Advertisement

ಭತ್ತ ಬೆಳೆಗಾರರಿಗೆ “ಕರಾವಳಿ ಪ್ಯಾಕೇಜ್‌’ಅನುಷ್ಠಾನ

01:33 AM Jun 20, 2019 | sudhir |

ಮಂಗಳೂರು: ಕರಾವಳಿ ಭಾಗದ ಭತ್ತ ಬೆಳೆಯುವ ರೈತರಿಗೆ ಕಳೆದ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ “ಕರಾವಳಿ ಪ್ಯಾಕೇಜ್‌’ ಅನ್ನು ಅನುಷ್ಠಾನಗೊಳಿಸುವ ಸಂಬಂಧ ಶೀಘ್ರದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಪ್ರಕಟಿಸಿದರು.

Advertisement

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕೃಷಿ, ತೋಟಗಾರಿಕಾ ಅಧಿಕಾರಿಗಳು, ರೈತ ಸಂಘದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ಯಾಕೇಜ್‌ ಪ್ರಕಾರ ಯಂತ್ರ ಹಾಗೂ ಕಾರ್ಮಿಕರನ್ನು ಬಳಸಿ ಭತ್ತ ಬೆಳೆಯುವ ರೈತರ ಖಾತೆಗೆ ಪ್ರತಿ ಹೆಕ್ಟೇರ್‌ಗೆ 7,500 ರೂ.ನೇರ ಜಮಾ ಮಾಡಲಾಗುವುದು. ಕರಾವಳಿಯ ಪ್ರಮುಖ ಬೆಳೆಯಾದ ಭತ್ತದ ಕಡೆಗೆ ಕೃಷಿಕರ ಆಸಕ್ತಿ ಕಡಿಮೆಯಾಗುತ್ತಿರುವುದರಿಂದ ರೈತರಿಗೆ ಈ ರೀತಿಯ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಪ್ಯಾಕೇಜ್‌ ಘೋಷಿಸಲಾಗಿತ್ತು. ಇದರ ಸರಕಾರಿ ಆದೇಶ ಶೀಘ್ರದಲ್ಲಿ ಅನುಷ್ಠಾನಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕು ಮಟ್ಟದಲ್ಲಿ ರೈತರ ಸಭೆ
ರೈತ ಮುಖಂಡ ಧನಕೀರ್ತಿ ಬಲಿಪ ಮಾತನಾಡಿ, ವಿವಿಧ ಯೋಜನೆಗಳ ಬಗ್ಗೆ ತಾಲೂಕು-ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ರೈತರಿಗೆ ಮಾಹಿತಿ ನೀಡುವ ಸಭೆ ಆಯೋಜಿಸಬೇಕು ಎಂದು ಆಗ್ರಹಿಸಿದರು. ಯು.ಟಿ. ಖಾದರ್‌ ಅವರು ಮುಂದಿನ ತಿಂಗಳಿಂದ ತಾಲೂಕು ಮಟ್ಟದಲ್ಲಿ ರೈತರ ಸಭೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರೈತರಿಗೆ ದೂರವಾಣಿ ಸಂಪರ್ಕ ಕೇಂದ್ರ
ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಮಾತನಾಡಿ, ಕೃಷಿ-ತೋಟಗಾರಿಕಾ ಇಲಾಖೆಯ ವಿವಿಧ ಮಾಹಿತಿ ನೇರವಾಗಿ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ದೂರವಾಣಿ ಸಂಪರ್ಕ ಕೇಂದ್ರ ಆರಂಭಿಸಲಾಗುವುದು. ಈ ಕುರಿತಂತೆ ರೈತ ಸಂಘಟನೆಗಳ ನೆರವು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ| ಸೀತಾ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್‌.ಆರ್‌.ನಾಯ್ಕ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಪ್ರಸನ್ನ, ಸಹಕಾರಿ ಇಲಾಖೆಗಳ ಉಪನಿಬಂಧಕ ಸುರೇಶ್‌ಗೌಡ, ಪಾಲಿಕೆ ಉಪಾಯುಕ್ತೆ ಗಾಯತ್ರಿ ನಾಯಕ್‌, ವಿವಿಧ ರೈತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೊಳೆರೋಗ; 50 ಕೋ.ರೂ. ಪರಿಹಾರ ವಿತರಣೆ
ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಮಾತನಾಡಿ, ಕಳೆದ ಸಾಲಿನಲ್ಲಿ ಅಡಿಕೆ ಕೊಳೆ ರೋಗ ಪರಿಹಾರ ಸಿಗದ ರೈತರ ಪಟ್ಟಿಯನ್ನು ಹೆಸರು, ತಾಲೂಕು, ಗ್ರಾಮ, ಸರ್ವೇ ನಂಬರ್‌ ಸಹಿತ ನೀಡಿದರೆ ಯಾವ ಕಾರಣಕ್ಕೆ ವಿಳಂಬವಾಗಿದೆ ಎಂದು ಅಧಿಕಾರಿಗಳ ಮೂಲಕ ಪತ್ತೆಹಚ್ಚಿ ಮೂರು ದಿನದಲ್ಲಿ ಮಾಹಿತಿ ನೀಡಲಾಗುವುದು. ಕೊಳೆರೋಗಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ 56,000 ಅರ್ಜಿ ಬಂದಿದ್ದು, ಅದರಲ್ಲಿ 50,000 ಮಂದಿಗೆ ಹೆಕ್ಟೇರ್‌ಗೆ 18,000 ರೂ.ಗಳಂತೆ 50 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ ಎಂದರು.

ರೈತ ಪ್ರಮುಖರ ಮನವಿ
-  ರೈತರ ಮೇಲೆ ಬ್ಯಾಂಕ್‌ಗಳು ಹಾಕಿರುವ ಕೇಸ್‌ವಾಪಾಸ್‌ಗೆ ರೈತರ ಆಗ್ರಹ
-  ಕೋವಿ ಪರವಾನಗಿ ನವೀಕರಣ ಮೊತ್ತ ಹೆಚ್ಚಳ ಸರಿಯಲ್ಲ; ಕಾನೂನು ಹೋರಾಟ ಮಾಡಲಾಗುವುದು
-  ಭತ್ತ ಬೆಳೆ ಉದ್ಯೋಗ ಖಾತ್ರಿ ವ್ಯಾಪ್ತಿಯಲ್ಲಿ ಸೇರಿಸಿ
– ಬರಪೀಡಿತ ಜಿಲ್ಲೆ ಘೋಷಣೆ ಮುಂದುವರಿಯಲಿ
-  ಕಳಪೆ ಅಡಕೆ ಆಮದಿಗೆ ಕಡಿವಾಣ ಅಗತ್ಯ

Advertisement

Udayavani is now on Telegram. Click here to join our channel and stay updated with the latest news.

Next