ಬೆಂಗಳೂರು: ಇತ್ತೀಚೆಗಷ್ಟೇ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ರಕ್ತಚಂದನ ಮಾರಾಟ ದಂಧೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪ್ರಕರಣದ ಕಿಂಗ್‌ಪಿನ್ ಅಬ್ದುಲ್ ರಶೀದ್ ಸೇರಿ 13 ಮಂದಿಯ ವಿರುದ್ಧ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು “ಕೋಕಾ ಕಾಯ್ದೆ’ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಮೇ 18ರಂದು ಪ್ರಮುಖ ಆರೋಪಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಅಬ್ದುಲ್ ರಶೀದ್ ಅಲಿಯಾಸ್ ಪುತ್ತು ಬಾಯರ್(48), ಬಂಟ್ವಾಳ ತಾಲೂಕಿನ ಎಂ.ಎಸ್.ಬಾಷಾ(40) ಷಪಿ (30) ಮುನ್ನಾ(25), ಇಬ್ರಾಹಿಂ(28), ಅನ್ನು ಅಲಿಯಾಸ್ ಮೊಹಮ್ಮದ್ ಅನ್ವರ್(23), ಕೇರಳದ ಕಾಸರಗೊಡಿನ ನೌಷಾದ್ (27), ಸಿದ್ಧಿಕ್ ಅಲಿಯಾಸ್ ಅಬುಬ್‌ಕರ್(40), ಬೆಂಗಳೂರಿನ ಎಚ್‌ಎಎಲ್ ನಿವಾಸಿಗಳಾದ ಜುಬೇರ್ ಖಾನ್(33), ಸಲೀಂ ಖಾನ್(50), ತಾಹೀರ್ ಖಾನ್ (25),ಮುಭಾರಕ್(26), ಆಲಿ ಖಾನ್ ಮೊಹಮ್ಮದ್(40)ಎಂಬವರನ್ನು ಬಂಧಿಸಲಾಗಿತ್ತು.
ಆರೋಪಿಗಳು ಕಳೆದ ಆರೇಳು ವರ್ಷಗಳಿಂದ ಸಂಘಟಿತ ರೀತಿಯಲ್ಲಿ ಕೂಟ ಕಟ್ಟಿಕೊಂಡು ಅಕ್ರಮ ದಂಧೆಯಲ್ಲಿ ತೊಡಗಿದ್ದು, ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿರುವ ರಕ್ತ ಚಂದನ ಮರಗಳನ್ನು ಕಡಿದು ನೆರೆ ರಾಜ್ಯಮತ್ತು ವಿದೇಶಗಳಿಗೆ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲಿ ಹೆಚ್ಚುವರಿ ಪ್ರಕರಣ ದಾಖಲಿಸಿ ಬಂಧಿಸಲಾಗುವುದು ಎಂದು ಸಿಸಿಬಿ ಪೊಲೀಸರು ಹೇಳಿದರು.
ಮತ್ತೊಂದು ಟನ್ ರಕ್ತಚಂದನ ವಶಕ್ಕೆ: ಬಂಧಿತರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಅಬ್ದುಲ್ ರಶೀದ್ ಮತ್ತು ತಂಡ ಮುಂಬೈಗೆ ಕಳ್ಳಸಾಗಣೆ ಮಾಡಿದ್ದ ಒಂದು ಟನ್ ರಕ್ತಚಂದನವನ್ನು ವಶಪಡಿಸಿಕೊಂಡಿದ್ದು, ಒಬ್ಬನನ್ನು ಬಂಧಿಸಿದ್ದಾರೆ.
ಮೇ16ರಂದು ತಡರಾತ್ರಿ ನ್ಯಾಷನಲ್ ಟ್ರಾವೆಲ್ಸ್‌ಗೆ ಸೇರಿದ ವಾಹನಗಳಲ್ಲಿ ರಕ್ತಚಂದನ ತುಂಡುಗಳನ್ನು ಪಾರ್ಸೆಲ್ ರೀತಿಯಲ್ಲಿ ಸಿದ್ಧಪಡಿಸಿ, ಬೆಂಗಳೂರಿನಿಂದ ಮುಂಬೈಗೆ ಕಳುಹಿಸಲಾಗಿತ್ತು. ಅಲ್ಲಿಂದ ವಿದೇಶಗಳಿಗೆ ಕಳುಹಿಸಲು ಸಿದ್ಧತೆ ಕೂಡ ಮಾಡಿಕೊಳ್ಳಲಾಗಿತ್ತು. ಬಂಧಿತರ ವಿಚಾರಣೆ ವೇಳೆ ಈ ಮಾಹಿತಿ ಪಡೆದ ಸಿಸಿಬಿ ವಿಶೇಷ ತಂಡ ಮುಂಬೈಗೆ ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆದು ಒಂದು ಟನ್ ರಕ್ತಚಂದನ ಜಪ್ತಿ ಮಾಡಿ,ರಾಜ್ಯಕ್ಕೆ ತಂದಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.