Advertisement

ಕರಾವಳಿಯ ಯಾತ್ರಿಕರು ಅಪಾಯದಿಂದ ಪಾರು: ಯಾತ್ರೆ ಹೊರಟಿದ್ದ ತಂಡದವರ ಮಾತು

11:54 PM Jun 03, 2023 | Team Udayavani |

ಕಾರ್ಕಳ/ಬೆಳ್ತಂಗಡಿ: ಪಥ ಬದಲಾವಣೆಗಾಗಿ ಎಂಜಿನನ್ನು ಒಂದು ತುದಿಯಿಂದ ಇನ್ನೊಂದು ತುದಿಗೆ ಬದಲಾಯಿಸಿದ್ದರಿಂದಾಗಿ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ಅಪಘಾತದಲ್ಲಿ ನಾವು ಅದೃಷ್ಟವಶಾತ್‌ ಪಾರಾದೆವು. ನಮ್ಮ ಜೀವ ಉಳಿಯಿತು.

Advertisement

ಇದು ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಅಪಘಾತಕ್ಕೀಡಾದ ಹೌರಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಜೈನರ ಪವಿತ್ರ ಕ್ಷೇತ್ರ ಝಾರ್ಖಂಡ್‌ನ‌ ಸಮ್ಮೇದ ಶಿಖರ್ಜಿಗೆ ಯಾತ್ರೆ ಹೊರಟಿದ್ದ ಕರಾ ವಳಿಯ ತಂಡದಲ್ಲಿದ್ದ ಕಾರ್ಕಳದ ಗುಣ ವರ್ಮ ಜೈನ್‌ ಜೋಡುರಸ್ತೆ ಅವರ ಅಭಿಪ್ರಾಯ.

ಯಾತ್ರೆ ಹೊರಟಿದ್ದರು
ಬೆಂಗಳೂರಿನಿಂದ ಹೊರಟ ಹೌರಾ ಎಕ್ಸ್‌ಪ್ರೆಸ್‌ – ಕೋರಮಂಡಲ್‌ ಎಕ್ಸ್‌ ಪ್ರಸ್‌ ಮತ್ತು ಗೂಡ್ಸ್‌ ರೈಲು ಗಳು ಢಿಕ್ಕಿಯಾಗಿ ಸಂಭವಿಸಿದ ಅವಘಡ ದಲ್ಲಿ ಅಪಾರ ಸಾವು-ನೋವು ಸಂಭವಿಸಿತ್ತು. ಮಹಿಮಾ ಸಾಗರ ಮುನಿ ಮಹಾರಾಜರು ಜೂ. 1ರಿಂದ ಝಾರ್ಖಂಡ್‌ ಸಮ್ಮೇಳನದ ಶಿಖರ್ಜಿ ಯಾತ್ರೆ ಯನ್ನು ಸಂಕಲ್ಪಿಸಿದ್ದು, ಅದರಲ್ಲಿ ಪಾಲ್ಗೊಳ್ಳಲು ಕಳಸದ 110 ಯಾತ್ರಿಕರ ಜತೆ ಕಾರ್ಕಳದ 7 ಜನ ಮತ್ತು ದಕ್ಷಿಣ ಕನ್ನಡದ ವಿವಿಧ ಭಾಗಗಳ 15 ಜನ ಸೇರಿದಂತೆ ಕರಾವಳಿಯ ಒಟ್ಟು 22 ಮಂದಿ ಹೊರಟಿದ್ದರು. ಜೂ. 1ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನಿಂದ ರೈಲು ಹೊರಟಿತ್ತು. ಹೌರಾ ತಲುಪಲು 2 ತಾಸು ಬಾಕಿ ಇರುವಾಗ ರಾತ್ರಿ 8ರ ವೇಳೆಗೆ ಬಾಲಸೋರ್‌ ಬಳಿ ರೈಲು ದುರಂತ ಸಂಭವಿಸಿತು.

ಬಾಂಬ್‌ ಸಿಡಿದಂತೆ ಸದ್ದು!
ನಾವಿದ್ದ ರೈಲು ಸಾಗುತ್ತಿತ್ತು. ರಾತ್ರಿ 8ರ ವೇಳೆಗೆ ಏಕಾಏಕಿ ಬಾಂಬ್‌ ಸಿಡಿದಂತೆ ಜೋರಾದ ಸದ್ದು ಕೇಳಿಸಿತು. ಒಮ್ಮೆಲೆ ನಡುಗಿ ರೈಲು ನಿಂತಿತು. ಗಾಬರಿಯಿಂದ ಇಳಿದು ನೋಡುತ್ತಿದ್ದಂತೆ 500 ಮೀಟರ್‌ ಅಂತರದಲ್ಲಿ ದುರಂತ ವೊಂದು ಸಂಭವಿಸಿತ್ತು. ನಾವಿದ್ದ ರೈಲು ಢಿಕ್ಕಿಯಾದ ವಿಚಾರ ತಿಳಿಯುತ್ತಲೇ ಗಾಬರಿಗೊಂಡೆವು. ಅಪಘಾತ ಸಂಭವಿಸಿದ ಸ್ಥಳ ಬಯಲು ಪ್ರದೇಶವಾಗಿತ್ತು. ರಾತ್ರಿಯಾದ್ದರಿಂದ ಏನಾಯಿತು ಎನ್ನುವುದು ಕ್ಷಣಕ್ಕೆ ಗೊತ್ತಾಗಲಿಲ್ಲ. ಆ ವೇಳೆಗಾಗಲೇ ಪೊಲೀಸ್‌ ಸೇರಿದಂತೆ ರೈಲುಗಳಲ್ಲಿದ್ದ ಸಾವಿರಾರು ಜನರು ಜಮಾಯಿಸಿದ್ದರು. ಸ್ಥಳೀಯರು ಬೋಗಿಗಳಲ್ಲಿದ್ದ ಜನರನ್ನು ಹೊರಗೆ ಕರೆದುಕೊಂಡು ಬರುತ್ತಿದ್ದು ರಕ್ಷಣ ಕಾರ್ಯ ವೇಗವಾಗಿ ನಡೆಯುತ್ತಿತ್ತು. ಗಾಯಾಳುಗಳ ಚೀರಾಟ ಮುಗಿಲು ಮುಟ್ಟಿತ್ತು. ರಕ್ತದ ಓಕುಳಿ ಹರಿಯುತ್ತಿದ್ದುದನ್ನು ದೂರದಿಂದ ಕಂಡೆವು. ಸಮೀಪಕ್ಕೆ ಹೋಗಲು ಪೊಲೀಸರು ಬಿಡುತ್ತಿರಲಿಲ್ಲ ಎಂದು ಗುಣವರ್ಮ ದೂರವಾಣಿ ಮೂಲಕ ಮಾಹಿತಿ ನೀಡಿದರು. ನಾವೀಗ ಯಾತ್ರೆ ಮುಂದುವರಿಸಿದ್ದು ಎಲ್ಲರೂ ಕ್ಷೇಮವಾಗಿದ್ದೇವೆ. ನಮ್ಮನ್ನು ನಿಲ್ದಾಣಗಳಲ್ಲಿ ಚೆನ್ನಾಗಿ ನೋಡಿಕೊಂಡರು ಎಂದಿದ್ದಾರೆ.

ಕಾರ್ಕಳ, ಮೂಡುಬಿದಿರೆಯ ಯಾತ್ರಿಕರು
ಕಾರ್ಕಳದ ಗುಣವರ್ಮ ಜೈನ್‌, ದಿವ್ಯಸ್ತುತಿ ಜೈನ್‌, ರೆಂಜಾಳದ ಪ್ರದೀಪ್‌ ಇಂದ್ರ, ಕೆರ್ವಾಶೆಯ ಸಿಂಹಸೇನೇಂದ್ರ, ವಿದ್ಯಾನಂದ, ಮಾಳ ಗ್ರಾಮದ ಪುಟ್ಟ ರಾಜಯ್ಯ, ಚಂದ್ರಾವತಿ, ಬೆಳ್ತಂಗಡಿ ಗುರುವಾಯನಕೆರೆ ಜೈನ್‌ ಪೇಟೆಯ ಸುಷ್ಮಾ ಮತ್ತು ಹಿತೇಂದ್ರ ದಂಪತಿ, ವೇಣೂರಿನ ಮಮತಾ ಜೈನ್‌, ಆಶಾಲತಾ ಜೈನ್‌, ದಿವ್ಯಶ್ರೀ ಕುತ್ತೋಡಿ ಉಜಿರೆಯ ರತ್ನಶ್ರೀ ದೊಂಡೋಲೆ, ಶಾಂತಿರಾಜ್‌, ಅರ್ಪಣಾ, ಚಾರ್ವಿ ಪ್ರೀತಿ, ಅರ್ಚನಾ, ರಂಜಿತಾ, ಸುಜಿತ್‌, ಮೂಡುಬಿದಿರೆಯ ಕಿಶೋರ್‌ ಕುಮಾರ್‌, ತ್ರಿಶಲಾ, ಪದ್ಮಶ್ರೀ, ರೈಲಿನಲ್ಲಿದ್ದವರು.

Advertisement

ಪ್ರಯಾಣ ಮುಂದುವರಿಕೆ
ಅಪಘಾತಕ್ಕೀಡಾದ ಮೂರು ಬೋಗಿ ಗಳನ್ನು ತೊರೆದು ಹೌರಾ- ಬೆಂಗಳೂರು ಎಕ್ಸ್‌ಪ್ರೆಸ್‌ ರಾತ್ರಿ 12 ಗಂಟೆಯ ವೇಳೆಗೆ ಪ್ರಯಾಣ ಮುಂದುವರಿಸಿತು. ಜೂ. 3ರ ಬೆಳಗ್ಗೆ ಹೌರಾ ತಲುಪಬೇಕಿದ್ದ ರೈಲು ಮಧ್ಯಾಹ್ನ 2.10ಕ್ಕೆ ತಲುಪಿದೆ. ಜೂ. 4ರ ಮುಂಜಾನೆ ಝಾರ್ಖಂಡ್‌ನ‌ ಪರಶು ನಾಥ್‌ ನಿಲ್ದಾಣ ತಲುಪಿ ಅಲ್ಲಿಂದ 27 ಕಿ.ಮೀ. ದೂರದಲ್ಲಿರುವ ಶಿಖರ್ಜಿಗೆ ನಡೆದು ಸಾಗಲಿದ್ದೇವೆ ಎಂದರು.

ಬ್ರೇಕ್‌ ಹಾಕಿದ ಅನುಭವ
ನಮ್ಮ ತಂಡವು ಉಜಿರೆ ಮತ್ತು ವೇಣೂರಿನಿಂದ ಕಳಸಕ್ಕೆ ತೆರಳಿ ಮೇ 31 ರಂದು ಬೆಂಗಳೂರು ಮೂಲಕ ರೈಲಿನಲ್ಲಿ ಪ್ರಯಾಣ ಮುಂದುವರಿಸಿತ್ತು. ಯಶವಂತಪುರ-ಹೌರಾ ಎಕ್ಸ್‌ಪ್ರೆಸ್‌ನ ಎಸ್‌-6 ಮತ್ತು 7 ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದೆವು. ಅಪಘಾತದ ಸಮಯ ನಾವೆಲ್ಲ ಭಜನೆ ನಿರತರಾಗಿದ್ದೆವು. ಏಕಾಏಕಿ ಬ್ರೇಕ್‌ ಹಾಕಿದ ಅನುಭವವಾಯಿತು. ಹೊರಗೆ ನೋಡಿದರೆ ಅಪಘಾತ ಸಂಭವಿಸಿತ್ತು. ಮಧ್ಯರಾತ್ರಿ 1.30ರ ಸುಮಾರಿಗೆ ರೈಲು ಮತ್ತೆ ಹೊರಟಿತು. ಎಲ್ಲರೂ ಸುರಕ್ಷಿತರಾಗಿದ್ದೇವೆ. ಜೂ. 9ರಂದು ಹಿಂದಿರುಗಲಿದ್ದೇವೆ ಎಂದು ತಂಡದ ಸದಸ್ಯೆ ಆಶಾಲತಾ ಜೈನ್‌ ವೇಣೂರು ತಿಳಿಸಿದ್ದಾರೆ.

ಸಹಾಯವಾಣಿ
ಉಡುಪಿ: ರೈಲು ಅಪಘಾತದಲ್ಲಿ ಜಿಲ್ಲೆಗೆ ಸಂಬಂಧಿಸಿದ ಯಾರಾದರೂ ಸಿಲುಕಿದ್ದರೆ ಮಾಹಿತಿಯನ್ನು ಅವರಿಗೆ ಸಂಬಂಧಿಸಿದವರು ರಾಜ್ಯ ಸಹಾಯವಾಣಿ ಕೇಂದ್ರ 080 22253707 / 080 22340676 (ಸಹಾಯವಾಣಿ: 1070), ಉಡುಪಿ ಜಿಲ್ಲಾಧಿಕಾರಿ ಕಚೇರಿ (24ಗಿ7) ಜಿಲ್ಲಾ ವಿಪತ್ತು ನಿರ್ವಹಣ ಕೇಂದ್ರ 0820 -2574802 ಕರೆ ಮಾಡಿ ತಿಳಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.

ಪಂದ್ಯಕ್ಕೆ ತೆರಳಿದ ತಂಡಕ್ಕೆ ವಿಮಾನ ವ್ಯವಸ್ಥೆ
ಮಂಗಳೂರು: ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ವಾಲಿಬಾಲ್‌ ಪಂದ್ಯದಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ ತಂಡ ರೈಲು ದುರಂತದ ಕಾರಣ ಕೋಲ್ಕತ್ತಾದಲ್ಲೇ ಬಾಕಿಯಾಗಿದೆ. ಈ ತಂಡದಲ್ಲಿ ದ.ಕ. ಜಿಲ್ಲೆಯ ಇಬ್ಬರು ಬಾಲಕರು, ಓರ್ವ ಬಾಲಕಿ, ಕಾರ್ಕಳದ ಬಾಲಕ ಸೇರಿದಂತೆ 31 ಮಂದಿ ಇದ್ದಾರೆ. ಅವರಿಗೆ ಕೊಲ್ಕತ್ತಾದಿಂದ ವಿಮಾನದ ವ್ಯವಸ್ಥೆ ಮಾಡಲಾಗಿದ್ದು ರವಿವಾರ ಮರಳಲಿದ್ದಾರೆ.

ಅವರು ಪಂದ್ಯದಲ್ಲಿ ಭಾಗವಹಿಸಿ ಶನಿವಾರ ರೈಲಿನಲ್ಲಿ ಹೊರಡಬೇಕಿತ್ತು, ಆದರೆ ರೈಲು ದುರಂತದಿಂದ ರೈಲುಗಳು ರದ್ದಾದ ಕಾರಣ ಸಬ್‌ಜೂನಿಯರ್‌ ವಾಲಿಬಾಲ್‌ ತಂಡ ಕಳವಳಕ್ಕೊಳಗಾಗಿತ್ತು.

ಬಂಟ್ವಾಳ ಮಂಚಿಯ ವಿದ್ಯಾರ್ಥಿ ಅಬ್ದುಲ್‌ ಖಾದರ್‌ ಮುಹ್ಸಿನ್‌, ಸುಬ್ರಹ್ಮಣ್ಯ ನಿವಾಸಿ ಹಾಗೂ ಆಳ್ವಾಸ್‌ ಪಿಯು ಕಾಲೇಜಿನ ವಿದ್ಯಾರ್ಥಿ ಚಿನ್ಮಯ್‌ ಹಾಗೂ ಮಂಗಳೂರಿನ ದಿಶಾ ಹಾಗೂ ಕಾರ್ಕಳ ದುರ್ಗಾನಗರದ ಮಣಿಕಾಂತ್‌ ತಂಡದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next