾವಣೆ ಘೋಷಿಸಲಾಗಿದೆ.

ಏ.27 ಅಸೂಚನೆ, ಮೇ 13ಕ್ಕೆ ಮತದಾನ: ಕೋಚಿಮುಲ್ ಆಡಳಿತ ಮಂಡಳಿ ಚುನಾವಣೆಗಾಗಿ ಏ.27ಕ್ಕೆ ಅಸೂಚನೆ ಹೊರಡಿಸುತ್ತಿದ್ದು, 28ರಿಂದ ನಾಮಪತ್ರ ಸ್ವೀಕಾರಕ್ಕೆ ಚಾಲನೆ ಸಿಗಲಿದೆ. ಅವಿರೋಧ ಆಯ್ಕೆಗೆ ವೇದಿಕೆ ಸಿದ್ಧವಾಗದಿದ್ದಲ್ಲಿ ಮೇ 13ರಂದು ಮತದಾನ ನಡೆಸುವುದು ಅನಿವಾರ್ಯವಾಗಲಿದೆ.

ಒಕ್ಕೂಟದ ವ್ಯಾಪ್ತಿಗೆ ಎರಡು ಜಿಲ್ಲೆಯ 11 ತಾಲೂಕುಗಳ 2919 ಗ್ರಾಮಗಳು ಒಳಗೊಂಡಿದ್ದು, 1856 ಹಾಲು ಉತ್ಪಾದಕರ ಸಂಘಗಳು ಕೋಚಿಮುಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 197 ಮಹಿಳಾ ಸಂಘಗಳಿವೆ. ಹಾಲಿ ಸಂಘಗಳ ಪೈಕಿ 500 ಸಂಘಗಳ ಕಾರ್ಯವೈಖರಿ ವಿರುದ್ಧ ದೂರುಗಳಿರು ವುದರಿಂದ ಈ ಸಂಘಗಳನ್ನು ಅಮಾನತ್ತಿನಲ್ಲಿಟ್ಟಿರು ವುದರಿಂದ ಸದರಿ ಸಂಘಗಳು ಮತದಾನ ಹಕ್ಕಿಗೆ ಅವಕಾಶ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಿವೆ.

ಅರ್ಜಿದಾರರ ಪರ ತೀರ್ಪು ಬಂದಲ್ಲಿ 1856 ಸಂಘಗಳ 2,88,313 ಷೇರುದಾರರು ಮತದಾನದಲ್ಲಿ ಭಾಗವಹಿಸಲು ಅವಕಾಶವಾಗಬಹುದು, ಅರ್ಜಿ ತಿರಸ್ಕಾರಗೊಂಡರೆ 1400 ಸಂಘಗಳಿಗೆ ಮಾತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಕ್ಕು ಸಿಗಬಹುದು. ಅಂತಿಮ ಮತದಾರರ ಪಟ್ಟಿಯನ್ನು ಬುಧವಾರ ಪ್ರಕಟಿಸುವ ಸಾಧ್ಯತೆಗಳಿವೆ.

Advertisement

ಮೆಗಾಡೇರಿಗೆ ಶಂಕುಸ್ಥಾಪನೆ: ಹಾಲು ಒಕ್ಕೂಟಕ್ಕೆ ಈಗ ಪ್ರತಿದಿನ 9.35 ಲಕ್ಷ ಲೀಟರ್‌ ಹಾಲು ಪೂರೈಕೆ ಆಗುತ್ತಿದೆ. 1991ರಲ್ಲಿ ಅಳವಡಿಸಲಾಗಿರುವ ಯಂತ್ರೋಕರಣಗಳು ಪ್ರಸ್ತುತ ತಂತ್ರಜ್ಞಾನಕ್ಕೆ ಹೊಲಿಕೆ ಮಾಡಿದಲ್ಲಿ ಅತ್ಯಂತ ಕಡಿಮೆ ಸಾಮರ್ಥ್ಯವಿರುವ ಹಿನ್ನೆಲೆಯಲ್ಲಿ ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೇರಿ ನಿರ್ಮಿಸಲಾಗಿದೆ. ಮುಂದೊಂದು ದಿನ ಕೋಚಿಮುಲ್ ವಿಭಜನೆ ಆಗಬಹುದೆಂಬ ಮುಂದಾಲೋಚನೆಯಿಂದಾಗಿ ಕೋಲಾರದಲ್ಲೂ 160 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿದೆ.

ರೈತರ ಹಿತದೃಷ್ಟಿಯಿಂದ ಪಶು ಆಹಾರ ಘಟಕ ಅವಶ್ಯಕವಾಗಿದ್ದು, ಸರ್ಕಾರದಿಂದ ಆರ್ಥಿಕ ನೆರೆವು ಪಡೆದು ಘಟಕ ನಿರ್ಮಿಸಲು ಪ್ರಯತ್ನಗಳನ್ನು ಹಾಲಿ ಆಡಳಿತ ಮಂಡಳಿ ನಡೆಸಿದೆ. ಮೆಗಾಡೇರಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಂದ ಮಾ.5ರಂದು ಶಂಕುಸ್ಥಾಪನೆ ಮಾಡಿಸಿರುವ ಒಕ್ಕೂಟದ ಅಧ್ಯಕ್ಷರೂ ಆಗಿರುವ ಶಾಸಕ ಕೆ.ವೈ.ನಂಜೇಗೌಡ ಅವರು ಮತ್ತೂಮ್ಮೆ ಆಡಳಿತ ಮಂಡಳಿಗೆ ಆಯ್ಕೆಯಾಗುವ ಮೂಲಕ ಮೆಗಾ ಡೇರಿ ನಿರ್ಮಾಣದ ನೇತೃತ್ವ ವಹಿಸಕೊಳ್ಳಲು ಬಯಸಿದ್ದಾರೆ.

