Advertisement

Paddy ಕರಾವಳಿಯಲ್ಲಿ ಭತ್ತದ ಕಟಾವು ಆರಂಭ: ಈ ಬಾರಿಯೂ “ಬೆಂಬಲ ಬೆಲೆ’ ಘೋಷಣೆ ವಿಳಂಬ

11:52 PM Oct 27, 2023 | Team Udayavani |

ಕುಂದಾಪುರ: ಕರಾವಳಿಯೆಲ್ಲೆಡೆ ಭತ್ತ ಕಟಾವು ಆರಂಭಗೊಂಡಿದ್ದರೂ ಈ ಬಾರಿಯೂ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆಯಾಗಲಿ, ಖರೀದಿ ಕೇಂದ್ರ ಆರಂಭಿಸುವ ಬಗ್ಗೆಯಾಗಲೀ ಯಾವುದೆ ಪ್ರಕ್ರಿಯೆ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಸರಕಾರ ಪ್ರಕ್ರಿಯೆ ಆರಂಭಿಸಬೇಕೆಂಬ ಆಗ್ರಹ ಕೃಷಿಕ ವಲಯದಿಂದ ವ್ಯಕ್ತವಾಗಿದೆ.

Advertisement

ಪ್ರತಿ ವರ್ಷವೂ ವ್ಯಾಪಾರಸ್ಥರ ಲಾಬಿಯ ಕಾರಣದಿಂದ ರೈತರು ಭತ್ತವನ್ನೆಲ್ಲಾ ಮಾರಿದ ಮೇಲೆ ಖರೀದಿ ಕೇಂದ್ರಗಳನ್ನು ತೆರೆಯುತ್ತವೆ. ಈ ಬಾರಿಯೂ ಅದು ಪುನರಾವರ್ತನೆಯಾಗಲಿದೆ ಎಂಬ ಅಭಿಪ್ರಾಯವೂ ಕೃಷಿಕ ವಲಯದಲ್ಲಿ ಕೇಳಿಬರುತ್ತಿದೆ.

ಕಳೆದ ವರ್ಷವೂ ಸೇರಿದಂತೆ ಹಿಂದೆ ಬೆಂಬಲ ಬೆಲೆ ಘೋಷಣೆ ಹಾಗೂ ಖರೀದಿ ಕೇಂದ್ರ ತೆರೆಯುವಲ್ಲಿನ ವಿಳಂಬದಿಂದ ಕರಾವಳಿಯ ರೈತರಿಗೆ ಖರೀದಿ ಕೇಂದ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿತ್ತು.

ಕೇಂದ್ರ ಸರಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‌ಗೆ (ಕಳೆದ ಬಾರಿ 2,040 ರೂ. ಹಾಗೂ ಗ್ರೇಡ್‌ ಎ ಭತ್ತಕ್ಕೆ 2,060 ರೂ., ಕುಚ್ಚಲಕ್ಕಿ ಭತ್ತಕ್ಕೆ ಹೆಚ್ಚುವರಿ 500 ರೂ.) ದರ ನಿಗದಿಪಡಿಸಿ ರಾಜ್ಯ ಸರಕಾರಕ್ಕೆ ಭತ್ತದ ಖರೀದಿ ಕೇಂದ್ರಗಳಲ್ಲಿ ಖರೀದಿ ಮಾಡುವಂತೆ ಆದೇಶ ಹೊರಡಿಸಿತ್ತು. ಈ ಬಾರಿ ಯಾವುದೇ ಆದೇಶ ಬಂದಿಲ್ಲ.

ಉಡುಪಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದ.ಕ.ದಲ್ಲಿ ಇನ್ನೂ ಪ್ರಕ್ರಿಯೆ ಆರಂಭವಾಗಬೇಕಿದೆ. ಪ್ರತೀ ಬಾರಿಯೂ ಪ್ರಕ್ರಿಯೆ ವಿಳಂಬ ಆಗುತ್ತಿರುವುದರಿಂದ ಕರಾವಳಿಯ ರೈತರಿಗೆ ಅನ್ಯಾಯವಾಗುತ್ತಿದೆ.

