Advertisement

ಪ್ಲಾಸ್ಟಿಕ್ ಬಾಟಲನ್ನು ತನ್ನ ಹೊಟ್ಟೆಗಿಳಿಸಿಕೊಂಡ ಕೋಬ್ರಾ ಅದನ್ನು ಉಗುಳಿದ್ದೇ ಒಂದು ವಿಸ್ಮಯ!

10:23 AM Jan 11, 2020 | Hari Prasad |

ಪ್ಲಾಸ್ಟಿಕ್ ನಮ್ಮ ಪರಿಸರಕ್ಕೆ ಮತ್ತು ಆ ಪರಿಸರದಲ್ಲಿ ಬದುಕುತ್ತಿರುವ ಜೀವ ಸಂಕುಲಕ್ಕೆ ಅದೆಷ್ಟು ಮಾರಕ ಎಂಬುದಕ್ಕೆ ನಮಗೆ ಹಲವಾರು ನಿದರ್ಶನಗಳು ಸಿಕ್ಕುತ್ತಲೇ ಇರುತ್ತವೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಸೇವಿಸುವ ಪ್ರಾಣಿಗಳು ಬಳಿಕ ನರಳಿ ಜೀವ ಬಿಡುವ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತವೆ.

Advertisement

ಇದೀಗ ನಾಗರ ಹಾವೊಂದು ದೊಡ್ಡ ಪ್ಲಾಸ್ಟಿಕ್ ಬಾಟಲಿಯನ್ನು ನುಂಗಿ ಬಳಿಕ ಅದನ್ನು ಅರಗಿಸಿಕೊಳ್ಳಲಾಗದೇ ತನಗನ ಬಾಯಿಯ ಮೂಲಕ ಹೊರಹಾಕುವ ವಿಡಿಯೋ ಒಂದು ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ.

ಅರಣ್ಯಾಧಿಕಾರಿಯಾಗಿರುವ ಪರ್ವೀನ್ ಕಸ್ವಾನ್ ಎಂಬವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ 48 ಸೆಕೆಂಡುಗಳ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಂಪು ಪಾನೀಯದ ದೊಡ್ಡ ಪ್ಲಾಸ್ಟಿಕ್ ಬಾಟಲಿಯನ್ನು ನುಂಗಿದ ದೊಡ್ಡ ನಾಗರ ಹಾವೊಂದು ತನ್ನ ಒದ್ದಾಡುತ್ತಾ ಬಳಿಕ ತನ್ನ ಹೊಟ್ಟೆಯ ನಡುಭಾಗದಿಂದ ಪ್ರಯಾಸಪಟ್ಟು ಅದನ್ನು ಹೊರಹಾಕುತ್ತದೆ. ಈ ಹಾವನ್ನು ಹಿಡಿಯಲು ಬಂದ ವ್ಯಕ್ತಿ ಹಾವಿಗೆ ಬಾಟಲಿಯನ್ನು ಹೊರಹಾಕಲು ಅವಕಾಶ ಮಾಡಿಕೊಡುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ.


ಕರಾವಳಿ ಭಾಗದ ಉರಗತಜ್ಞ ಗುರುರಾಜ್ ಸನಿಲ್ ಹೇಳುವ ಪ್ರಕಾರ ಹಾವುಗಳು ತಾವು ಸೇವಿಸುವ ಆಹಾರವನ್ನು ಹೊಟ್ಟೆಯಲ್ಲೇ ಜೀರ್ಣ ಮಾಡಿಕೊಳ್ಳುತ್ತವೆ. ಆದರೆ ಅವುಗಳಿಗೆ ಅಪಾಯ ಎದುರಾದ ಸನ್ನಿವೇಶದಲ್ಲಿ ತಪ್ಪಿಸಿಕೊಂಡು ಓಡಲು ಅನುಕೂಲವಾಗಲು ತಾವು ನುಂಗಿದ ಬೇಟೆಯನ್ನು ಉಗುಳಿ ತಮ್ಮ ದೇಹವನ್ನು ಹಗುರ ಮಾಡಿಕೊಂಡು ಬಳಿಕ ತಪ್ಪಿಸಿಕೊಳ್ಳುತ್ತವೆ.

ಆದರೆ ಈ ಪ್ರಕರಣದಲ್ಲಿ ತಾನು ಆಹಾರವೆಂದು ನುಂಗಿದ ಬಾಟಲನ್ನು ಹೊಟ್ಟೆಯಲ್ಲಿ ಅರಗಿಸಿಕೊಳ್ಳಲಾಗದೇ ಸಂಕಟಪಟ್ಟು ಈ ನಾಗರ ಅದನ್ನು ಬಹಳ ಪ್ರಯಾಸದಿಂದ ಹೊರ ಹಾಕುವ ದೃಶ್ಯ, ಪ್ಲಾಸ್ಟಿಕ್ ಉತ್ಪನ್ನಗಳು ಪ್ರಾಣಿ ಮತ್ತು ಉರಗಗಳ ಪಾಲಿಗೆ ಹೇಗೆ ಮಾರಕವಾಗಬಲ್ಲುದು ಎಂಬುದರ ಘೋರ ಚಿತ್ರಣವನ್ನು ನಮ್ಮ ಮುಂದಿಡುತ್ತದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.

Advertisement

ಭಾರತದಲ್ಲಿ ಪ್ರತೀನಿತ್ಯ 25 ಸಾವಿರ ಟನ್ ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಮತ್ತು ಇದರಲ್ಲಿ ಸುಮಾರು 40 ಪ್ರತಿಶತ ತ್ಯಾಜ್ಯ ಸಂಗ್ರಹವಾಗದೇ ಪರಿಸರದಲ್ಲೇ ಉಳಿದುಬಿಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next