ಕೆ.ವೈ.ನಂಜೇಗೌಡ ಶಾಸಕರಾಗುವ ಮುಂಚೆಯೇ ಒಕ್ಕೂಟದ ನಿರ್ದೇಶಕರಾಗಿದ್ದರಲ್ಲದೆ, ಅಧ್ಯಕ್ಷರಾಗಲು ಯತ್ನಿಸಿದ್ದರಾದರೂ ಬ್ಯಾಟಪ್ಪಗೆ ಅವಕಾಶ ಸಿಕ್ಕಿದ್ದರಿಂದ ಅವಕಾಶಕ್ಕಾಗಿ ಕಾಯುತ್ತಿದ್ದರು. ಕಳೆದ ವರ್ಷ ಜು.16ರಂದು ಅಧ್ಯಕ್ಷರಾಗಿ ಆಯ್ಕೆಯಾಗಿ ಅಲ್ಪಾವಧಿಯಲ್ಲಿ ಮೆಗಾಡೇರಿ ಸ್ಥಾಪನೆಗೆ ಅಡಿಗಲ್ಲು ಹಾಕಿಸಿದ್ದಾರಲ್ಲದೆ, ಬೆಂಗಳೂರಿನ ಯಲಹಂಕ ಬಳಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕ ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯುವ ಸಲುವಾಗಿ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ನಿವೇಶನ ಮಂಜೂರು ಮಾಡಿಸಿದ್ದಾರೆ.ಈ ಯೋಜನೆ ತಮ್ಮ ಅವಧಿಯಲ್ಲೇ ಕಾರ್ಯರೂಪಕ್ಕೆ ಬರಬೇಕೆಂಬ ಮಹದಾಸೆಯಿಂದ ಮತ್ತೆ ಸ್ಪರ್ಧಿಸಲು ನಿಶ್ಚಯಿಸಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಮುಂದುವರಿಯುತ್ತಾ?

ಒಕ್ಕೂಟದ ಮಾಜಿ ಅಧ್ಯಕ್ಷರು, ಹಿರಿಯ ನಿರ್ದೇ ಶಕರಾದ ಗೌರಿಬಿದನೂರು ತಾಲೂಕಿನ ತೊಂಡೇ ಭಾವಿಯ ಜೆ.ಕಾಂತರಾಜು, ಚಿಕ್ಕಬಳ್ಳಾಪುರ ತಾಲೂ ಕಿನ ಕಣಜೇನಹಳ್ಳಿಯ ಕೆ.ವಿ.ನಾಗರಾಜು, ಬಂಗಾರ ಪೇಟೆ ತಾಲೂಕಿನ ದೊಡ್ಡಕಾರಿಯ ಜಯಸಿಂಹಕೃಷ್ಣಪ್ಪ, ಚಿಂತಾಮಣಿಯ ಊಲವಾಡಿ ಗ್ರಾಮದ ವೈ.ಬಿ. ಅಶ್ವತ್ಥನಾರಾಯಣ, ಕೋಲಾರ ತಾಲೂಕಿನ ಆರ್‌.ರಾಮಕೃಷ್ಣೇಗೌಡ, ಮುಳಬಾಗಿಲಿನ ರಾಜೇಂದ್ರ ಹಳ್ಳಿಯ ಆರ್‌.ಆರ್‌.ರಾಜೇಂದ್ರಗೌಡ ಸೇರಿ 10ಕ್ಕೂ ಹೆಚ್ಚು ನಿರ್ದೇಶಕರು ಮತ್ತೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಇಬ್ಬರು ಮಹಿಳಾ ಪ್ರತಿನಿಧಿಗಳು ಸೇರಿ ಒಟ್ಟು 14 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಚುನಾವಣೆ ಎದುರಿಸುವುದೇ ಅಥವಾ ಪ್ರತ್ಯೇಕವಾ ಗಿಯೇ ಎಂಬುದು ಇನ್ನು ನಿರ್ಧಾರವಾಗಿಲ್ಲ. ಕೆಎಂಎಫ್‌ನಲ್ಲಿ ತಮ್ಮ ಹಿಡಿತ ಸಾಧಿಸಲು ಯತ್ನಿಸಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೋಚಿಮುಲ್ನಲ್ಲಿ ತಮ್ಮ ಪರವಾದ ನಿರ್ದೇಶಕರು ಇರಲು ಬಯಸಿದ್ದು, ಹಾಲಿ ನಿರ್ದೇಶಕರಲ್ಲಿ ಯಾರಿಗೆ ಗಾಳ ಹಾಕುತ್ತಾರೋ ಕಾದು ನೋಡಬೇಕಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next