Advertisement

ಕರಾವಳಿ ಉತ್ಸವ: ನೆಟ್‌ಬಾಲ್‌ ಪಂದ್ಯಾಟಕ್ಕೆ ಚಾಲನೆ 

11:32 AM Dec 29, 2017 | Team Udayavani |

ಮಹಾನಗರ: ಕರಾವಳಿ ಉತ್ಸವ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ ಮಂಗಳೂರು ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನೆಟ್‌ ಬಾಲ್‌ ಪಂದ್ಯಾಟದ ಉದ್ಘಾಟನೆ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಿತು.

Advertisement

ಜಿ.ಪಂ.ನ ಉಪ ಕಾರ್ಯದರ್ಶಿ ಎಂ.ವಿ. ನಾಯಕ್‌ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವನ್ನು ಕ್ರೀಡಾಳುಗಳು ಸಮಾನವಾಗಿ ಸ್ವೀಕರಿಸುತ್ತಾರೆ. ಆದರೆ ಅದರಲ್ಲಿ ಭಾಗವಹಿಸುವಿಕೆ ಮುಖ್ಯ. ಅಲ್ಲದೇ ಈ ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳ ಕಣ್ಣಲ್ಲಿ ಕ್ರೀಡಾಸ್ಫೂರ್ತಿಯು ಕಾಣಿಸುತ್ತಿದ್ದು, ಗೆಲುವನ್ನು ಪಡೆದುಕೊಳ್ಳಿರಿ ಎಂದು ಶುಭ ಹಾರೈಸಿದರು.

ಪರಿಶ್ರಮದಿಂದ ಯಶಸ್ಸು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್‌ ಡಿ’ಸೋಜಾ ಮಾತನಾಡಿ, ಪರಿಶ್ರಮದಿಂದ ಯಶಸ್ಸನ್ನು ಪಡೆಯುವುದು ಸಾಧ್ಯವಿದೆ. ವಿದ್ಯಾರ್ಥಿಗಳು ದೈಹಿಕ, ಮಾನಸಿಕವಾಗಿ ಸದೃಢವಾಗಿರಬೇಕು ಎಂದು ಹೇಳಿದರು.

ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಈ ಪಂದ್ಯಾಟವು ನಡೆದಿದ್ದು, ಒಟ್ಟು 26 ತಂಡಗಳು ಭಾಗವಹಿಸಿರುತ್ತವೆ. ಪಂದ್ಯಾಟದ ವಿಜೇತರಿಗೆ ಟ್ರೋಫಿಯ ಜತೆಗೆ ನಗದನ್ನು ನೀಡಲಾಗುವುದು ಎಂದು ಕ್ರೀಡಾಧಿಕಾರಿ ಲಿಲ್ಲಿ ಪಾಯಸ್‌ ತಿಳಿಸಿದ್ದಾರೆ. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಕರು ಮತ್ತು ತರಬೇತುದಾರರು ಮೊದಲಾದವರು ಉಪಸ್ಥಿತರಿದ್ದರು.

ಸಮ್ಮಾನ
ರಾಷ್ಟ್ರಮಟ್ಟದ ನೆಟ್‌ಬಾಲ್‌ ಆಟಗಾರ ನಿತಿನ್‌ ಅವರನ್ನು ಸಮ್ಮಾನಿಸಲಾಯಿತು. ನಿತಿನ್‌ ದ.ಕ. ಜಿಲ್ಲೆಯ ವಿಟ್ಲದ ನಿವಾಸಿಯಾಗಿದ್ದು ಜನಾರ್ದನ ಪೂಜಾರಿ ಮತ್ತು ಚಂದ್ರಾವತಿ ದಂಪತಿ ಪುತ್ರ. ಅವರು 9ನೇ ತರಗತಿಯಲ್ಲಿರುವಾಗಲೇ ಹೈಸ್ಕೂಲ್‌ ವಿಭಾಗದಲ್ಲಿ 1 ಬಾರಿ, ಪಿಯುಸಿ ವಿಭಾಗದಲ್ಲಿ 6 ಬಾರಿ, ತದನಂತರ 17 ಬಾರಿ ರಾಷ್ಟ್ರವನ್ನು ಪ್ರತಿನಿಧಿಸಿದ್ದರು. ಅದರಲ್ಲಿ 2 ಚಿನ್ನದ ಪದಕ, 2 ಬೆಳ್ಳಿಯ ಪದಕ ಹಾಗೂ 4 ಕಂಚಿನ ಪದಕ ಪಡೆದಿದ್ದಾರೆ. ಅಲ್ಲದೇ ಭಾರತ ತಂಡದ ಉಪನಾಯಕನಾಗಿ ಏಷ್ಯನ್‌ ಗೇಮ್ಸ್‌ನಲ್ಲಿ ಪಂದ್ಯವೊಂದರಲ್ಲಿ ತಂಡದ 51 ಗೋಲ್‌ಗ‌ಳಲ್ಲಿ 40 ಗೋಲ್‌ಗ‌ಳನ್ನು ವೈಯಕ್ತಿಕವಾಗಿ ಗಳಿಸಿ ಭಾರತ ತಂಡ ಚಿನ್ನದ ಪದಕ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.

Advertisement

ಪ್ರಚಾರ ಸಿಕ್ಕಿರುವುದು ಸಂತಸ
ಪ್ರಾರಂಭಿಕ ಹಂತದಲ್ಲಿ ನೆಟ್‌ಬಾಲ್‌ ಗೆ ಜಿಲ್ಲೆಯಲ್ಲಿ ಪ್ರೋತ್ಸಾಹ ಸಿಗದಿದ್ದರೂ 10 ವರ್ಷದ ಪರಿಶ್ರಮದ ಅನಂತರ ಈಗ ಈ ಕ್ರೀಡೆಗೆ ಕರಾವಳಿ ಉತ್ಸವದ ಮುಖಾಂತರ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು ಸಂತಸ ತಂದಿರುತ್ತದೆ.
ಪ್ರೇಮನಾಥ ಶೆಟ್ಟಿ ,
   ಪದವಿಪೂರ್ವ ಕಾಲೇಜಿನ ಕ್ರೀಡಾ ಸಂಯೋಜಕ

Advertisement

Udayavani is now on Telegram. Click here to join our channel and stay updated with the latest news.

Next