ಹೊಸದಿಲ್ಲಿ : ‘ಪ್ರಧಾನಿ ನರೇಂದ್ರ ಮೋದಿ ಅವರು ಬೆರಳೆಣಿಕೆಯ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾತ್ರವೇ ಮಹತ್ವ ನೀಡುತ್ತಾರೆ; ಸಾಮಾನ್ಯ ರೈತರನ್ನು, ಸಣ್ಣ ಉದ್ದಿಮೆದಾರರನ್ನು ಕಡೆಗಣಿಸುತ್ತಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದು ಟೀಕಿಸಿದರು.
”ಸಣ್ಣ ಮಟ್ಟದಲ್ಲಿರುವವರನ್ನು ಎಂದೂ ಕಡೆಗಣಿಸಬಾರದು; ಏಕೆಂದರೆ ಅವರೇ ಮುಂದೆ ದೊಡ್ಡ ಉದ್ಯಮಿಗಳಾಗುತ್ತಾರೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಇವತ್ತು ವಿಶ್ವ ಪ್ರಸಿದ್ಧವಾಗಿರುವ ಕೋಕಾ ಕೋಲಾ ಕಂಪೆನಿಯನ್ನು ಸ್ಥಾಪಿಸಿದವರು ಹಿಂದೊಮ್ಮೆ ಅಮೆರಿಕದಲ್ಲಿ ಶಿಕಂಜಿ ಮಾರಿಕೊಂಡಿದ್ದರು; ಮೆಕ್‌ಡೊನಾಲ್ಡ್ ಸ್ಥಾಪಕರು ದೇಶದಲ್ಲಿ ಢಾಬಾ ನಡೆಸುತ್ತಿದ್ದರು” ಎಂದು ರಾಹುಲ್ ಹೇಳಿದರು.
ರಾಹುಲ್ ಅವರು ಇಲ್ಲಿನ ತಲಕಟೋರಾ ಸ್ಟೇಡಿಯಂ ನಲ್ಲಿ ಏರ್ಪಟ್ಟಿದ್ದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಒಬಿಸಿ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
“ಇವತ್ತು ಬಿಜೆಪಿಯ ಕಾರ್ಯ ತಂತ್ರ ಏನೆಂಬುದು ಸ್ಪಷ್ಟವಿದೆ. 15ರಿಂದ 20 ಸಿರಿವಂತ ಉದ್ಯಮಿಗಳು ಪ್ರಧಾನಿ ಮೋದಿ ಅವರಿಗೆ ಸಾವಿರಾರು ಕೋಟಿ ಕೊಡುತ್ತಾರೆ; ಹಾಗೆಯೇ ಎಲ್ಲ ಲಾಭಗಳು ಆ 15 – 20 ಮಂದಿ ಸಿರಿವಂತರಿಗೆ ಹೋಗುತ್ತಿದೆ; ಇವತ್ತು ನಮ್ಮ ದೇಶ ಕೇವಲ ಇಬ್ಬರು ಅಥವಾ ಮೂವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ಗುಲಾಮ ಎಂಬ ಸ್ಥಿತಿಗೆ ತಲುಪಿದೆ….’
“….ಪ್ರತಿಯೋರ್ವ ಸಂಸದ ಮಾತನಾಡಲು ಹೆದರುತ್ತಾರೆ; ಅಥವಾ ಅವರಿಗೆ ಮಾತಾಡಲು ಬಿಡಲಾಗುತ್ತಿಲ್ಲ. ಮಾತನಾಡುವ ನಮ್ಮ ಮಾತುಗಳನ್ನು ಬಿಜೆಪಿಯವರು ಆಲಿಸುತ್ತಿಲ್ಲ. ಆರ್‌ಎಸ್‌ಎಸ್‌ಗೆ ಮಾತನಾಡಲು ಬಿಡಲಾಗುತ್ತಿದೆ; ದುಡಿಯುವ ಜನರನ್ನು ಇಂದು ಹಿಂಬದಿ ಕೋಣೆಗೆ ತಳ್ಳಲಾಗುತ್ತಿದೆ; ಆದರೆ ಅವರ ಪರಿಶ್ರಮದ ಲಾಭವನ್ನು ಯಾರೋ ಕೆಲವರು ಹೊಡೆದುಕೊಳ್ಳುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದರು.