Advertisement

ಕುಸಿತದ ಹಾದಿಯಲ್ಲಿ ಕರಾವಳಿಯ ಮತ್ಸೋದ್ಯಮ !

10:03 PM Jan 18, 2020 | mahesh |

ಮಹಾನಗರ: ಕರಾವಳಿ ಯಲ್ಲಿ ಅಸಂಖ್ಯ ಜನರ ಪಾಲಿಗೆ ಜೀವನಾಧಾರವಾಗಿರುವ ಮತ್ಸೋದ್ಯಮ ವರ್ಷದಿಂದ ವರ್ಷಕ್ಕೆ ಸೊರಗುತ್ತಿದ್ದು, ನಾನಾ ಕಾರಣಗಳಿಂದ ನಿರೀಕ್ಷಿತ ರೀತಿಯಲ್ಲಿ ಮೀನುಗಾರಿಕೆ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಮೀನು ಲಭ್ಯತೆ ಯಲ್ಲಿಯೂ ಸಾಕಷ್ಟು ಕುಸಿತವಾಗಿ ನಷ್ಟದ ಭೀತಿ ಉಂಟಾಗಿದೆ.

Advertisement

ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮೀನಿನ ಲಭ್ಯತೆ ಬಹುತೇಕ ಎಲ್ಲ ಮೀನುಗಾರರಿಗೂ ಕಡಿಮೆಯಾಗಿದೆ. ಮುಂಗಾರು ಮಳೆ ಶುರುವಾಗುತ್ತಿದ್ದಂತೆ ಪಶ್ಚಿಮ ಕರಾವಳಿಯಲ್ಲಿ ಯಾಂತ್ರೀಕೃತ ಮೀನು ಗಾರಿಕೆಗೆ ಎರಡು ತಿಂಗಳ ನಿಷೇಧ ವಿರುತ್ತದೆ. ಆಗಸ್ಟ್‌ನಲ್ಲಿ ಪ್ರಾರಂಭ ಗೊಂಡಿದ್ದ ಮೀನುಗಾರಿಕೆಗೆ ಇದೀಗ ಐದು ತಿಂಗಳುಗಳು ಪೂರ್ಣಗೊಂಡಿದ್ದು, ಇನ್ನು ಈ ಋತುವಿನ ಮೀನುಗಾರಿಕೆ ಕೊನೆಗೊಳ್ಳುವುದಕ್ಕೆ ಕೇವಲ ನಾಲ್ಕು ತಿಂಗಳಷ್ಟೇ ಬಾಕಿ. ಐದೂವರೆ ತಿಂಗಳು ಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಕರಾವಳಿ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಲಭಿಸದೆ ಮತ್ಸೋದ್ಯಮದ ವ್ಯಾಪಾರ-ವಹಿವಾಟು ಗಣನೀಯವಾಗಿ ಕುಸಿದೆ ಎನ್ನುವುದು ವಾಸ್ತವ. ಇದೀಗ, ಹೆಚ್ಚಿನ ಕಾರ್ಮಿಕರು ರಜೆಯ ಮೇಲೆ ತಮ್ಮ ಊರುಗಳಿಗೆ ತೆರಳಿರುವ ಕಾರಣ ಮಂಗಳೂರಿನ ಧಕ್ಕೆ ಸಹಿತ ಹಲವು ಮೀನುಗಾರಿಕಾ ಬಂದರಿನಲ್ಲಿ ಬೋಟ್‌ಗಳು ಲಂಗರು ಹಾಕಿವೆ.

ಕಳೆದ ಡಿಸೆಂಬರ್‌ ತಿಂಗಳವರೆಗಿನ ಅಂಕಿ - ಅಂಶವನ್ನು ಗಮನಿಸಿದಾಗ ಮೀನಿನ ಲಭ್ಯತೆ ಪ್ರಮಾಣ ಕಳೆದ ವರ್ಷದ ಗುರಿ ಯನ್ನು ತಲುಪುವುದು ಅನುಮಾನ.

ಇಲಾಖೆ ನೀಡಿರುವ ಅಂಕಿ-ಅಂಶದಂತೆ, 2019ರ ಎಪ್ರಿಲ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,35,734 ಮೆಟ್ರಿಕ್‌ ಟನ್‌ ಮೀನು ಹಿಡಿಯಲಾಗಿದ್ದು, 1,510 ಕೋಟಿ ರೂ.ಗಳಷ್ಟು ವ್ಯವಹಾರವಾಗಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿಯೂ 86,265 ಮೆ.ಟನ್‌ ಮೀನಿನ ಲಭ್ಯತೆಯಾಗಿದ್ದು, ಸುಮಾರು 900 ಕೋಟಿ ರೂ. ವ್ಯವಹಾರವಾಗಿದೆ. ಏಕೆಂದರೆ, 2018ರ ಮೀನುಗಾರಿಕಾ ಋತುವಿಗೆ ಹೋಲಿಸಿ ಈ ಬಾರಿಯ ಋತುವಿನ ಡಿಸೆಂಬರ್‌ ಅಂತ್ಯದವರೆಗೆ ಉಭಯ ಜಿಲ್ಲೆಗಳಲ್ಲಿ ಒಟ್ಟು ಸುಮಾರು 756 ಕೋಟಿ ರೂ. ವಹಿವಾಟಿನ ವ್ಯತ್ಯಾಸವಿದೆ. ಹೀಗಿರುವಾಗ, ಇನ್ನು ಬಾಕಿ ಉಳಿದಿರುವ ಐದು ತಿಂಗಳಲ್ಲಿ ಈ ಗುರಿಯನ್ನು ತಲುಪುವುದು ಕಷ್ಟಸಾಧ್ಯ ಎನ್ನುತ್ತಾರೆ ಇಲ್ಲಿನ ಮೀನುಗಾರರು.

ವ್ಯವಹಾರ ಕಡಿಮೆಗೆ ಕಾರಣವೇನು?
ಮಂಗಳೂರಿನ ಬಂದರಿನಿಂದ ಸಾಮಾನ್ಯ ವಾಗಿ ಮಹಾರಾಷ್ಟ್ರ ರಾಜ್ಯದ ಕಡೆಗೆ ಮೀನುಗಾರಿಕೆಗೆ ಅನೇಕ ಬೋಟುಗಳು ತೆರಳು ತ್ತವೆ. ಒಂದು ಬೋಟು ಸುಮಾರು 7 ಲಕ್ಷ ರೂ. ಬೆಲೆಯ ಮೀನುಗಳನ್ನು ಹೊತ್ತು ತರುತ್ತದೆ. ಆದರೆ ಈ ಬಾರಿ ಹವಾಮಾನ ವೈಪರಿತ್ಯದಿಂದಾಗಿ ಮೀನುಗಾರಿಕೆ ತೀರಾ ಕುಸಿದಿದೆ. ಜನವರಿಯಿಂದ ಆಗಸ್ಟ್‌ ತಿಂಗಳುವರೆಗೆ ಮೀನುಗಾರಿಕೆ ಕುದುರುವ ಸಮಯ. ಆದರೆ, ಈ ಸಮಯದಲ್ಲೇ ಕರಾವಳಿ ಭಾಗದಲ್ಲಿ ಸಾಲು ಸಾಲಾಗಿ 4 ಚಂಡಮಾರುತ ಉಂಟಾದ ಪರಿ ಣಾಮ ಮೀನುಗಾರಿಕೆ ನಡೆಸಲು ಸಾಧ್ಯವಾಗಲಿಲ್ಲ. ಇನ್ನು, ಕೆಲವು ತಿಂಗಳ ಹಿಂದೆ ಮೀನುಗಾರಿಕಾ ಲಾರಿಗಳ ಮುಷ್ಕರ ಹಿನ್ನೆಲೆಯಲ್ಲೂ ಮೀನು ಮಾರಾಟ ಕಡಿಮೆಯಿತ್ತು.

Advertisement

ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಸುಮಾರು 1,200 ದಷ್ಟು ಬೋಟ್‌ಗಳಿವೆ. 30 ಸಾವಿರದಷ್ಟು ಕಾರ್ಮಿಕರು ನೇರವಾಗಿ ಕೆಲಸ ಮಾಡುತ್ತಿದ್ದಾರೆ. ಪರೋಕ್ಷ ವಾಗಿ ಇಷ್ಟೇ ಮಂದಿ ಇದನ್ನು ಅವಲಂಭಿ ಸಿದ್ದಾರೆ. ಸಾಮಾನ್ಯವಾಗಿ ಒಂದು ಬೋಟು ಸಮುದ್ರದಲ್ಲಿ ಮೀನು ಹಿಡಿದು ತಂದರೆ, ಅದರಿಂದ ಐಸ್‌ ಮಾರಾಟಗಾರರು, ಬೋಟುಗಳಿಂದ ಮೀನು ತೆಗೆಯುವ ಕಾರ್ಮಿಕರಿಗೂ ಕೆಲಸ ಸಿಗುವ ಜತೆಗೆ ವ್ಯಾಪಾರವೂ ಆಗುತ್ತದೆ. ಆದರೆ ಬೋಟು ಗಳು ಲಂಗರು ಹಾಕಿರುವುದರಿಂದ ಕೇವಲ ಮೀನುಗಾರರಿಗೆ ಮಾತ್ರ ವಲ್ಲ ಮೀನುಗಾರಿಕೆಯನ್ನು ಅವಲಂಬಿಸಿ ಕೊಂಡು ಜೀವನ ಸಾಗಿಸುತ್ತಿರುವ ಇತರೆ ಕಾರ್ಮಿಕರು ಹಾಗೂ ವ್ಯಾಪಾರಸ್ಥರನ್ನು ಕೂಡ ಅದು ತೀವ್ರವಾಗಿ ಬಾಧಿಸಿದೆ.

