ಪುಣೆ: ಪುಣೆಯಲ್ಲಿ ಕನ್ನಡಿಗರ ಹತ್ತು ಹಲವು ಸಂಘ-ಸಂಸ್ಥೆಗಳಿದ್ದು ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ತುಳು-ಕನ್ನಡಿಗರನ್ನು ಒಗ್ಗೂಡಿಸುವುದರಲ್ಲಿ ತೊಡಗಿಸಿಕೊಂಡಿವೆ. ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ಸದಾ ಹೊಸತನದ ಅನ್ವೇಷಣೆಯಲ್ಲಿ ತೊಡಗಿಕೊಂಡಿರುವ ಹವ್ಯಾಸಿ ಕಲಾವೃಂದ ಪಿಂಪ್ರಿ -ಚಿಂಚಾÌಡ್‌ನ ನೂತನ ಪರಿಕಲ್ಪನೆಯಲ್ಲಿ ಪಡಿಮೂಡಿದ ತುಳುನಾಡª ತಮ್ಮನ -ಕರಾವಳಿ ಉತ್ಸವವು ಜ. 8 ರಂದು ದೇಹುರೋಡ್ ಸಮೀರಾ ಲಾನ್ಸ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ತುಳುನಾಡಿನ ರೀತಿಯ ತೆಂಗಿನ ಗರಿಗಳಿಂದ ಅಲಂಕೃತ ಸ್ವಾಗತ ಕಮಾನಿನೊಂದಿಗೆ ಹಾಗೂ ಯಕ್ಷಗಾನ ವೇಷಧಾರಿ ಕಲಾವಿದರು ಚೆಂಡೆ, ಕೊಂಬು ವಾದ್ಯಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಭವ್ಯವಾದ ವಿದ್ಯುದ್ದೀಪಗಳಿಂದಲಂಕೃತವಾದ ವೇದಿಕೆಯು ತುಳು-ಕನ್ನಡಿಗರ ಗಮನಸೆಳೆಯಿತು. ಪುಣೆಯ ವಿವಿಧ ಸಂಘ ಸಂಸ್ಥೆಗಳ ಗಣ್ಯಾತಿಗಣ್ಯರು ಅತಿಥಿಗಳು ಪ್ರಾರಂಭದಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಟ್ರಾಕ್ಟಿವ್ ಮೆಲೋಡೀಸ್ ಸಂಗೀತ ತಂಡ ಮಂಗಳೂರು ಕಲಾವಿದರಿಂದ ವೈವಿಧ್ಯಮಯ ತುಳು -ಕನ್ನಡ ಹಾಡುಗಳ ರಸಮಂಜರಿ ಕಾರ್ಯಕ್ರಮವು ಸೇರಿದ್ದ ಕಲಾರಸಿಕರ ಮನಸೂರೆಗೊಂಡಿತ್ತು. ತುಳು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಪಿಲಿಬೈಲ… ಯಮುನಕ್ಕ ಚಲನಚಿತ್ರದ ನಾಯಕ ನಟ ಪೃಥ್ವಿ ಅಂಬರ್, ನಟಿ ಸೋನಾಲಿ ಮೊಂತೆರೋ ಹಾಗೂ ಇಡೀ ಚಿತ್ರತಂಡದಿಂದ ಹಾಡು, ನೃತ್ಯ, ಹಾಸ್ಯ ಕಾರ್ಯಕ್ರಮಗಳು ನಡೆದವು. ಪುಣೆಯ ಪ್ರಸಿದ್ಧ ನೃತ್ಯ ಕಲಾವಿದ ಅಕ್ರಂ ಶೇಖ್ ಅವರಿಂದ ನೃತ್ಯ ಹಾಗೂ ಊರಿನ ಹುಲಿವೇಷ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಸುಧಾಕರ ಶೆಟ್ಟಿ ಪೆಲತ್ತೂರು ಮತ್ತು ಅರ್ಪಿತಾ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ವಿಶೇಷ ದೇಣಿಗೆ ನೀಡಿ ಸಹಕರಿಸಿದ ಗಣ್ಯರನ್ನು ಹವ್ಯಾಸಿ ಕಲಾವೃಂದದ ಸದಸ್ಯರು ಮೈಸೂರು ಪೇಟ ತೊಡಿಸಿ, ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಸಮ್ಮಾನಿಸಿದರು. ಹವ್ಯಾಸಿ ಕಲಾವೃಂದದ ಸದಸ್ಯರುಗಳಾದ ಜಯಾನಂದ ಶೆಟ್ಟಿ, ದಿನೇಶ್ ಶೆಟ್ಟಿ ಉಜಿರೆ, ಪ್ರಶಾಂತ್ ಶೆಟ್ಟಿ, ಅವಿನಾಶ್ ಶೆಟ್ಟಿ, ಸುಧಾಕರ ಶೆಟ್ಟಿ ಪೆಲತ್ತೂರು, ಚೇತನ್ ಶೆಟ್ಟಿ ಮೂಲ್ಕಿ, ಸಂತೋಷ್ ಶೆಟ್ಟಿ ಪೆರ್ಡೂರು, ಸತೀಶ್ ಶೆಟ್ಟಿ, ನಿಧೀಶ್ ಶೆಟ್ಟಿ ನಿಟ್ಟೆ, ಜೀವನ್ ಶೆಟ್ಟಿ ದೊಂಡೇರಂಗಡಿ, ದಿನೇಶ್ ಶೆಟ್ಟಿ ನಡಿಯೋಡಿಗುತ್ತು ಹಾಗೂ ತಾರಾನಾಥ ರೈ ಈಶ್ವರಮಂಗಲ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ರಾಕೇಶ್ ಶೆಟ್ಟಿ ಬೆಳ್ಳಾರೆ ಅವರು ವಿಶೇಷವಾಗಿ ಸಹಕರಿಸಿದರು.
ಕರಾವಳಿ ಉತ್ಸವದ ಮುಖ್ಯ ಅಂಗವಾದ ತುಳುನಾಡ ತಮ್ಮನದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ತುಳುನಾಡಿನ ಸಾಂಪ್ರದಾಯಿಕ ಸಸ್ಯಾಹಾರಿ ಹಾಗೂ ಮಾಂಸಾಹಾರಿ ವ್ಯಂಜನಗಳ ವಿವಿಧ ಕೌಂಟರುಗಳು ಲಾನ್ಸ್‌ನ ಸುತ್ತಮುತ್ತ ಅಳವಡಿಸಲಾಗಿದ್ದು, ಸೇರಿದ್ದ ಜನರಿಗೆ ಹೊಸ ಸವಿರುಚಿಯನ್ನು ನೀಡಿತು. ಮುಖ್ಯವಾಗಿ ವಿವಿಧ ರೀತಿಯ ಮೀನಿನ ವ್ಯಂಜನಗಳು, ಕೋರಿ ರೊಟ್ಟಿ, ಮರುವಾಯಿ ಪುಂಡಿ, ಆಪಂ, ನೀರ್‌ದೋಸೆ, ಸೇಮಿಗೆ, ಪತ್ರೊಡೆ, ವಿವಿಧ ರೀತಿಯ ಪಾಯಸಗಳು, ಗೆಂಡದಡ್ಡೆ, ಮೂಡೆ, ಬಂಗುಡೆ ಪುಳಿಮುಂಚಿ, ತಾಟೆಗಸಿ, ತಿಮರೆ ಚಟ್ನಿ, ಎಟ್ಟಿ ಚಟ್ನಿ, ಕಡ್ಲೆ ಮನೋಳಿ, ಬಸಳೆಗಸಿ ಮೊದಲಾದ ಹಲವು ಖಾದ್ಯಗಳು ಸೇರಿದ್ದವು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು