Advertisement

ಕರಾವಳಿ ಭಾಗದಲ್ಲಿ ಸರಕಾರಿ ಆಯುರ್ವೇದ ಕಾಲೇಜು: ಆಗ್ರಹ

12:49 AM Sep 10, 2024 | Team Udayavani |

ಮಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಕ್ಷೇತ್ರ ದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಬರುವ ದ.ಕ. ಜಿಲ್ಲೆಗೆ ಸರಕಾರಿ ಆಯುರ್ವೇದ ಕಾಲೇಜು (ಬೋಧಕ ಆಸ್ಪತ್ರೆ ಸಹಿತ) ಒದಗಿಸಬೇಕು ಎನ್ನುವ ಬೇಡಿಕೆಗೆ ಈಗ ಮತ್ತಷ್ಟು ಬಲಗೊಳ್ಳುತ್ತಿದೆ.

Advertisement

ಪ್ರಸ್ತುತ ರಾಜ್ಯದಲ್ಲಿ 100 ವರ್ಷ ಹಳೆಯ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು (160 ಬೆಡ್‌), 75 ವರ್ಷ ಹಳೆಯ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು (180 ಬೆಡ್‌), ತಾರಾನಾಥ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಬಳ್ಳಾರಿ (150) ಕಾರ್ಯ ನಿರ್ವಹಿಸುತ್ತಿದೆ. ಹಾವೇರಿಯ ಸವಣೂರಿನಲ್ಲಿ ಸರಕಾರಿ ಆಯುರ್ವೇದ ಮಹಾವಿದ್ಯಾಲಯ (150) ಪ್ರಸ್ತಾವನೆಯಲ್ಲಿದೆ. ಶಿವಮೊಗ್ಗದಲ್ಲಿ ಆಯುಷ್‌ ವಿಶ್ವವಿದ್ಯಾಲಯ ನಿರ್ಮಾಣ ಹಂತದಲ್ಲಿದೆ. ಇದು ಬಿಟ್ಟರೆ ಬೇರೆ ಯಾವುದೇ ಪ್ರಸ್ತಾವನೆ ಕಂಡುಬಂದಿಲ್ಲ. ಕರಾವಳಿಯಲ್ಲಿ ಇದುವರೆಗೆ ಯಾವುದೇ ಬೇಡಿಕೆ ಇರಲಿಲ್ಲ. ಕೆಲವು ಖಾಸಗಿ ಆಯುರ್ವೇದ ಕಾಲೇಜುಗಳು ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿವೆ.

ಆಯುರ್ವೇದ ಪದ್ಧತಿಯಲ್ಲಿ ಯಾವುದೇ ಅಡ್ಡ ಪರಿಣಾಮ ವಿಲ್ಲದೆ ಉತ್ತಮ ಚಿಕಿತ್ಸೆ ಲಭ್ಯವಿದೆ. ಸದ್ಯ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗೆಟಕುವ ದರದಲ್ಲಿ ಆಯುರ್ವೇದ ಚಿಕಿತ್ಸೆಗೆ ಕೇರಳವನ್ನೇ ಅವಲಂಬಿಸುವಂತಾಗಿದೆ.

ಅಲ್ಲದೆ ಕರಾವಳಿ ಕರ್ನಾಟಕದ ಆಯುರ್ವೇದ ವೈದ್ಯ ವಿಷಯಾ ಸಕ್ತ ವಿದ್ಯಾರ್ಥಿಗಳು ಉತ್ತಮ ವೈದ್ಯಕೀಯ ಶಿಕ್ಷಣ ಪಡೆ ಯಲು ರಾಜ್ಯದ ಬೇರೆ ಜಿಲ್ಲೆಗಳಲ್ಲಿರುವ ಬೆರಳೆಣಿಕೆ ಸಂಖ್ಯೆಯ ಸರಕಾರಿ ಕಾಲೇಜುಗಳು ಹಾಗೂ ಖಾಸಗಿ ಕಾಲೇಜು ಗಳಿಗೆ ತೆರಳಬೇಕಾಗುತ್ತದೆ. ಜತೆಗೆ ಹೊರರಾಜ್ಯ ಗಳನ್ನು ಅವಲಂಬಿಸುತ್ತಿದ್ದಾರೆ.