Advertisement

2 ಜಿಲ್ಲೆ : 31 ಕ್ವಿಂಟಾಲ್‌ ಮಾತ್ರ
ಕೇಂದ್ರ ಆರಂಭದಲ್ಲಿನ ವಿಳಂಬದಿಂದ ಕಳೆದ ವರ್ಷ ದ.ಕ. ಜಿಲ್ಲೆಯ ಮಂಗಳೂರು, ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಮೂಡುಬಿದಿರೆ, ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಹೆಬ್ರಿ, ಅಜೆಕಾರು, ಬ್ರಹ್ಮಾವರ, ಕೋಟದಲ್ಲಿ ಬೆಂಬಲ ಬೆಲೆಯಡಿ ಭತ್ತದ ಖರೀದಿ ಕೇಂದ್ರಗಳ ಪೈಕಿ ಉಡುಪಿ ಜಿಲ್ಲೆಯಲ್ಲಿ ಒಬ್ಬರು 31 ಕ್ವಿಂಟಾಲ್‌ ಭತ್ತ ಕೊಟ್ಟಿದ್ದರಷ್ಟೇ. 2015-16ರಲ್ಲಿ 6 ರೈತರಿಂದ 168 ಕ್ವಿಂಟಾಲ್‌ ಭತ್ತ, 20161-17ರಲ್ಲಿ 29 ರೈತರಿಂದ 68 ಕ್ವಿಂಟಾಲ್‌ ಭತ್ತವನ್ನು ಖರೀದಿಸಲಾಗಿತ್ತು. 2017ರಿಂದ ಕಳೆದ ವರ್ಷದವರೆಗೆ ಒಂದು ಕೆಜಿ ಭತ್ತ ಸಹ ಖರೀದಿ ಕೇಂದ್ರಕ್ಕೆ ಬರಲಿಲ್ಲ. ಉಡುಪಿಯಲ್ಲಿ 45 ರೈತರು ನೋಂದಾಯಿಸಿದ್ದರೆ, ದ.ಕ.ದಲ್ಲಿ ಯಾರೂ ನೋಂದಾಯಿಸಿರಲಿಲ್ಲ.

ಈ ಬಾರಿ ಮುಂಗಾರಿನ ಕೊರತೆ ಭತ್ತದ ಬೆಳೆಯ ಮೇಲೂ ಪರಿಣಾಮ ಬೀರಿದೆ. 5 ಕ್ವಿಂಟಾಲ್‌ ಇಳುವರಿ ಬರುವಲ್ಲಿ 2 ಕ್ವಿಂಟಾಲ್‌ ಸಿಗುವುದೂ ಕಷ್ಟ ಎಂಬ ಅಭಿಪ್ರಾಯದಲ್ಲಿ ದ್ದಾರೆ ಹೊಸಂಗಡಿ ಬೆಚ್ಚಳ್ಳಿಯ ಕೃಷಿಕ ರಾಜೇಂದ್ರ ಪೂಜಾರಿಯಂಥ ಹಲವರು.

ವ್ಯಾಪಾರಸ್ಥರ ಲಾಬಿ ಕಾರಣ ರೈತರಲ್ಲಿರುವ ಭತ್ತವೆಲ್ಲ ಖಾಸಗಿಯವರಿಗೆ ಮಾರಾಟವಾದ ಬಳಿಕ ಸರಕಾರ ಖರೀದಿ ಕೇಂದ್ರ ಆರಂಭಿಸುತ್ತದೆ. ಇದಕ್ಕೆ ವ್ಯಾಪಾರಸ್ಥರ ಲಾಬಿಯೇ ಕಾರಣ. ಜನಪ್ರತಿನಿಧಿಗಳೂ ಈ ಬಗ್ಗೆ ಚಿಂತಿಸುವುದಿಲ್ಲ. ಹಾಗಾಗಿ ಪ್ರತೀ ಬಾರಿಗ ಇಲ್ಲಿನ ರೈತರಿಗೆ ಅನ್ಯಾಯವಾಗುತ್ತಿದೆ ಎನ್ನುತ್ತಾರೆ ರೈತ ಸಂಘ ತ್ರಾಸಿ ವಲಯದ ಅಧ್ಯಕ್ಷ ಶರತ್‌ ಕುಮಾರ್‌ ಶೆಟ್ಟಿ.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಮೇಲುಸ್ತುವಾರಿಯೆಲ್ಲ ಎಪಿಎಂಸಿಯದ್ದಾಗಿದೆ.
– ಸೀತಾ ಎಂ.ಸಿ./
ಕೆಂಪೇಗೌಡ ಎಚ್‌.,
ಜಂಟಿ ನಿರ್ದೇಶಕರು, ಕೃಷಿ
ಇಲಾಖೆ ಉಡುಪಿ, ದ.ಕ. ಜಿಲ್ಲೆ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next