ಕಾರವಾರ: ರವಿವಾರ ಬೆಳಗಿನ ಜಾವದಿಂದ ಸೋಮವಾರ ಸಂಜೆ ತನಕ ಸತತವಾಗಿ ಮಳೆ ಸುರಿಯುತ್ತಿದ್ದು, ಕಾಳಿ ನದಿ ದಡದ ಹಲವು ಗ್ರಾಮಗಳು ಜಲಭೀತಿ ಎದುರಿಸುತ್ತಿವೆ. ಇನ್ನೊಂದೆಡೆ ಕದ್ರಾ, ಕೊಡಸಳ್ಳಿ ಜಲಾಶಯಗಳು ಭರ್ತಿಯಾಗಿದ್ದು, ಜಲಾಶಯಗಳ ಎಲ್ಲ ಕ್ರಸ್ಟಗೇಟ್ ತೆರೆದು ನದಿಗೆ ನೀರು ಹೊರಬಿಡಲಾಗಿದೆ. ಸೋಮವಾರ ಇಡೀ ದಿನ ಕದ್ರಾ, ಕೊಡಸಳ್ಳಿ ಜಲಾಶಯಗಳಿಂದ 65 ಸಾವಿರ ಕ್ಯೂಸೆಕ್ ನೀರು ನದಿಗೆ ಸೇರಿದೆ. 24 ತಾಸು ಸತತವಾಗಿ ಕ್ರಸ್ಟ್‌ಗೇಟ್ ತೆರೆಯುವಷ್ಟರ ಮಟ್ಟಿಗೆ ಮಳೆ ಸುರಿಯುತ್ತಿದೆ. ಕದ್ರಾದ ಮಹಾಮಾಯಿ ದೇವಸ್ಥಾನ ನೀರಿನಿಂದ ಜಲಾವೃತವಾಗಿದೆ. ಕದ್ರಾದ 7 ಕುಟುಂಬಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 7 ಕುಟುಂಬದ 23 ಜನರು ಕದ್ರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆದು ರಕ್ಷಣೆ ನೀಡಲಾಗಿದೆ. ಕಣಜಗೇರಿ ಗ್ರಾಮದ ರಸ್ತೆ ಗದ್ದೆಗಳು ಜಲಮಯವಾಗಿದ್ದು, 7 ಮನೆಗಳಿಗೆ ನೀರು ನುಗ್ಗಿದೆ. ಮಲ್ಲಾಪುರ ಗ್ರಾಮದ ಹತ್ತು ಮನೆಗಳಿಗೆ ಭಾಗಶಃ ಕಾಳಿ ನದಿ ನೀರು ನುಗ್ಗಿದ್ದು, ಅವರ ರಕ್ಷಣೆಗೆ ಕಂದಾಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಾರವಾರ, ಶಿರಸಿ, ಜೋಯಿಡಾ ಮತ್ತು ಯಲ್ಲಾಪುರ ತಾಲೂಕಿನಲ್ಲಿ 100 ಮಿಲಿ ಮೀಟರ್ ಮಳೆ ಬಿದ್ದಿದ್ದು, ಮಳೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಜಿಲ್ಲಾಧಿಕಾರಿ ಡಾ| ಹರೀಶ್ ಕುಮಾರ್ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ತಾಲೂಕಿನಲ್ಲಿ ಪ್ರವಾಸ ಮಾಡಿ ಮಳೆಯಿಂದ ಆದ ಹಾನಿ ಪರಿಶೀಲಿಸಿ, ಪರಿಹಾರ ನೀಡಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಕಾರವಾರ ಕದ್ರಾ ಜೋಯಿಡಾದಲ್ಲಿ ನೋಡೆಲ್ ಅಧಿಕಾರಿಗಳು ಸತತ 24 ತಾಸು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ.
ಕಾರವಾರದಲ್ಲಿ ಭಾರೀ ಮಳೆ: ಕಾರವಾರ ನಗರದಲ್ಲಿ ಸೋಮವಾರ ಬೆಳಗಿನ ಜಾವದಿಂದ ಭಾರೀ ಮಳೆ ಸುರಿಯುತ್ತಿದೆ. ಆಗಾಗ ಗಾಳಿ ಸಹ ಬೀಸುತ್ತಿದೆ. ಮಳೆ ಮಧ್ಯಾಹ್ನ 30 ನಿಮಿಷ ಬಿಡುವು ನೀಡಿದ್ದು ಬಿಟ್ಟರೆ, ನಂತರ ನಿರಂತರವಾಗಿ ಮಳೆ ಬೀಳುತ್ತಿದೆ. 2009ರಲ್ಲಿ ಬಿದ್ದ ಭಾರೀ ಮಳೆಯನ್ನು ಜನರು ನೆನಪಿಸಿಕೊಳ್ಳುತ್ತಿದ್ದು, ಮೋಘಸ್ಫೊಧೀಟದ ಕಾರಣ ಇಷ್ಟೊಂದು ಮಳೆ ಬೀಳುತ್ತಿರಬೇಕು ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ. ಕಡಲಲ್ಲಿ ಭಾರೀ ಅಲೆಗಳು ಏಳುತ್ತಿವೆ. ಮೀನುಗಾರಿಕೆ ಸ್ತಬ್ಧವಾಗಿದೆ.
ಅ. 7 ಮತ್ತು 8ರಂದು ಸಹ ಕರಾವಳಿಯಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜನರು ಕಟ್ಟೆಚ್ಚರದಿಂದ ಇರಬೇಕೆಂದು ಸೂಚಿಸಲಾಗಿದೆ.
ಕಾರವಾರ ತಾಲೂಕಿನಲ್ಲಿ ಮಳೆಯಿಂದ ಹಾನಿಗೆ ತುತ್ತಾದ 11 ಮನೆಗಳ ಮಾಲೀಕರಿಗೆ 2,35,000 ರೂ. ಪರಿಹಾರ ವಿತರಿಸಲಾಗಿದೆ. 4 ಪ್ರಕರಣಗಳು ಪರಿಹಾರ ವಿತರಣೆಯ ಪರಿಶೀಲನೆಯಲ್ಲಿವೆ. ಮಾಜಾಳಿಯಲ್ಲಿ ರವಿವಾರ ಸಂಜೆ ಮನೆಯೊಂದರ ಮೇಲೆ ಮರ ಬಿದ್ದು 2 ಲಕ್ಷ ರೂ. ಹಾನಿಯಾಗಿದೆ ಎಂದು ಹೇಳಲಾಗಿದ್ದು, ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತಾಲೂಕಿನಲ್ಲಿ ಮಳೆಯಿಂದ ಓರ್ವರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ 5 ಲಕ್ಷ ರೂ .ಪರಿಹಾರ ವಿತರಿಸಲಾಗಿದೆ. 18 ಗ್ರಾಮ ಪಂಚಾಯತ್ ಮತ್ತು 1 ನಗರಸಭೆಯ ವ್ಯಾಪ್ತಿಯಲ್ಲಿ ಮಳೆಯ ಹಾನಿಯ ಬಗ್ಗೆ ನಿಗಾ ಇಡಲು 14 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರಕೃತಿ ವಿಕೋಪ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 18 ಲಕ್ಷ ರೂ. ಹಾಗೂ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ 25 ಲಕ್ಷ ರೂ. ಹಣವಿದ್ದು, ಮಳೆ ಹಾನಿ ನಿರ್ವಹಿಸಲು ಹಣದ ಕೊರತೆಯಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.