Advertisement

ಕೋಸ್ಟಲ್‌ವುಡ್‌ ಫ್ಲ್ಯಾಶ್‌ಬ್ಯಾಕ್‌

11:54 PM Dec 25, 2019 | Sriram |

ಕೋಸ್ಟಲ್‌ವುಡ್‌ ಜಮಾನ ಶೈನಿಂಗ್‌ ಹಂತದಲ್ಲಿದೆ. ಹಿಂದೆಲ್ಲ ವರ್ಷಕ್ಕೆ ಒಂದೋ-ಎರಡೋ-ಮೂರೋ ತೆರೆ ಕಾಣುತ್ತಿದ್ದ ಸಿನೆಮಾಗಳ ಸಂಖ್ಯೆ ಇತ್ತೀಚೆಗೆ ಏರಿಕೆಯಾಗಿದೆ. ಆದರೆ ಕಳೆದ ವರ್ಷ 15 ಸಿನೆಮಾ ಬಿಡುಗಡೆಯಾಗಿದ್ದರೆ, ಈ ವರ್ಷ 10 ಚಿತ್ರಗಳು ಮಾತ್ರ ರಿಲೀಸ್‌ ಆಗಿವೆ.

Advertisement

2019ರ ಫೆಬ್ರವರಿಯಲ್ಲಿ “ಪುಂಡಿ ಪಣವು’ ಸಿನೆಮಾದಿಂದ ಆರಂಭವಾಗಿ ಬಳಿಕ “ದೇಯಿ ಬೈದೆತಿ’, “ಕಂಬಳಬೆಟ್ಟು ಭಟ್ರೆನ ಮಗಳ್‌’, “ಗೋಲ್‌ಮಾಲ್‌’, “ಕಟಪಾಡಿ ಕಟ್ಟಪ್ಪ’, “ಆಯೆ ಏರ್‌’, “ಬೆಲ್ಚಪ್ಪ’, “ಗಿರಿಗಿಟ್‌’, “ಜಬರ್ದಸ್ತ್ ಶಂಕರ’, “ಆಟಿಡೊಂಜಿ ದಿನ’ದ ತನಕ 10 ಸಿನೆಮಾಗಳು ಈ ವರ್ಷ ತೆರೆಕಂಡಿವೆ. ಕುದ್ಕನ ಮದೆ¾ ಹಾಗೂ 2 ಎಕ್ರೆ ಸಿನೆಮಾಗಳು ಇದೇ ವರ್ಷಾಂತ್ಯಕ್ಕೆ ಬಿಡುಗಡೆಯ ನಿರೀಕ್ಷೆಯಲ್ಲಿ ಇತ್ತಾದರೂ, ಇದೀಗ ಎರಡೂ ಸಿನೆಮಾಗಳು ಹೊಸ ವರ್ಷದ ನಿರೀಕ್ಷೆಯಲ್ಲಿವೆ.

ಅಂದಹಾಗೆ, ಈ ವರ್ಷ ಬಿಡುಗಡೆಯಾದ ಯಾವ ಸಿನೆಮಾಗಳು ಎಷ್ಟು ದಿನ ಇತ್ತು ಹಾಗೂ ಎಷ್ಟು ಗಳಿಕೆ ಮಾಡಿದೆ ಎಂಬುದನ್ನು ಹೊರತುಪಡಿಸಿದರೆ ತುಳು ಚಿತ್ರರಂಗದ ಮೇಲಿನ ನಿರೀಕ್ಷೆ ಹುಸಿಯಾಗಲಿಲ್ಲ ಎಂಬುದು ಸ್ಪಷ್ಟವಾಗಿದೆ. ಅದರಲ್ಲಿಯೂ ಒಂದೆರಡು ಸಿನೆಮಾ ಕೋಸ್ಟಲ್‌ ಗೆರೆಯನ್ನು ದಾಟಿ ದೇಶ-ವಿದೇಶದಲ್ಲಿ ಸುದ್ದಿ ಮಾಡುವ ಮುಖೇನ ಹೀಗೂ ಇದೆ ಎಂದು ತೋರಿಸಿರುವುದು ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ದಾಖಲೆ. ಆದರೂ ಪ್ರತಿ ವರ್ಷದಂತೆ ಒಮ್ಮೆ ಚಿತ್ರ ಮಾಡಿದ ನಿರ್ಮಾಪಕರು ಮತ್ತೂಮ್ಮೆ ಸಿನೆಮಾ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂಬ ಅಪವಾದ ಈ ಬಾರಿಯೂ ಇದೆ. ಯಾಕೆಂದರೆ, ಎಲ್ಲರಿಗೂ ಇಲ್ಲಿ ಲಾಭ ದೊರೆತಿಲ್ಲ; ಬದಲಾಗಿ ಬೆರಳೆಣಿಕೆಯ ನಿರ್ಮಾಪಕರು ಮಾತ್ರ ಎರಡನೇ ಬಾರಿ “ಧೈರ್ಯ’ ಮಾಡಿ ಚಿತ್ರ ಮಾಡಲು ಮನಸ್ಸು ಮಾಡಿದ್ದಾರೆ.

ಕಳೆದ ವರ್ಷ “ಬಲೇ ಪುದರ್‌ ದೀಕ ಈ ಪ್ರೀತಿಗ್‌’, “ತೊಟ್ಟಿಲ್‌’, “ಅಪ್ಪೆ ಟೀಚರ್‌’, “ನಮ್ಮ ಕುಸೇಲ್ದ ಜವನೆರ್‌’, “ಪೆಟ್‌ ಕಮ್ಮಿ’, “ಅಮ್ಮೆರ್‌ ಪೊಲೀಸಾ’, “ಪಡ್ಡಾಯಿ’, “ದಗಲ್‌ಬಾಜಿಲು’, “ಪತ್ತೀಸ್‌ ಗ್ಯಾಂಗ್‌’, “ಪಮ್ಮಣ್ಣೆ ದಿ ಗ್ರೇಟ್‌’, “ಮೈ ನೇಮ್‌ ಈಸ್‌ ಅಣ್ಣಪ್ಪೆ’, “ಏರಾ ಉಲ್ಲೆರ್‌ಗೆ’, “ಕೋರಿ ರೊಟ್ಟಿ’, “ಕರ್ಣೆ’, “ಉಮಿಲ್‌’ ಬಿಡುಗಡೆಗೊಂಡಿತ್ತು. “ಒರಿಯರ್ದೊರಿ ಅಸಲ್‌’- “ರಿಕ್ಷಾ ಡ್ರೈವರ್‌’ ನಿರ್ದೇಶಕ ಹ.ಸೂ.ರಾಜಶೇಖರ್‌, ತುಳು ಸಿನೆಮಾ ಸಾಹಿತ್ಯ ರಚನೆಗಾರ ಸೀತಾರಾಮ ಕುಲಾಲ್‌, ಚಿತ್ರನಟ ರೋಹಿದಾಸ್‌ ಕದ್ರಿ ಸೇರಿ ತುಳು ಸಿನೆಮಾಕ್ಕಾಗಿ ದುಡಿದ ಕೆಲವರು ಅಗಲಿರುವುದು ಈ ವರ್ಷದ ನೋವಿನ ಸುದ್ದಿ.

ನಿಲ್ಲದ “ಪ್ರತಿಷ್ಠೆ’ಯ ಪೈಪೋಟಿ!
ಸಿನೆಮಾ ಬಿಡುಗಡೆ ಮಾಡುವ ಪೈಪೋಟಿ ಇನ್ನೂ ತುಳು ಇಂಡಸ್ಟ್ರಿಯಲ್ಲಿ ಕಡಿಮೆ ಆದಂತೆ ಕಾಣುತ್ತಿಲ್ಲ. “ಪ್ರತಿಷ್ಠೆ’ಯ ಸಮಸ್ಯೆಯಿಂದ ಬಳಲುತ್ತಿರುವ ಇಲ್ಲಿನ ಆಯ್ದ ಸಿನೆಮಾ ನಿರ್ಮಾಪಕರು-ನಿರ್ದೇಶಕರು ಪೈಪೋಟಿ ಮಾಡಿಯಾದರೂ ತನ್ನ ಸಿನೆಮಾವನ್ನು ಇದೇ ದಿನಾಂಕಕ್ಕೆ ರಿಲೀಸ್‌ ಮಾಡುತ್ತೇನೆ ಎಂಬ ಹುಂಬತನ ಇನ್ನೂ ಮುಂದುವರಿದಿದೆ. ತುಳು ಚಲನಚಿತ್ರ ನಿರ್ಮಾಪಕರ ಸಂಘ ಸೇರಿದಂತೆ ಹಲವು ಸಂಘ-ಪ್ರಮುಖರು ಮೂಗುದಾರ ಹಾಕಿದರೂ ಇಲ್ಲಿ ಯಾರನ್ನು ಯಾರೂ ಕೇಳುವವರಿಲ್ಲ ಅನ್ನುವಂತಾಗಿದೆ. ಇಂತಹ ಅನಗತ್ಯ ಸ್ಪರ್ಧೆಯಿಂದ ದೂರ ನಿಂತರೆ ತುಳು ಇಂಡಸ್ಟ್ರಿ ಇನ್ನಷ್ಟು ಪ್ರಜ್ವಲಿಸಲು ಹಾಗೂ ನೂರಾರು ಕಲಾವಿದರು-ತಂತ್ರಜ್ಞರಿಗೆ ಅವಕಾಶ ಸಿಗಲು ಸಾಧ್ಯ.