ಕರಾವಳಿಯ ಭಾಗದಲ್ಲಿ ಆಯುರ್ವೇದ ಸರಕಾರಿ ಕಾಲೇಜು ಆರಂಭಿಸಿದರೆ ಈ ಭಾಗದ ವಿದ್ಯಾರ್ಥಿಗಳಿಗೆ ಆಯುರ್ವೇದ ಶಿಕ್ಷಣಕ್ಕೆ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಬಹುದು. ಜತೆಗೆ ಗುಣಮಟ್ಟದ ಆಯುರ್ವೇದ ಚಿಕಿತ್ಸೆ ದೊರೆಯುವುದಕ್ಕೂ ಉಪಯೋಗವಾಗಲಿದೆ. ಅಲ್ಲದೆ ಉತ್ತಮ ಸಂಶೋಧನೆಗಳು ನಡೆಯಲೂ ಸಹಕಾರಿಯಾಗುತ್ತದೆ.

Advertisement

ಪದವೀಧರರಿಂದ ಯತ್ನ
ಈ ನಿಟ್ಟಿನಲ್ಲಿ ಕರಾವಳಿ ಭಾಗದ ಆಯುರ್ವೇದ ಪದವೀಧರರು ಸರಕಾರಿ ಆಯುರ್ವೇದ ಕಾಲೇಜು ಸ್ಥಾಪನೆ ಕುರಿತು ಸರಕಾರಗಳು ಪ್ರಯತ್ನಿಸುವಂತೆ ಒತ್ತಾಯ ಹೇರ ತೊಡಗಿದ್ದಾರೆ. ಹಿಂದಿನ ಸಂಸದ ನಳಿನ್‌ ಕುಮಾರ್‌ ಕಟೀಲು ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೂ ಹಿಂದೆ ಮನವಿ ಕೊಡಲಾಗಿತ್ತು. ಈಗ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೂ ಮನವಿ ಸಲ್ಲಿಸಲಾಗಿದೆ.

ಅನುದಾನಿತ ಕಾಲೇಜುಗಳೂ ಇಲ್ಲ
ಕರಾವಳಿ ಕರ್ನಾಟಕ ಭಾಗದಲ್ಲಿ ಖಾಸಗಿ ಆಯುರ್ವೇದ ಕಾಲೇಜುಗಳಷ್ಟೇ ಇವೆ, ಅನುದಾನಿತ ಕಾಲೇಜುಗಳೂ ಇಲ್ಲ. ಹಾಗಾಗಿ ಕರಾವಳಿ ಭಾಗದಲ್ಲಿ ಸರಕಾರಿ ಆಯುರ್ವೇದ ಕಾಲೇಜು ಹಾಗೂ ಬೋಧಕ ಆಸ್ಪತ್ರೆ ಸ್ಥಾಪಿಸಬೇಕು. ಇದರಿಂದ ಆ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾದೀತು. ಅಲ್ಲದೆ ಗರಿಷ್ಠ ಸಂಖ್ಯೆಯಲ್ಲಿರುವ ಆಯುರ್ವೇದ ಆಸಕ್ತರಿಗೂ ಉಚಿತವಾಗಿ ಚಿಕಿತ್ಸೆ ಪಡೆಯಲು ಸಾಧ್ಯ.
-ಡಾ| ಮಂಜುನಾಥ ಪೂಜಾರಿ, ಅಧ್ಯಕ್ಷರು, ಆಯುರ್ವೇದ ಸ್ನಾತಕೋತ್ತರ ಪದವೀಧರರ ಸಂಘ

Advertisement

Udayavani is now on Telegram. Click here to join our channel and stay updated with the latest news.