ನಷ್ಟವೇ ಅಧಿಕ
ಹವಾಮಾನ ವೈಪರಿತ್ಯದಿಂದಾಗಿ ಮೀನುಗಾರಿಕೆಗೆ ದೊಡ್ಡ ಪೆಟ್ಟು ಬಿದ್ದಿದ್ದು, ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೋಟ್‌ಗಳು ಒಂದು ಬಾರಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದರೆ 7 ಲಕ್ಷ ರೂ. ಮೌಲ್ಯದ ಮೀನು ತರಲೇಬೇಕು. ಏಕೆಂದರೆ, ಸುಮಾರು 4 ಲಕ್ಷ ರೂ. ನಷ್ಟು ಖರ್ಚು ಕೇವಲ ಬೋಟ್‌ಗಳ ಡಿಸೇಲ್‌ಗೆ ತಗಲುತ್ತದೆ.
 - ಮೋಹನ್‌ ಬೆಂಗ್ರೆ, ಮೀನುಗಾರಿಕಾ ಮುಖಂಡ

ಅರ್ಧದಷ್ಟು ಬೋಟ್‌ಗಳು ದಡದಲ್ಲಿವೆ
“ಮಂಗಳೂರಿನ ಬಂದರಿನಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಶೇ.60ರಷ್ಟು ಬೋಟ್‌ಗಳು ಈಗ ದಡದಲ್ಲಿವೆ. ಮೀನುಗಾರಿಕೆಗೆ ತೆರಳುವ ಹೆಚ್ಚಿನ ಮೀನು ಕಾರ್ಮಿಕರು ತಮಿಳುನಾಡು, ಆಂಧ್ರಪ್ರದೇಶ ಮೂಲದವರು. ಪೊಂಗಲ್‌ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಮೀನುಗಾರರು ತಮ್ಮ ಊರುಗಳಿಗೆ ತೆರಳ್ದಿದಾರೆ. ಏನಿದ್ದರೂ ಈ ತಿಂಗಳ ಕೊನೆಯವರೆಗೆ ಬೋಟ್‌ಗಳು ಮೀನುಗಾರಿಕೆಗೆ ತೆರಳುವುದು ಕಷ್ಟ. ಆದ್ದರಿಂದ ಮುಂದಿನ ದಿನ ಮೀನಿನ ದರ ತುಸು ಹೆಚ್ಚಳವಾಗಬಹುದು’ ಎಂದು ಮೀನುಗಾರ ಮುಖಂಡರು ಉದಯವಾಣಿಗೆ ತಿಳಿಸಿದ್ದಾರೆ.

ಹವಾಮಾನ ವೈಪರಿತ್ಯದಿಂದ ಮೀನುಗಾರಿಕೆ ಕುಸಿತ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹವಾಮಾನ ವೈಪರಿತ್ಯದಿಂದ ಮೀನುಗಾರಿಕೆಗೆ ಪೆಟ್ಟು ಬಿದ್ದಿದೆ. ಮೀನುಗಾರಿಕೆಯಲ್ಲಿ ದೊರೆತ ಸಣ್ಣ ಮೀನುಗಳನ್ನು ಫಿಶ್‌ ಮೀಲ್‌ ಪ್ಲಾಂಟ್‌/ಸುರುಮಿ ಘಟಕಗಳಿಗೆ ಕಚ್ಛಾ ವಸ್ತುವಾಗಿ ಉಪಯೋಗಿಸಲಾಗುತ್ತಿದೆ. ಸಣ್ಣ ಮೀನುಗಳನ್ನು ಹಿಡಿಯುವುದರಿಂದ ಮುಂದೆ ಮೀನಿನ ಸಂಪತ್ತು ಹೆಚ್ಚಳಕ್ಕೆ ತೊಂದರೆಯಾಗಿ ಮೀನಿನ ಉತ್ಪಾದನೆಯು ಸಹ ಕಡಿಮೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಮೀನಿನ ಕನಿಷ್ಠ ಕಾನೂನಾತ್ಮಕ
ಗಾತ್ರವನ್ನು ಸರಕಾರ ನಿಗದಿಗೊಳಿಸಿದೆ.
 - ತಿಪ್ಪೇಸ್ವಾಮಿ ಡಿ., ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ-ಮಂಗಳೂರು

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next