Advertisement

ಕಳೆದ ವರ್ಷವೇ ದಾಖಲೆ
2018ರಲ್ಲಿ 15 ಸಿನೆಮಾ ಪ್ರದರ್ಶನವಾಗಿದ್ದು, ತುಳು ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ. ಯಾಕೆಂದರೆ ಇಷ್ಟು ಸಿನೆಮಾಗಳು ಒಂದೇ ವರ್ಷದಲ್ಲಿ ಬಂದಿರಲಿಲ್ಲ. 2017ರಲ್ಲಿ 11 ಸಿನೆಮಾ ಬಿಡುಗಡೆಯಾಗಿತ್ತು. ಅದಕ್ಕೂ ಮೊದಲು ಅಂದರೆ 2016ಕ್ಕೆ 13 ಸಿನೆಮಾಗಳು ತೆರೆ ಕಂಡಿದ್ದವು. ಅದು ತುಳುವಿನ ಅತ್ಯಧಿಕ ಸಿನೆಮಾ ಪ್ರದರ್ಶನ ಕಂಡ ವರ್ಷ ಎಂದಾಗಿತ್ತು.

ತುಳು ಸಿನೆಮಾರಂಗದ ಆರಂಭದ 10 ವರ್ಷದ ಅವಧಿಯಲ್ಲಿ 17 ತುಳು ಸಿನೆಮಾ ಬಿಡುಗಡೆಯಾಗಿತ್ತು. ಆ ನಂತರ ಸ್ವಲ್ಪ ಆಮೆಗತಿಯಲ್ಲಿ ಸಾಗುತ್ತಾ 20 ವರ್ಷದ ಅವಧಿಯಲ್ಲಿ ಕೇವಲ 15 ಸಿನೆಮಾ ಪ್ರದರ್ಶನಗೊಂಡಿತ್ತು. 2001ರಲ್ಲಿ ತೆರೆಗೆ ಬಂದ “ತುಡರ್‌’ ಚಿತ್ರದ ಬಳಿಕ ತುಳು ಚಿತ್ರರಂಗ ಸ್ವಲ್ಪ ವರ್ಷ ಸ್ಥಗಿತಗೊಂಡಿತ್ತು. ಬಳಿಕ 2006ರಲ್ಲಿ “ಕೋಟಿ ಚೆನ್ನಯ’, “ಕಡಲ ಮಗೆ’ ಸಿನೆಮಾ ಮತ್ತೆ ಭರವಸೆ ಮೂಡಿಸಿದವು. 2007ರಲ್ಲಿ “ಬದಿ’ ಚಿತ್ರ, 2008ರಲ್ಲಿ ಎರಡು ತುಳು ಸಿನೆಮಾಗಳು ತೆರೆ ಕಂಡು, 2009ರಲ್ಲಿ ಚಿತ್ರ ತೆರೆ ಕಾಣಲಿಲ್ಲ. 2010ರಲ್ಲಿ “ದೇವೆರ್‌’ 2011ರಲ್ಲಿ “ಗಗ್ಗರ’, “ಕಂಚಿಲ್ದ ಬಾಲೆ’ ಹಾಗೂ “ಒರಿಯರ್ದೊರಿ ಅಸಲ್‌’ ಚಿತ್ರ ತೆರೆ ಕಾಣುವ ಮೂಲಕ ತುಳು ಚಿತ್ರರಂಗದಲ್ಲಿ ಹೊಸ ಅಲೆ ಎದ್ದಿತು.

2012ರಲ್ಲಿ ನಾಲ್ಕು ಸಿನೆಮಾ ಬಂದು, 2013ರಲ್ಲಿ “ರಿಕ್ಷಾ ಡ್ರೈವರ್‌’ ತೆರೆ ಕಂಡಿತು. 2014ರಲ್ಲಿ ಒಟ್ಟು 7 ಸಿನೆಮಾಗಳು ಪ್ರದರ್ಶನಗೊಂಡಿದ್ದರೆ, 2015ರಲ್ಲಿ 10 ಚಿತ್ರಗಳು ತೆರೆಕಂಡಿದ್ದವು.

ಗಿರಿಗಿಟ್‌ ಕಮಾಲ್‌
ಈ ವರ್ಷದ ಒಟ್ಟು ಸಿನೆಮಾಗಳ ಪೈಕಿ ಒಂದೆರಡು ಸಿನೆಮಾಗಳು ಮಾತ್ರ ತುಳುವರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆ ನಿಂತಿವೆ. ಅದರಲ್ಲಿಯೂ “ಗಿರಿಗಿಟ್‌’ ಮಾಡಿದ ಕಮಾಲ್‌ ಅವಿಸ್ಮರಣೀಯ. ಅತ್ಯುತ್ತಮ ಕಥೆ ಹಾಗೂ ಸನ್ನಿವೇಶವನ್ನು ಹಿತ-ಮಿತವಾದ ಕಾಮಿಡಿ ಗೆಟಪ್‌ನಲ್ಲಿ ಸಿದ್ಧಪಡಿಸಿ ನೀಡಿದ ಗಿರಿಗಿಟ್‌ ಶತಕದ ಹೊಸ್ತಿಲನ್ನು ದಾಟಿ ಸಾಧನೆ ಮಾಡಿದ್ದು ಉಲ್ಲೇಖನೀಯ. ಇನ್ನು “ಕಟಪಾಡಿ ಕಟ್ಟಪ್ಪ’ ಸಿನೆಮಾ ಕೂಡ ಶತಕದ ಸಾಧನೆ ಬರೆದಿದೆ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next