Advertisement

“ಸಾಮಾಜಿಕ ಹೊಣೆಗಾರಿಕೆ’ಪ್ರದರ್ಶಿಸಿದ ಕರಾವಳಿಯ ಕೈಗಾರಿಕೆಗಳು

09:45 PM May 06, 2021 | Team Udayavani |

ಮಹಾನಗರ: ಕೋವಿಡ್ ಹಿನ್ನೆಲೆಯಲ್ಲಿ ಇಡೀ ದೇಶವೇ ಆರೋಗ್ಯದ ತುರ್ತು ಪರಿಸ್ಥಿತಿ ಎದುರಿಸುತ್ತಿರಬೇಕಾದರೆ, ಜನರ ಪ್ರಾಣ ರಕ್ಷಣೆಗೆ ತುರ್ತಾಗಿ ಸ್ಪಂದಿಸುವಲ್ಲಿ ಮುಂಚೂಣಿಯಲ್ಲಿರುವ ಕರಾವಳಿ ಭಾಗದ ಕೆಲವು ಪ್ರತಿಷ್ಠಿತ ಕೈಗಾರಿಕೆಗಳು ಇದೀಗ ಇತರರಿಗೆ ಸ್ಫೂರ್ತಿಯಾಗುವ ಜತೆಗೆ ಮಾದರಿ ಎನಿಸಿಕೊಳ್ಳುತ್ತಿವೆ.

Advertisement

ಏಕೆಂದರೆ, ಕೋವಿಡ್ ಸೋಂಕು ವ್ಯಾಪಕಗೊಳ್ಳುತ್ತಿರುವುದರಿಂದ ಆಕ್ಸಿಜನ್‌ ಸಹಿತ ನಾನಾ ರೀತಿಯ ವೈದ್ಯಕೀಯ ಸವಲತ್ತು-ಸಾಧನಗಳಿಗೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಅಭಾವದ ಸವಾಲು ಎದುರಾಗುತ್ತಿದೆ. ಹೀಗಿರುವಾಗ, ಜಿಲ್ಲೆಯ ವಿವಿಧ ಕಂಪೆನಿಗಳು ತುರ್ತಾಗಿ ಜಿಲ್ಲಾಡಳಿತದ ಜತೆ ಕೈಜೋಡಿಸಿಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಆಗಬೇಕಾದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಶೀಘ್ರ ಅನುಷ್ಠಾನಕ್ಕೆ ಮುಂದಡಿ ಇಟ್ಟಿರುವುದು ಗಮನಾರ್ಹ. ಆ ಮೂಲಕ, ಈ ಕಂಪೆನಿಗಳು ಜಿಲ್ಲೆಯ ಜನರಿಗಾಗಿ ಅಕ್ಷರಶಃ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸುತ್ತಿವೆ.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿಯೂ ಎಂಆರ್‌ಪಿಎಎಲ್‌ ಸಹಿತ ಜಿಲ್ಲೆಯಲ್ಲಿರುವ ಕೆಲವು ಬೃಹತ್‌ ಕೈಗಾರಿಕೆಗಳು ಆಕ್ಸಿಜನ್‌ ಬೆಡ್‌, ಆ್ಯಂಬುಲೆನ್ಸ್‌ ಮತ್ತಿತರ ಸೌಲಭ್ಯಗಳನ್ನು ಒದಗಿಸಿತ್ತು. ಆದರೆ ಈ ಬಾರಿ ಜಿಲ್ಲೆಯ ಎಲ್ಲ ಬೃಹತ್‌ ಸಂಸ್ಥೆಗಳು ಮಹತ್ವದ ಕೊಡುಗೆ ನೀಡಲು ಮುಂದೆ ಬಂದಿವೆ. ಅದರಲ್ಲಿಯೂ ವಿಶೇಷವೆಂದರೆ, ಎಂಆರ್‌ಪಿಎಲ್‌ನಂಥ ಕಂಪೆನಿಗಳು ಈಗಾಗಲೇ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಉತ್ಪಾದನ ಘಟಕ ಸ್ಥಾಪನೆಗೆ ಕಾರ್ಯೋನ್ಮುಖವಾಗಿದೆ.

ಪ್ರತೀದಿನ 8,670 ಲೀ ಆಕ್ಸಿಜನ್‌ ಲಭ್ಯ :

ವಿವಿಧ ಕಂಪೆನಿಗಳ ನೆರವಿನಿಂದ ಮುಂದಿನ 2 ತಿಂಗಳೊಳಗೆ ಪ್ರತೀದಿನ 8,670 ಲೀ. ಆಕ್ಸಿಜನ್‌ ಉತ್ಪಾದನೆಗೆ ಉದ್ದೇಶಿಸಲಾಗಿದೆ. ವೆನ್ಲಾಕ್‌ ಆಸ್ಪತ್ರೆಯಲ್ಲಿ ಎಂಆರ್‌ಪಿಎಲ್‌ ವತಿಯಿಂದ ಪ್ರತೀದಿನ 7 ಸಾವಿರ ಲೀ. ಸಾಮರ್ಥ್ಯದ (192 ಜಂಬೋ ಸಿಲಿಂಡರ್‌) ಆಕ್ಸಿಜನ್‌ ಘಟಕ ನಿರ್ಮಾಣ ಆರಂಭವಾಗಿದೆ. ಜಿಲ್ಲೆಯ ವಿವಿಧೆಡೆ ಎಂಸಿಎಫ್‌ ವತಿಯಿಂದ ತಲಾ 80 ಲೀಟರ್‌ ಸಾಮರ್ಥ್ಯದ (ತಲಾ 17 ಜಂಬೋ ಸಿಲಿಂಡರ್‌)ಘಟಕ,  ಗೈಲ್‌ ಸಂಸ್ಥೆಯ ವತಿಯಿಂದ 560 ಲೀ. ಸಾಮರ್ಥ್ಯ (51 ಜಂಬೋ ಸಿಲಿಂಡರ್‌), ಕೆಐಒಸಿಎಲ್‌ ವತಿಯಿಂದ 560 ಲೀಟರ್‌ ಸಾಮರ್ಥ್ಯದ (51 ಜಂಬೋ ಸಿಲಿಂಡರ್‌) ಘಟಕ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ. ಇದರ ಜತೆಗೆ ಸುಳ್ಯದಲ್ಲಿ ಸರಕಾರದ ವತಿಯಿಂದ 85 ಲಕ್ಷ ರೂ. ವೆಚ್ಚದಲ್ಲಿ 85 ಜಂಬೋ ಸಿಲಿಂಡರ್‌ ಸಾಮರ್ಥ್ಯದ ಘಟಕ ನಿರ್ಮಾಣವಾಗಲಿದೆ.

Advertisement

ಜಿಲ್ಲೆಯಲ್ಲಿ ಕೋವಿಡ್‌ನ‌ ಮುಂದಿನ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಸಂಸದ ನಳಿನ್‌ ಕುಮಾರ್‌ ಕಟೀಲು, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಸೂಚನೆಯಂತೆ ಎಂಆರ್‌ಪಿಎಲ್‌ ಸಹಿತ ಜಿಲ್ಲೆಯ 9 ಕೈಗಾರಿಕೆ ಸಂಸ್ಥೆಗಳು ಸಿಎಸ್‌ಆರ್‌ (ಸಾಮಾಜಿಕ ಬದ್ಧತ ನಿಧಿ)ಅಡಿಯಲ್ಲಿ ಜಿಲ್ಲೆಯ ನೆರವಿಗೆ ಮುಂದೆ ಬಂದಿದೆ.

ವಿವಿಧ ಸಂಸ್ಥೆಗಳ ಕೊಡುಗೆಗಳು :

ಸಂಸ್ಥೆಯ ಹೆಸರು        ಕೊಡುಗೆಗಳು

ಎಂಆರ್‌ಪಿಎಲ್‌ : ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಯಲ್ಲಿ 9,301 ಪಿಎಂ ಸಾಮರ್ಥ್ಯದ ಆಕ್ಸಿಜನ್‌ ಘಟಕ

ಎಂಸಿಎಫ್‌      :    ಮಂಗಳೂರಿನ ಇಎಸ್‌ಐ ಆಸ್ಪತ್ರೆ, ಬಂಟ್ವಾಳ ತಾ| ಆಸ್ಪತ್ರೆಯಲ್ಲಿ 801 ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನ ಘಟಕ

ಗೇಲ್‌ ಇಂಡಿಯಾ : ಪುತ್ತೂರು-ಬೆಳ್ತಂಗಡಿಯಲ್ಲಿ ಆಮ್ಲಜನಕ ಉತ್ಪಾದನ ಘಟಕ

 ಕೆಐಒಸಿಎಲ್‌ : ಉಪ್ಪಿನಂಗಡಿ-ಮೂಡಬಿದ್ರೆಗಳಲ್ಲಿ ಆಮ್ಲಜನಕ ಉತ್ಪಾದನ ಘಟಕ

ಇನ್ಫೋಸಿಸ್‌ : ಉಳ್ಳಾಲದಲ್ಲಿ ವಿದ್ಯುತ್‌ ಚಿತಾಗಾರ

ಎಸ್‌ಇಝಡ್‌ ವಲಯದ ಕೈಗಾರಿಕೆ ಘಟಕಗಳು : ಜಿಲ್ಲೆಯಾದ್ಯಂತ ಆ್ಯಂಬುಲೆನ್ಸ್‌ ನಿರ್ವಹಣೆ, ಬಾಡಿಗೆ ಆಧಾರದಲ್ಲಿ ಪಡೆದು ಆವಶ್ಯಕತೆಗೆ ಅನುಗುಣವಾಗಿ ಕ್ರಮ

ಭಾರತೀಯ ಉದ್ಯಮಗಳ ಒಕ್ಕೂಟ ಮಂಗಳೂರು ಘಟಕ (ಸಿಐಐ) : ಬಾಡಿಗೆ ಆಧಾರದಲ್ಲಿ 100 ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆ

ಎನ್‌ಎಂಪಿಟಿ : 20 ಡ್ಯೂರೋ ಸಿಲಿಂಡರ್‌

ಬಿಎಎಸ್‌ಎಫ್‌ : 20 ಡ್ಯೂರೋ ಸಿಲಿಂಡರ್‌

ದ.ಕ. ಜಿಲ್ಲೆಯಲ್ಲಿ ವೈದ್ಯಕೀಯ ಸಂಬಂಧಿತ ಕಾರ್ಯಕ್ಕೆ ವಿವಿಧ ಕಂಪೆನಿಯವರು ನೆರವು ಘೋಷಿಸಿದ್ದು, ಈಗಾಗಲೇ ಈ ಯೋಜನೆಯ ಅನುಷ್ಠಾನಕ್ಕೆ ಕಾರ್ಯಾದೇಶವನ್ನೂ ನೀಡುತ್ತಿದ್ದಾರೆ. ಈ ಪೈಕಿ ವೆನಾÉಕ್‌ನಲ್ಲಿ ಎಂಆರ್‌ಪಿಎಲ್‌ ವತಿಯಿಂದ ನಿರ್ಮಾಣವಾಗುವ ಆಕ್ಸಿಜನ್‌ ಘಟಕ ಯೋಜನೆಗೆ ಈಗಾಗಲೇ ಪೂರ್ವಭಾವಿ ಸಿದ್ಧತೆ ಕೂಡ ಆರಂಭವಾಗಿದೆ. ಜೂನ್‌ ಮೊದಲ ವಾರದಲ್ಲಿ ಈ ಘಟಕ ಪೂರ್ಣವಾಗುವ ನಿರೀಕ್ಷೆಯಿದ್ದು, ಉಪಯೋಗಕ್ಕೆ ದೊರೆಯಲಿದೆ.  -ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

 

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next